ಹೆಣ್ಣೊಬ್ಬಳು ಸ್ವಾವಲಂಭಿಯಾಗಿ ಮತ್ತು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕಾದರೆ, ಆಕೆ ಪ್ರತಿ ಹೆಜ್ಜೆಯಲ್ಲೂ ಹತ್ತಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಂದುಕೊಂಡಿರುವುದನ್ನು ಸಾಧಿಸಲು ಹೊರಟಾಗ ಅನೇಕ ಬಾರಿ ಜೊತೆಗಿರುವ ವ್ಯಕ್ತಿ, ವಿಷಯಗಳೇ ಆಕೆಗೆ ಮಾರಕವಾಗುತ್ತಾರೆ. ಆಕೆಯ ಆತ್ಮವಿಶ್ವಾಸವನ್ನು ಕುಗ್ಗಿಸುವ, ತೇಜೋವಧೆ ಮಾಡುವ ಕೆಲಸದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಜೊತೆಗಿರುವವರೂ ಭಾಗಿಯಾಗುತ್ತಾರೆ! ಇಂಥದ್ದೇ ಸ್ತ್ರೀ ಸಂವೇದನೆಯ ಸೂಕ್ಷ್ಮ ಅಂಶಗಳನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “ನಾನು ಕುಸುಮ’
ಕನ್ನಡದ ಹಿರಿಯ ಲೇಖಕ ಬೆಸಗರಹಳ್ಳಿ ರಾಮಣ್ಣ ಅವರ “ಮಗಳು’ ಕಥೆಯನ್ನು ಅಧರಿಸಿ ತೆರೆಗೆ ಬಂದಿರುವ ಈ ಸಿನಿಮಾದಲ್ಲಿ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಪ್ರತಿಕ್ಷಣ ಹವಣಿಸು ಹೆಣ್ಣೊಬ್ಬಳ ಆಂತರ್ಯದ ಒತ್ತಾಸೆಯಿದೆ. ವ್ಯವಸ್ಥಿತವಾಗಿ ಆಕೆಯ ಆತ್ಮವಿಶ್ವಾಸವನ್ನು ಕುಸಿಯುವಂತೆ ಮಾಡುವ ಸಾಮಾಜಿಕ ಮನಸ್ಥಿತಿಯ ಚಿತ್ರಣವಿದೆ.
ತಂದೆಯನ್ನು ಕಳೆದುಕೊಂಡ ಕುಸುಮ ಎಂಬ ಅನಾಥ ಹೆಣ್ಣು ಮಗಳು ತನಗೆ ಸಿಕ್ಕ ನರ್ಸ್ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವಾಗ ಏನೆಲ್ಲ ಸವಾಲು, ಸನ್ನಿವೇಶಗಳನ್ನು ಎದುರಿಸುತ್ತಾಳೆ ಎಂಬುದನ್ನು “ನಾನು ಕುಸುಮ’ ಸಿನಿಮಾದ ಮೂಲಕ ತೆರೆಮೇಲೆ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಂ ನಿರ್ಮಾಪಕ ಕೃಷ್ಣೇಗೌಡ.
ಇನ್ನು ಮೊದಲೇ ಹೇಳಿದಂತೆ, ಕಥಾ ವಸ್ತು ಮತ್ತು ನಿರೂಪಣೆ ಎರಡೂ ಅಷ್ಟೇ ಗಂಭೀರವಾಗಿ ರುವುದರಿಂದ, ಇಲ್ಲಿ ವಿಷಯಾಧರಿತ ಯೋಚನೆ ಗಷ್ಟೇ ಕೆಲಸ. ಹಾಗಾಗಿ ಮಾಮೂಲಿ ಕಮರ್ಷಿಯಲ್ ಸಿನಿಮಾಗಳಲ್ಲಿ ಇರಬಹುದಾದಂತಹ ಅಲ್ಲಲ್ಲಿ ಹಾಡು, ನೃತ್ಯ, ಕಾಮಿಡಿ, ಅತಿಯಾದ ಮಾತು, ಅಬ್ಬರದ ಹಿನ್ನೆಲೆ ಸಂಗೀತ ಯಾವುದಕ್ಕೂ “ನಾನು ಕುಸುಮ’ ಸಿನಿಮಾದಲ್ಲಿ ಅವಕಾಶವಿಲ್ಲ.
ಸಿನಿಮಾದಲ್ಲಿ ಬಳಸಿಕೊಳ್ಳಲಾಗಿರುವ ಸಿಂಕ್ ಸೌಂಡ್, ಲೊಕೇಶನ್ಸ್, ಕಲಾವಿದರ ಅಭಿನಯ ಹೀಗೆ ಯಾವುದರಲ್ಲೂ ವೈಭವೀಕರಣವಿಲ್ಲದಿರುವುದರಿಂದ, “ನಾನು ಕುಸುಮ’ ಸಹಜ ಸುಂದರ ಸಿನಿಮಾವಾಗಿ ಗಂಭೀರ ಚಿಂತನೆಯ ನೋಡುಗರಿಗೆ ಇಷ್ಟವಾಗುತ್ತದೆ.
ಜಿ.ಎಸ್. ಕಾರ್ತಿಕ ಸುಧನ್