Advertisement

ಪೊಲೀಸ್‌ ಫೋನ್‌ ಇನ್‌

12:35 PM Dec 09, 2017 | Team Udayavani |

ಪಾಂಡೇಶ್ವರ: ನಂತೂರು ಜಂಕ್ಷನ್‌ ನಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಅಪಘಾತ ಮತ್ತು ಅಲ್ಲಿನ ಅವೈಜ್ಞಾನಿಕ ವೃತ್ತದ ಬಗ್ಗೆ ಉದಯವಾಣಿ ‘ಸುದಿನ’ ಪ್ರಕಟಿಸಿದ ವರದಿಯಿಂದ ಪ್ರೇರಿತರಾದ ಸಾರ್ವಜನಿಕರು, ಶುಕ್ರವಾರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಜರಗಿದ ಫೋನ್‌ ಇನ್‌ ಕಾರ್ಯಕ್ರಮದಲ್ಲೂ ಈ ವೃತ್ತದ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿದರು.

Advertisement

ಕರೆಗಳನ್ನು ಸ್ವೀಕರಿಸಿದ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅವರು ನಂತೂರು ವೃತ್ತದ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಎಂಜಿನಿಯರ್‌ ಜತೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ನಗರದ ಸಂಚಾರ ವ್ಯವಸ್ಥೆ ಬಗ್ಗೆ ಚರ್ಚಿಸಲು ಡಿ. 12ರಂದು ಸಂಬಂಧಪಟ್ಟ ಎಲ್ಲರನ್ನೂ ಸೇರಿಸಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

 ಸೀಟು ಸಮಸ್ಯೆ
ಬಸ್ಸುಗಳಲ್ಲಿ ಮಹಿಳಾ ಮತ್ತು ಹಿರಿಯ ನಾಗರಿಕರ ಮೀಸಲು ಸೀಟುಗಳಲ್ಲಿ ಇತರರು ಕುಳಿತು ಪ್ರಯಾಣಿಸುವ ಬಗ್ಗೆ ಮಹಿಳೆಯೋರ್ವರು ಕರೆ ಮಾಡಿ, ಸೀಟು ಬಿಟ್ಟುಕೊಡುವಂತೆ ಕೇಳಿಕೊಂಡರೆ ಉಡಾಫೆಯಿಂದ ವರ್ತಿಸುತ್ತಾರೆ. ಅವರ ಜತೆ ಇತರ ಪ್ರಯಾಣಿಕರು ಸೇರಿಕೊಂಡು ಅಸಹ್ಯವಾಗಿ ಹಾಗೂ ಅವಮಾನಕಾರಿಯಾಗಿ ಮಾತನಾಡುತ್ತಾರೆ ಎಂದವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತರು ಮೀಸಲು ಸೀಟುಗಳನ್ನು ಸಂಬಂಧಪಟ್ಟ ಅರ್ಹ ಪ್ರಯಾಣಿಕರಿಗೆ ಒದಗಿಸುವುದು ಬಸ್‌ ಕಂಡಕ್ಟರ್‌ ಜವಾಬ್ದಾರಿಯಾಗಿದ್ದು, ಮಹಿಳೆಯರು/ ಹಿರಿಯ ನಾಗರಿಕರು ನಿರ್ವಾಹಕನಿಗೆ ತಿಳಿಸಬೇಕು. ಕಂಡಕ್ಟರ್‌ ಕೇಳಿಕೊಂಡಾಗಲೂ ಸೀಟು ಬಿಟ್ಟು ಕೊಡದಿದ್ದರೆ ಬಸ್ಸನ್ನು ಅಲ್ಲಿಯೇ ನಿಲ್ಲಿಸಿ ಪೊಲೀಸರಿಗೆ ತಿಳಿಸಬೇಕು. ಸಾಮಾನ್ಯ ವಾಗಿ ಪೊಲೀಸರು ಐದು ನಿಮಿಷದೊಳಗೆ ಸ್ಥಳಕ್ಕೆ ತಲಪುತ್ತಾರೆ ಎಂದರು.

