Advertisement

ಗುಡ್ಡ ಕುಸಿತದ ಭೀತಿಯಲ್ಲಿರುವ ನಂತೂರು ವೃತ್ತ

10:37 PM Jan 25, 2020 | mahesh |

ಮಹಾನಗರ: ನಗರದ ಪ್ರಮುಖ ಜಂಕ್ಷನ್‌ಗಳ ಪೈಕಿ ಒಂದಾದ ನಂತೂರು ವೃತ್ತವು ಸದಾ ವಾಹನಗಳ ದಟ್ಟನೆಯಿರುವ ಪ್ರದೇಶ. ಇಲ್ಲಿ ದಿನನಿತ್ಯ ಬೈಕ್‌, ಕಾರು, ಬಸ್‌, ಲಾರಿಗಳಿಂದ ಹಿಡಿದು ದೊಡ್ಡ ಗಾತ್ರದ ಟ್ಯಾಂಕರ್‌, ಕಂಟೈನರ್‌, ಸಹಿತ ನೂರಾರು ವಾಹನಗಳು ಹಾದು ಹೋಗುತ್ತವೆ. ಹಾಗಾಗಿ, ಇಲ್ಲಿ ಚಾಲಕರು ಎಷ್ಟೇ ಜಾಗರೂಕತೆ ವಹಿಸಿದರೂ ಸಾಲದು. ಹೀಗಿರುವಾಗ, ನಂತೂರು ವೃತ್ತದ ಬಳಿ ಇರುವಂತಹ ಗುಡ್ಡವೊಂದು ವಾಹನ ಸವಾರರು ಮತ್ತು ಸಾರ್ವಜನಿಕರಲ್ಲಿ ಅಪಾಯಕ್ಕೆ ಎಡೆ ಮಾಡಿದೆ.

Advertisement

ನಂತೂರು ವೃತ್ತದಿಂದ ಪಂಪ್‌ವೆಲ್‌ಗೆ ತೆರಳುವ ರಾ.ಹೆ.ಯಲ್ಲಿ ಅಂದರೆ ನಂತೂರು ವೃತ್ತ ಸಮೀಪ ಇರುವಂತಹ ಒಂದು ಬದಿಯ ಗುಡ್ಡ ಈಗಾಗಲೇ ಸಣ್ಣ ಮಟ್ಟದಲ್ಲಿ ಜರಿದಿದ್ದು ಮಣ್ಣು ಬೀಳಲು ಪ್ರಾರಂಭಿಸಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ, ದೊಡ್ಡ ಪ್ರಮಾಣದಲ್ಲಿ ಮಣ್ಣು ಜರಿದು ವಾಹನಗಳ ಮೇಲೆ ಬೀಳುವ ಸಾಧ್ಯತೆ ಇದೆ. ಇದೇ ಪ್ರದೇಶದಲ್ಲಿ ಕೆಲವೊಂದು ಗೂಡಂಗಡಿಗಳಿದ್ದು, ಅವುಗಳು ಕೂಡ ಅಪಾಯ ಎದುರಿಸುತ್ತಿವೆ.

ಇನ್ನೂ, ಈ ಗುಡ್ಡದ ಮೇಲೆ ಅನೇಕ ಮರಗಳಿವೆ. ಮಣ್ಣು ಜರಿದು ಮರಗಳ ಬೇರು ಕಾಣುತ್ತಿವೆ. ಕೆಲ ಮರಗಳು ರಸ್ತೆಗೆ ಬಾಗಿಕೊಂಡಿವೆ. ಜೋರಾದ ಗಾಳಿಗೆ ಅಪಾಯ ತಂದೊಡ್ಡುವ ಪರಿಸ್ಥಿತಿ ಇದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಮಣ್ಣು ಜರಿದರೆ, ಮರಗಳು ರಸ್ತೆಗೆ ಬೀಳುವುದರಿಂದ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆ ಇದೆ.

ನಂತೂರು ವೃತ್ತ ಬಳಿಯ ಇದೇ ಪ್ರದೇಶದಲ್ಲಿ ಗುಡ್ಡದಿಂದ ಮಣ್ಣು ಜರಿದು ಮರವೊಂದು ಖಾಸಗಿ ಶಾಲಾ ವ್ಯಾನ್‌ ಮೇಲೆ ಉರುಳಿ ಬಿದ್ದ ಘಟನೆ ಕಳೆದ ವರ್ಷ ಅ. 14ರಂದು ಬೆಳಗ್ಗೆ ನಡೆದಿತ್ತು. ಅದೃಷ್ಟವಶಾತ್‌ ವ್ಯಾನ್‌ನಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದರು. ಶಾಲಾ ಬಸ್‌ ಮಾತ್ರವಲ್ಲದೆ ಒಂದು ಟ್ಯಾಂಕರ್‌ ಮತ್ತು ಪಿಕಪ್‌ ವಾಹನವು ಮರದಡಿ ಸಿಲುಕಿಕೊಂಡು, ಮೂರೂ ವಾಹನಗಳು ಜಖಂಗೊಂಡಿದ್ದವು.

