ದಾವಣಗೆರೆ: ನ್ಯಾನೋ ಲಿಕ್ವಿಡ್ ಯೂರಿಯಾ ರಸಗೊಬ್ಬರ ಮಾರುಕಟ್ಟೆಗೆ ಬಂದಿರುವ ಬೆನ್ನಲ್ಲೇ ನಗರದ ಬಾಪೂಜಿ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಚರಂಡಿಯ ಕೊಳಚೆ ನೀರನ್ನೇ ನ್ಯಾನೋ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಅತಿ ಕಡಿಮೆ ವೆಚ್ಚದ ಸಾಧನವೊಂದನ್ನು ಸಂಶೋಧನೆ ಮಾಡಿ ಗಮನ ಸೆಳೆದಿದ್ದಾರೆ.
ಪ್ಲಾಸ್ಮಾ ತಂತ್ರಜ್ಞಾನ ಬಳಸಿಕೊಂಡು ಚರಂಡಿ ನೀರಿನಿಂದ ದ್ರವರೂಪದ ಗೊಬ್ಬರ ಸಿದ್ಧಪಡಿಸುವ ಈ ಸಾಧನ ಪ್ರಾಥಮಿಕ ಹಂತದಲ್ಲಿ ಯಶಸ್ವಿಯಾಗಿದೆ. ಇದರ ಉಪಯೋಗದಿಂದ ರೈತರು ಅತಿ ಕಡಿಮೆ ವೆಚ್ಚದಲ್ಲಿ ನ್ಯಾನೋ ಸಾವಯವ ಗೊಬ್ಬರ ತಯಾರಿಸಿಕೊಳ್ಳಬಹುದಾಗಿದೆ. ಈ ತಂತ್ರಜ್ಞಾನ ಸಾವಯವ ಕೃಷಿಗೆ ಪೂರಕವಾಗುವ ಜತೆಗೆ ರಾಸಾಯನಿಕ ಗೊಬ್ಬರ, ಕೀಟನಾಶಕದಿಂದಾಗುವ ಮಣ್ಣು, ಜಲ ಸೇರಿದಂತೆ ಇತರ ಪರಿಸರ ಮಾಲಿನ್ಯ ತಡೆಯುವಲ್ಲಿ ಸಹಕಾರಿಯೂ ಆಗಿದೆ.
ದೇಶದಲ್ಲೇ ಮೊದಲು: ಚರಂಡಿ ನೀರನ್ನು ಬೇರೆ ಬೇರೆ ಉಪಯೋಗಗಳಿಗೆ ಬಳಸುವ ಬಗ್ಗೆ ಸಾಕಷ್ಟು ಸಂಶೋಧನೆಗಳು ಈಗಾಗಲೇ ನಡೆದಿವೆ. ಇದಕ್ಕಾಗಿ ಅಭಿವೃದ್ಧಿಪಡಿಸಿದ ಉಪಕರಣಗಳ ಬೆಲೆ ಕನಿಷ್ಟ ಒಂದೂವರೆಯಿಂದ ಎರಡು ಲಕ್ಷ ರೂ. ಆಗಿದೆ. ಆದರೆ ಚರಂಡಿಯಲ್ಲಿ ಹರಿಯುವ ಕೊಳಚೆ ನೀರನ್ನು ಸುಲಭವಾಗಿ ಅತಿ ಕಡಿಮೆ ವೆಚ್ಚದಲ್ಲಿ ಕೃಷಿಗೆ ಗೊಬ್ಬರವಾಗಿಸಿಕೊಳ್ಳುವ ಸಂಶೋಧನೆ ಅಷ್ಟಾಗಿ ನಡೆದಿಲ್ಲ. ಜಗತ್ತಿನ ಕೆಲವೇ ಕೆಲವು ದೇಶಗಳಲ್ಲಿ ಈ ರೀತಿಯ ಸಂಶೋಧನೆ ನಡೆದಿದೆಯಾದರೂ ರೈತರಿಗೆ ಕೈಗೆಟಕುವ ದರದಲ್ಲಿ ಅಂದರೆ ಅತಿ ಕಡಿಮೆ ವೆಚ್ಚದಲ್ಲಿ ಸಾಧನ ಕಂಡು ಹಿಡಿದಿರುವುದು ದೇಶದಲ್ಲೇ ಮೊದಲು ಎನ್ನುತ್ತಾರೆ ಸಂಶೋಧನೆಯ ಮಾರ್ಗದರ್ಶಕರು.