ಅತ್ರೆಬೈಲ್‌ಗೆ ಬಸ್ಸು ಹೋಗುತ್ತಿಲ್ಲ
ರೂಟ್‌ ನಂಬ್ರ 17 ‘ಶಬರಿ’ ಸಿಟಿ ಬಸ್‌ ಅತ್ರೆಬೈಲ್‌ಗೆ ಹೋಗದೆ ಟ್ರಿಪ್‌ ಕಟ್‌ ಮಾಡುತ್ತಿದೆ ಎಂಬುದಾಗಿ ಹಲವರು ದೂರು ನೀಡಿದರು. ಆ ಬಸ್ಸಿನ ಪರವಾನಿಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್‌ ತಿಳಿಸಿದರು.

Advertisement

ಕಾವೂರು- ಬೋಂದೆಲ್‌ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ರಸ್ತೆಗೆ ಸಿಗ್ನಲ್‌ ಲೈಟ್‌ ವ್ಯವಸ್ಥೆ ಮಾಡಬೇಕು ಎಂಬ ಸಲಹೆ ಕೇಳಿಬಂದಿದ್ದು, ಸಿಗ್ನಲ್‌ ಲೈಟ್‌ ಹಾಕುವ ಬಗ್ಗೆ ಸಾಧ್ಯಾಸಾಧ್ಯತೆ ವರದಿ ತಯಾರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಮಿಷನರ್‌ ಹೇಳಿದರು.

ಕುಪ್ಪೆಪದವಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಬೆಳ್ತಂಗಡಿಯಲ್ಲಿ ಗಾಂಜಾ ಮಾರಾಟ, ಮೂಡಬಿದಿರೆಯಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟದ ಬಗ್ಗೆ ದೂರುಗಳು ಬಂದವು. ಮಂಗಳಾದೇವಿ ಮತ್ತು ಮಹಾಕಾಳಿಪಡ್ಪು ರೈಲ್ವೇ ಗೇಟ್‌ ಬಳಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರಿಗೂ, ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಕಮಿಷನರ್‌ ಉತ್ತರಿಸಿದರು.

ಪಿವಿಎಸ್‌ ಜಂಕ್ಷನ್‌ ಮತ್ತು ಬಂಟ್ಸ್‌ ಹಾಸ್ಟೆಲ್‌ ವೃತ್ತ ನಡುವಣ ರಸ್ತೆಯಲ್ಲಿ ದೂರದ ಊರುಗಳಿಗೆ (ಬೆಂಗಳೂರು, ಮುಂಬಯಿ, ಬೆಳಗಾವಿ ಇತ್ಯಾದಿ) ಹೋಗುವ ಖಾಸಗಿ ಬಸ್ಸುಗಳನ್ನು ಬಹಳಷ್ಟು ಹೊತ್ತು ನಿಲ್ಲಿಸುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂಬ ದೂರಿಗೆ, ತಪಾಸಣೆ ನಡೆಸಿ ಕ್ರಮ ಜರಗಿಸುವಂತೆ ಟ್ರಾಫಿಕ್‌ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಯಿತು. 

ಕದ್ರಿ ಪರಿಸರದಲ್ಲಿ ಇಡೀ ರಾತ್ರಿ ಯಕ್ಷಗಾನದಿಂದಾಗಿ ಶಬ್ದಮಾಲಿನ್ಯ ಉಂಟಾಗಿ ಪರಿಸರದವರ ನಿದ್ರೆಗೆ ಅಡ್ಡಿಯಾಗುತ್ತಿದೆ ಎಂದೊಬ್ಬರು ಆರೋಪಿಸಿದರು. ಮೈಕ್‌ನ ಶಬ್ದವನ್ನು ಕಡಿಮೆ ಮಾಡುವಂತೆ ಹಾಗೂ ರಾತ್ರಿ 10ರ ಬಳಿಕ ಒಳಾಂಗಣದಲ್ಲಿ ಮಾತ್ರ ಯಕ್ಷಗಾನದಂತಹ ಕಾರ್ಯಕ್ರಮ ನಡೆಸುವಂತೆ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಲಾಗುವುದು ಎಂದು ಕಮಿಷನರ್‌ ತಿಳಿಸಿದರು.

