“ನಾನೇನಾದರೂ ಹೀರೋ ಆದರೆ, ನೀನು ನಾಯಕಿ ಆಗ್ತಿಯ ಅಂದಿದ್ದರು. ನಾನು ತಮಾಷೆಗೆ ಹೇಳ್ತಾರೆ ಅಂದುಕೊಂಡು ಆಯ್ತು ಅಂದಿದ್ದೆ. ಒಂದು ದಿನ ಫೋನ್ ಕಾಲ್ ಬಂತು. ಹೋದೆ ಕಥೆ ಕೇಳಿದೆ, ನಾಯಕಿ ನೀನೇ ಅಂದರು. ನಾನೂ ಡನ್ ಅಂದೆ. ಹಾಗೆ ಮಾಡಿದ ಚಿತ್ರ ಈಗ ಮುಗಿದು, ಬಿಡುಗಡೆಗೆ ರೆಡಿಯಾಗಿದೆ …’
ಹೀಗೆ ಹೇಳಿ ಖುಷಿಗೊಂಡರು ನಾಯಕಿ ಮಂಜುಳಾ ಗಂಗಪ್ಪ. ಅವರು ಹೇಳಿಕೊಂಡಿದ್ದು, “ನಾನು ಲವ್ವರ್ ಆಫ್ ಜಾನು’ ಚಿತ್ರದ ಬಗ್ಗೆ. ಇದು ಸಂಪೂರ್ಣ ಹೊಸಬರ ಚಿತ್ರ. ಫೆಬ್ರವರಿ 9ರಂದು ತೆರೆಗೆ ಬರಲು ಸಜ್ಜಾಗಿದೆ ಚಿತ್ರತಂಡ. ಅಂದು ಟ್ರೇಲರ್ ತೋರಿಸುವ ಮೂಲಕ ಪತ್ರಕರ್ತರ ಜತೆ ಮಾತುಕತೆಗೆ ಕುಳಿತಿತ್ತು.
ಈ ಚಿತ್ರದ ಮೂಲಕ ನಾಯಕಿಯಾಗಿರುವ ಮಂಜುಳಾ ಗಂಗಪ್ಪ, ಅಂದು ಖುಷಿಯ ಮೂಡ್‌ನಲ್ಲಿದ್ದರು. ಅದೇ ಖುಷಿಯಲ್ಲಿ ಹೇಳಿಕೊಂಡಿದ್ದಿಷ್ಟು. “ನಾನಿಲ್ಲಿ ಯಾರಾದ್ರೂ ಮಾತಾಡಿಸಿದರೆ ಸಾಕು ಅವರ ಮೇಲೆ ರೇಗುವಂತಹ ಹುಡುಗಿಯ ಪಾತ್ರ ಮಾಡಿದ್ದೇನೆ. ಒಂದರ್ಥದಲ್ಲಿ ಯಾವಾಗಲೂ ಹುರ್ರ ಅನ್ನೋ ಹುಡುಗಿ. ಆಮೇಲೆ ನಿರ್ದೇಶಕರು ಕರುಣೆ ತೋರಿಸಿ, ನಗುವ ಹುಡುಗಿಯನ್ನಾಗಿಸಿ, ಲವ್ ಮಾಡುವಂತೆಯೂ ಮಾಡಿದ್ದಾರೆ. ನನಗೆ ಸಿಕ್ಕ ಒಳ್ಳೆಯ ಚಿತ್ರವಿದು. ನಾನು ಮತ್ತು ಹೀರೋ ವಿಶಾಲ್ “ಪ್ರಿಯದರ್ಶಿನಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೆವು. ಆ ಸಮಯದಲ್ಲಿ ವಿಶಾಲ್, ನಾನೇನಾದರೂ ಹೀರೋ ಆದರೆ, ನೀನು ನಾಯಕಿ ಆಗ್ತಿàಯ’ ಅಂದಿದ್ದರು. ತಮಾಷೆಗೆ ಹೇಳ್ತಾರೆ ಅಂದುಕೊಂಡೆ. ಒಮ್ಮೆ ಕರೆದು, ಕಥೆ ಕೇಳಿಸಿ ನೀನೇ ನಾಯಕಿ ಅಂದಾಗ, ಖುಷಿಯಾಯ್ತು. ಒಂದೊಳ್ಳೆಯ ಚಿತ್ರ ಇದಾಗಲಿದೆ’ ಅಂದರು ಮಂಜುಳಾ.