ಈ ತಂತ್ರಜ್ಞಾನದಲ್ಲಿ ವಿದ್ಯುತ್ ಬಳಕೆ ಮಾಡಿ ಚರಂಡಿ ನೀರಿಗೆ ಪ್ಲಾಸ್ಮಾ ಟ್ವೀಟ್‌ಮೆಂಟ್ ಮಾಡಲಾಗುತ್ತದೆ. ಅರ್ಧ ಲೀಟರ್ ಕೊಳಚೆ ನೀರಿನಿಂದ ಅರ್ಧದಷ್ಟು ಅಂದರೆ 250 ಎಂಎಲ್‌ನಷ್ಟು ಸಾವಯವ ನ್ಯಾನೋ ಗೊಬ್ಬರ ಪಡೆಯಬಹುದಾಗಿದೆ. 250 ಎಂಎಲ್ ಗೊಬ್ಬರ ಉತ್ಪಾದನೆಗೆ ಕೇವಲ ಎರಡ್ಮೂರು ರೂ.ಗಳಷ್ಟು ವಿದ್ಯುತ್ ವೆಚ್ಚ ಮಾತ್ರ ತಗಲುತ್ತದೆ. ಇನ್ನು ಗೊಬ್ಬರ ತಯಾರಿಸುವ ಸಾಧನದ ಬೆಲೆ ಕೇವಲ ಎರಡರಿಂದ ಮೂರು ಸಾವಿರ ರೂ.ಗಳಲ್ಲಿ ಸಿದ್ಧವಾಗಲಿದೆ. ಇದರ ಬಳಕೆಯಿಂದ ರೈತರಿಗೆ ಸಾವಯವ ಕೃಷಿ ವೆಚ್ಚ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸಾವಯವ ಕೃಷಿ ಮಾಡುವವರು ಒಂದು ಎಕರೆಗೆ ಲೋಡ್‌ಗಟ್ಟಲೆ ಕೊಟ್ಟಿಗೆ ಗೊಬ್ಬರ ಸೇರಿದಂತೆ ಇನ್ನಿತರ ಸಾವಯವ ಗೊಬ್ಬರವನ್ನೂ ಹಾಕುತ್ತಾರೆ. ಇದರಿಂದ ಕೃಷಿಯ ವೆಚ್ಚ ಅಧಿಕವಾಗುತ್ತದೆ. ಈ ನ್ಯಾನೋ ತಂತ್ರಜ್ಞಾನದ ಸಾವಯವ ಗೊಬ್ಬರದಿಂದ ಅತಿ ಕಡಿಮೆ ವೆಚ್ಚದಲ್ಲಿ ಜಮೀನಿಗೆ ಬೇಕಾದಷ್ಟು ದ್ರವರೂಪದ ಸಾವಯವ ಗೊಬ್ಬರವನ್ನು ಚರಂಡಿ ನೀರಿನಿಂದಲೇ ತಯಾರಿಸಿಕೊಳ್ಳಬಹುದಾಗಿದೆ. ಇದರಿಂದ ಶುದ್ಧ ಪರಿಸರ ಮತ್ತು ಉತ್ತಮ ಕೃಷಿ ಉತ್ಪನ್ನಗಳನ್ನು ಹೊಂದುವ ಎರಡು ಪ್ರಮುಖ ಪ್ರಯೋಜನಗಳಿವೆ. ಅಲ್ಲದೇ ರಾಸಾಯನಿಕ ಮುಕ್ತ ಕೃಷಿಗೆ ಹಾಗೂ ನಾಗರಿಕರ ಉತ್ತಮ ಆರೋಗ್ಯಕ್ಕೂ ಇದು ಕಾರಣವಾಗಲಿದೆ ಎಂಬುದು ಸಂಶೋಧಕರ ಅಭಿಪ್ರಾಯ.
ಈ ಸಂಶೋಧನೆಯನ್ನು ಆನಂದ್ ಕೆ.ಜೆ. ಮತ್ತು ಡಾ| ಶರಣ್ ಎ.ಎಸ್. ಅವರ ಮಾರ್ಗದರ್ಶನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮಂಜುಳಾ ಎಸ್.ಇ., ಅಭಿಷೇಕ್ ಆರ್.ಪಿ. ಮತ್ತು ಆಶಿಶ್ವಿ ದಂಡಿನ್ ಮಾಡಿದ್ದಾರೆ. ಕಾಲೇಜು ಮಟ್ಟದಲ್ಲಿ ಈ ಯೋಜನೆ 2020-21ನೇ ಸಾಲಿನ ಅತ್ಯುತ್ತಮ ಯೋಜನೆ ಎಂಬ ಪ್ರಶಸ್ತಿಗೂ ಪಾತ್ರವಾಗಿರುವುದು ಉಲ್ಲೇಖನೀಯ.
ಮೂರಾಲ್ಕು ತಿಂಗಳ ಕಾಲ ನಡೆಸಿದ ನಿರಂತರ ಸಂಶೋಧನೆಯ ಪರಿಣಾಮವಾಗಿ ಈ ಸಾಧನ ಅಭಿವೃದ್ಧಿಗೊಂಡಿದೆ. ಟೊಮ್ಯಾಟೋ ಗಿಡಗಳ ಮೇಲೆ ಈ ಗೊಬ್ಬರ ಪ್ರಯೋಗ ಮಾಡಿದ್ದು ಬೀಜ ಮೊಳಕೆಯೊಡೆಯುವ ಹಂತದಿಂದ ಹಿಡಿದು ಇಳುವರಿವರೆಗೆ ಎಲ್ಲ ಹಂತಗಳಲ್ಲಿ ಉತ್ತಮ ಪರಿಣಾಮ ಕಂಡು ಬಂದಿದೆ. ನ್ಯಾನೋ ಸಾವಯವ ಗೊಬ್ಬರದಿಂದ ಸಸಿಯ ಬೆಳವಣಿಗೆ ಹೆಚ್ಚಾಗಿದೆ. ಗಿಡದ ಟಿಸಿಲುಗಳು ಹೆಚ್ಚಾಗಿ ಇಳುವರಿಯೂ ಹೆಚ್ಚಾಗಿರುವುದು ಸಂಶೋಧನೆಯಲ್ಲಿ ಸಾಬೀತಾಗಿದೆ.
-ಡಾ| ಶರಣ್ ಎ.ಎಸ್., ಮಾರ್ಗದರ್ಶಕರು
-ಎಚ್.ಕೆ. ನಟರಾಜ