ಉರ್ವ ಮಾರ್ಕೆಟ್‌- ಅಶೋಕನಗರ ರಸ್ತೆಯ ಎರಡು ಹಾಲ್‌ಗ‌ಳ ಬಳಿ ರಸ್ತೆಯ ಎರಡೂ ಕಡೆ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಇತರ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ರಸ್ತೆಯ ಒಂದೇ ಕಡೆ ಪಾರ್ಕ್‌ ಮಾಡುವಂತೆ ಸಲಹೆ ಕೇಳಿ ಬಂತು. ಈ ಕುರಿತು ಹಾಲ್‌ಗ‌ಳ ಮಾಲಕರಿಗೆ ನೋಟಿಸ್‌ ನೀಡಲಾಗುವುದು ಹಾಗೂ ಪಾಲಿಕೆಗೆ ಪತ್ರ ಬರೆಯಲಾಗುವುದು ಎಂದು ಕಮಿಷನರ್‌ ವಿವರಿಸಿದರು.

ಕೆಲವು ಬಸ್‌ ಚಾಲಕರು/ ಕಂಡಕ್ಟರ್‌ ಗಳಲ್ಲಿ ಅಧಿಕೃತ ಬ್ಯಾಡ್ಜ್ ಇರುವುದಿಲ್ಲ ಎಂಬ ದೂರಿಗೆ, ಈ ಬಗ್ಗೆ ವಿಶೇಷ ತಪಾಸಣೆ ನಡೆಸಲಾಗುವುದು ಎಂದರು.

ಟೇಪ್‌ ರೆಕಾರ್ಡರ್‌: ನೋಟಿಸ್‌ ಸುರತ್ಕಲ್‌ ಕೃಷ್ಣಾಪುರ ಪ್ರದೇಶಗಳಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಟೇಪ್‌ ರೆಕಾರ್ಡರ್‌ ಹಾವಳಿ ಹೆಚ್ಚುತ್ತಿದೆ ಎಂಬ ದೂರೂ ಕೇಳಿ ಬಂತು. ಅದಕ್ಕೆ ಸ್ಪಂದಿಸಿದ ದಕ್ಷಿಣ ಕನ್ನಡ ಬಸ್‌ ಮಾಲಕರ ಸಂಘದ ಉಪಾಧ್ಯಕ್ಷ ಬಿ.ಪಿ. ದಿವಾಕರ್‌, ಟೇಪ್‌ ರೆಕಾರ್ಡರ್‌ ಅಳವಡಿಸದಂತೆ ಎಲ್ಲ ಬಸ್‌ ಮಾಲಕರು ಮತ್ತು ನೌಕರರಿಗೆ ನೋಟಿಸ್‌ ಕಳುಹಿಸಲಾಗಿದೆ ಎಂದರು.

ಇದು 64ನೇ ಕಾರ್ಯಕ್ರಮವಾಗಿದ್ದು, ಒಟ್ಟು 25 ಕರೆಗಳು ಬಂದವು. ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ದಕ್ಷಿಣ ಕನ್ನಡ ಬಸ್‌ ಮಾಲಕರ ಸಂಘದ ಉಪಾಧ್ಯಕ್ಷ ಬಿ.ಪಿ. ದಿವಾಕರ್‌, ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌, ಎಸಿಪಿ ಮಂಜುನಾಥ ಶೆಟ್ಟಿ , ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ಸುರೇಶ್‌ ಕುಮಾರ್‌, ಮಂಜುನಾಥ್‌, ಮೋಹನ್‌ ಕೊಟ್ಟಾರಿ, ಮಹಮದ್‌ ಶರೀಫ್‌, ಎಎಸ್‌ಐ ಯೂಸುಫ್‌, ಹೆಡ್‌ಕಾನ್‌ಸ್ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next