ನಿರ್ದೇಶಕ ಸುರೇಶ್ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. “ಗೊಂಬೆಗಳ ಲವ್’ ಮತ್ತು “ದಾದಾ ಈಸ್ ಬ್ಯಾಕ್’ ಚಿತ್ರಗಳಿಗೆ ಕೆಲಸ ಮಾಡಿದ್ದೇ ಅನುಭವ. ಈಗ “ನಾನು ಲವ್ವರ್ ಆಫ್ ಜಾನು’ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. “ಒಂದು ಚಿತ್ರ ಸುದ್ದಿಯಾಗೋದು ಮೊದಲು ಹಾಡುಗಳಿಂದ ಈಗಾಗಲೇ ಹಾಡುಗಳಿಗೆ ಮೆಚ್ಚುಗೆ ಸಿಕ್ಕಿದೆ. ಸಿನಿಮಾಗೂ ಆ ಮೆಚ್ಚುಗೆ ಸಿಗುವ ನಂಬಿಕೆ ಇದೆ. ಇದೊಂದು ಕ್ರಾಂತಿ ಮತ್ತು ಪ್ರೀತಿಗೆ ಸಂಬಂಧಿಸಿದ ಚಿತ್ರ. ಆದರೆ, ಕಥೆಯ ಗುಟ್ಟು ಹೇಳಲ್ಲ. ಅದನ್ನು ಚಿತ್ರದಲ್ಲೇ ನೋಡಬೇಕು ಎಂದು ಸಸ್ಪೆನ್ಸ್ ಇಟ್ಟರು ಸುರೇಶ್.
ಹಾಗಾದರೆ, ಈ “ನಾನು ಲವ್ವರ್ ಜಾನು’ ಚಿತ್ರ ಯಾವ ಜಾತಿಗೆ ಸೇರಿದ್ದು? “ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಪ್ರೀತಿ ಕುರಿತಾದ ಚಿತ್ರ. 16 ರಿಂದ 60 ವರ್ಷದವರು ಕುಳಿತು ನೋಡಬಹುದಾದ ಅಪ್ಪಟ ಭಾವನಾತ್ಮಕ ಸಂಬಂಧಗಳ ಸುತ್ತ ಸಾಗುವ ಚಿತ್ರ. ಎಲ್ಲಾ ಚಿತ್ರಗಳಲ್ಲೂ ಪ್ರೀತಿ ಕಥೆಗಳು ಸಹಜ. ಆದರೆ, ಇಲ್ಲೂ ಪ್ರೀತಿಯ ಕಥೆ ಇದ್ದರೂ, ಅದಕ್ಕೊಂದು ಹೊಸ ಸ್ಪರ್ಶ ಕೊಡಲಾಗಿದೆ ಬೆಂಗಳೂರು, ಮಂಗಳೂರು, ತುಮಕೂರು ಮತ್ತು ಚಿಕ್ಕಮಗಳೂರು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ವಿವರ ಕೊಟ್ಟರು. ನಾಯಕ ವಿಶಾಲ್‌ಗೆ ಇದು ಮೊದಲ ಚಿತ್ರವಂತೆ. ಅವರಿಲ್ಲಿ ಪಕ್ಕದ್ಮನೆ ಹುಡುಗನ ಪಾತ್ರ ಸಿಕ್ಕಿದೆ. ತುಂಬಾನೇ ತೂಕವಿರುವಂತಹ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ಹತ್ತು ವರ್ಷ ಸಿನಿಮಾ ರಂಗದಲ್ಲಿದ್ದೇನೆ. ಕೆಲ ಸಣ್ಣಪುಟ್ಟ ಪಾತ್ರ ಮಾಡಿದ್ದೆ. ನಿರ್ದೇಶಕರು ಇಲ್ಲಿ ಹೀರೋ ಮಾಡಿದ್ದಾರೆ. ಖುಷಿ ಮತ್ತು ಭಯ ಇದೆ. ನಿಮ್ಮ ಹಾರೈಕೆ ಇರಲಿ ಅಂದರು ಅವರು.
ಚಿತ್ರಕ್ಕೆ ಚಂದ್ರು, ರವಿ, ವಿಷ್ಣು ಭಂಡಾರಿ ನಿರ್ಮಾಪಕರು. ಅವರಿಗೆ ಒಳ್ಳೆಯ ಚಿತ್ರ ಮಾಡಿರುವ ತೃಪ್ತಿ. ಇವರೆಲ್ಲರೂ ಎರಡೆರೆಡು ಮಾತು ಹೇಳುವ ಹೊತ್ತಿಗೆ ಮಾತುಕತೆಗೆ ಬ್ರೇಕ್ ಬಿತ್ತು.