ಈ ಹಿಂದೆ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ಹೀರೋ ಆಗುತ್ತಿರುವ ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆಗ ಆ ಚಿತ್ರಕ್ಕೆ ನಾಮಕರಣ ಮಾಡಿರಲಿಲ್ಲ. ಈಗ ವಿಕ್ರಮ್ ಅಭಿನಯದ ಚಿತ್ರಕ್ಕೆ ಹೆಸರು ಫಿಕ್ಸ್ ಆಗಿದೆ.
ನಾಗಶೇಖರ್ ಆ ಚಿತ್ರಕ್ಕೆ “ನಾನು ಅವಳು’ ಎಂದು ಹೆಸರಿಡಲಾಗಿದೆ. ಇನ್ನೊಂದು ವಿಶೇಷವೆಂದರೆ,
ಇದು ನಾಲ್ಕು ಭಾಷೆಯಲ್ಲಿ ತಯಾರಾಗುತ್ತಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ
ಸಿದ್ಧವಾಗುತ್ತಿರುವ ಚಿತ್ರವನ್ನು ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ತಮಿಳಿನಲ್ಲಿ “ಅವಳುಂ ನಾನುಂ
ಅಲೆಯುಂ ಕಡಲಂ’ ಎಂದು ಹೆಸರಿಟ್ಟರೆ, ತೆಲುಗಿನಲ್ಲಿ “ಅಪ್ಪುಡಪ್ಪುಡು’ ಎಂದು ನಾಮಕರಣ ಮಾಡಲಾಗಿದೆ.
ಮಲಯಾಳಂ ಭಾಷೆಯಲ್ಲಿ ರೆಡಿಯಾಗುವ ಚಿತ್ರಕ್ಕೆ “ನಾನುಂ ಅವಳುಂ’ ಎಂಬ ಹೆಸರಿಡಲಾಗಿದೆ.
ಇನ್ನು, ಈ ಚಿತ್ರಕ್ಕೆ ಅಕ್ಷರ ಹಾಸನ್ ನಾಯಕಿ ಆಗಲಿದ್ದಾರೆ ಎಂಬ ಮಾತಿತ್ತು. ಆದರೆ, ಆ ಮಾತು ಈಗಲೂ ಮಾತುಕತೆಯ ಹಂತದಲ್ಲೇ ಇದೆ. ಮುಂದಿನ ವಾರದ ಹೊತ್ತಿಗೆ ಬಹುಶಃ ಯಾರು ನಾಯಕಿ ಆಗಲಿದ್ದಾರೆ ಎಂಬುದನ್ನು ಹೇಳುವುದಾಗಿ ನಾಗಶೇಖರ್ ವಿವರಿಸುತ್ತಾರೆ. ಅಂದಹಾಗೆ, ಇದೊಂದು ರೊಮ್ಯಾಂಟಿಕ್ ಮ್ಯೂಸಿಕಲ್ ಲವ್‌ಸ್ಟೋರಿ ಎನ್ನುವ ನಾಗಶೇಖರ್, “ಇಲ್ಲಿ ಹೊಸತನದ ನಿರೂಪಣೆಯೊಂದಿಗೆ, ಹೊಸತು ಎನಿಸುವ ಅಂಶಗಳ ಮೂಲಕ ಯೂತ್ಸ್ಗೆ ಇಷ್ಟವಾಗುವಂತಹ ವಿಷಯಗಳನ್ನು ಇಲ್ಲಿ ಹೇಳುತ್ತಿದ್ದೇನೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.
ಈ ಮೂಲಕ ಅವರು ತಮಿಳು, ತೆಲುಗು ಭಾಷೆಗೂ ಪರಿಚಯವಾಗುತ್ತಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ಬರೆಯುವ ಜವಾಬ್ದಾರಿ ನನ್ನದಾದರೆ, “ಭರ್ಜರಿ’ ಚೇತನ್‌ಕುಮಾರ್ ಸಂಭಾಷಣೆ ಬರೆಯುತ್ತಿದ್ದಾರೆ’ ಎಂದು ಹೇಳುತ್ತಾರೆ ನಾಗಶೇಖರ್.
ಮೊದಲ ಹಂತದ ಚಿತ್ರೀಕರಣವನ್ನು ಸುಮಾರು 50 ದಿನಗಳ ಕಾಲ ಕರ್ನಾಟಕ ಮತ್ತು ತಮಿಳು ನಾಡು ಸುತ್ತಮುತ್ತ ನಡೆಸಲಾಗುವುದು. ಎರಡನೇ ಹಂತದ ಚಿತ್ರೀಕರಣ ಸ್ಕಾಟ್‌ಲೆಂಡ್, ಇಂಗ್ಲೆಂಡ್ ಮತ್ತು ಐರೆಲಂಡ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ತಮಿಳಿನ ಶರತ್‌ಕುಮಾರ್, ನಾಜರ್, ಸುಹಾಸಿನಿ ಮಣಿರತ್ನಂ, ಕನ್ನಡದ ಸಾಧು ಕೋಕಿಲ, ಚಿಕ್ಕಣ್ಣ, ತೆಲುಗಿನ ಅಜಯ್ ಮತ್ತು ಸಪ್ತಗಿರಿ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಆಗಸ್ಟ್‌ನಲ್ಲಿ ಫೋಟೋ ಶೂಟ್ ನಡೆಸಿ, ಸೆಪ್ಟೆಂಬರ್‌ನಿಂದ ಚಿತ್ರಕ್ಕೆ ಚಾಲನೆ ದೊರೆಯಲಿದೆ ಎನ್ನುತ್ತಾರೆ ನಾಗಶೇಖರ್.