ಇದೇ ವೇಳೆ ನಗರದ ಖಾಸಗಿ ಶಾಲೆಯ ಶಾಲಾ ವಾಹನದಲ್ಲಿ 17 ಮಂದಿ ಮಕ್ಕಳು ಇದ್ದರು. ಮರ ಬಿದ್ದಿದ್ದರಿಂದ ವ್ಯಾನ್‌ ಸ್ವಲ್ಪ ಜಖಂಗೊಂಡಿದ್ದು, ಅದರಲ್ಲಿದ್ದ ಎಲ್ಲ ಮಕ್ಕಳು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದರು. ಅಗ್ನಿಶಾಮಕ ದಳ ಮತ್ತು ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಮಾಹಿತಿ ನೀಡಿ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡರು. ಕೆಲವೇ ನಿಮಿಷದಲ್ಲಿ ಅಗ್ನಿ ಶಾಮಕ ಸೇವೆಯ ಸಿಬಂದಿ ಆಗಮಿಸಿ ರಕ್ಷಣೆ ಮತ್ತು ಮರ ತೆರವು ಕಾರ್ಯಾಚರಣೆ ನಡೆಸಿದ್ದರು.

Advertisement

ನಗರದ ಕೆಲವೆಡೆ ಇದೇ ಸಮಸ್ಯೆ
ಇದೇ ರೀತಿಯಲ್ಲಿ ರಸ್ತೆ ಬದಿ ಎತ್ತರದ ಗುಡ್ಡ ಪ್ರದೇಶ ಇರುವ ತಾಣಗಳು ಮಂಗಳೂರು ನಗರದ ಬಿಜೈ ಬಟ್ಟಗುಡ್ಡದ ಸರ್ಕ್ನೂಟ್‌ ಹೌಸ್‌ ಬಳಿ ಇದ್ದು, ಕಳೆದ ವರ್ಷ ಇದೇ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿತ್ತು. ಅನಂತರ ಮರಳು ತುಂಬಿಸಿದ ಗೋಣಿ ಚೀಲಗಳನ್ನು ಇಟ್ಟು ತಾತ್ಕಾಲಿಕ ಪರಿಹಾರವನ್ನು ಕಲ್ಪಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಸಮೀಪದ ಕೆ.ಸಿ. ರೋಡ್‌ನ‌ಲ್ಲಿಯೂ ಇದೇ ರೀತಿ ಅಪಾಯಕಾರಿಯಾದ ಎತ್ತರದ ಗುಡ್ಡ ಪ್ರದೇಶವಿದೆ. ರಸ್ತೆ ಬದಿ ಅಪಾಯಕಾರಿ ಮರಗಳು ಇರುವ ಬಗ್ಗೆ ಪೊಲೀಸ್‌ ಆಯುಕ್ತರು ನಡೆಸುವ ಫೋನ್‌ ಇನ್‌ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಂದ ಆಗಿಂದಾಗ್ಗೆ ದೂರುಗಳು ಬರುತ್ತಲೇ ಇದ್ದವು. ಆಯುಕ್ತರು ಈ ಬಗ್ಗೆ ಲಿಖೀತವಾಗಿ ನಗರ ಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಇಲಾಖೆಗೆ ಮಾಹಿತಿ
ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡದಿಂದ ಮಣ್ಣುಕುಸಿತವಾಗುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಬರುವುದರಿಂದ ಪಾಲಿಕೆಯಿಂದ ಈಗಾಗಲೇ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಈ ಬಗ್ಗೆ ಮತ್ತೂಮ್ಮೆ ಅಧಿಕಾರಿಗಳ ಗಮನಕ್ಕೆ ತರುತ್ತೇವೆ.
 - ಗುರುರಾಜ್‌ ಮರಳಿಹಳ್ಳಿ, ಪಾಲಿಕೆ ಕಾರ್ಯಪಾಲಕ ಅಭಿಯಂತರ

  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next