Advertisement

ಸಮ್ಮಿಶ್ರ ಸರ್ಕಾರದಲ್ಲಿ ನಂಜುಂಡಪ್ಪ ವರದಿ “ಅನಾಥ’

06:15 AM Dec 09, 2018 | Team Udayavani |

ಬೆಳಗಾವಿ:  ಈ ಭಾಗದಲ್ಲಿ ಅಧಿವೇಶನ ಬಂದರೆ ನಂಜುಂಡಪ್ಪ ವರದಿ ಅನುಷ್ಠಾನದ ಚರ್ಚೆ ಮುನ್ನೆಲೆಗೆ ಬರುತ್ತದೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ನಂಜುಂಡಪ್ಪ ವರದಿ ಸಧ್ಯಕ್ಕೆ ಅನಾಥ ಶಿಶುವಾಗಿದ್ದು, ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಗೆ ಅಧ್ಯಕ್ಷರೂ ಇಲ್ಲ. ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣವೂ ಬಿಡುಗಡೆಯಾಗಿಲ್ಲ.

Advertisement

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯೋಜನೆಯ ಅನುಷ್ಠಾನದ ಸಾಧಕ ಬಾಧಕ ಕುರಿತು 2015 ರಲ್ಲಿಯೇ ಧಾರವಾಡದ ಸಿಎಂಡಿಆರ್‌ ಸಂಸ್ಥೆ ಸರ್ಕಾರಕ್ಕೆ ವರದಿ ನೀಡಿದ್ದು, ಆ ವರದಿಯನ್ನು ಸರ್ಕಾರ ಕೋಲ್ಡ್‌ ಸ್ಟೋರೇಜ್‌ನಲ್ಲಿ ಇಟ್ಟಿದ್ದು, ಹಾಲಿ ಸಮ್ಮಿಶ್ರ ಸರ್ಕಾರದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಯಾವುದೇ ರೀತಿಯ ಹಣ ಬಿಡುಗಡೆಯಾಗಿಲ್ಲ. ಅಲ್ಲದೇ ಮಂಡಳಿಗೆ ಅಧ್ಯಕ್ಷರನ್ನೂ ನೇಮಕ ಮಾಡಿಲ್ಲ. ಹೀಗಾಗಿ ನಂಜುಂಡಪ್ಪ ವರದಿ ಒಂದು ರೀತಿಯಲ್ಲಿ ಅನಾಥವಾಗಿದೆ.

ವಿಶೇಷವಾಗಿ ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಗೆ ಅಧ್ಯಕ್ಷರಾಗಲೂ ಯಾವ ಶಾಸಕರೂ ಮುಂದೆ ಬರುತ್ತಿಲ್ಲ ಎನ್ನುವುದೂ ಕೂಡ ವಿಶೇಷವಾಗಿದೆ. ಈ ಮಂಡಳಿಯಲ್ಲಿ ಅಧ್ಯಕ್ಷರಿಗೆ ನೇರವಾಗಿ ಹಣ ಬಿಡುಗಡೆಗೆ ಅವಕಾಶ ನೀಡದೇ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಮಾತ್ರ ನೀಡಿರುವುದರಿಂದ ಬಹುತೇಕ ಶಾಸಕರು ಈ ಮಂಡಳಿಯ ಅಧ್ಯಕ್ಷ ಸ್ಥಾನವನ್ನೂ ಬೇಡ ಎನ್ನುವವರೇ ಇದ್ದಾರೆ ಎಂದು ಹೇಳಲಾಗುತ್ತಿದೆ.

ಹಿನ್ನೆಲೆ
ರಾಜ್ಯದಲ್ಲಿ ಅಭಿವೃದ್ಧಿಯಲ್ಲಿನ ತಾರತಮ್ಯ ನಿವಾರಣೆ ಕುರಿತು ಸಮಗ್ರ ವರದಿ ತಯಾರಿಸಲು 1998 ರಲ್ಲಿ ಹಿರಿಯ ಅರ್ಥಶಾಸ್ತ್ರಜ್ಞ ಡಾ.ಡಿ.ಎಂ. ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಆ ಸಮಿತಿ 2000ರಲ್ಲಿ ಸರ್ಕಾರಕ್ಕೆ ವರದಿ ನೀಡಿತ್ತು. ಅಂದಿನ ಎಸ್‌.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರ ವರದಿ ಸ್ವೀಕರಿಸಿದ್ದರೂ ಅನುಷ್ಠಾನಗೊಳಿಸುವ ಗೋಜಿಗೆ ಹೋಗಿರಲಿಲ್ಲ. 2007 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವರದಿ ಅನುಷ್ಠಾನಕ್ಕೆ ತೀರ್ಮಾನಿಸಿದರು.

ಈ ವರದಿಯಲ್ಲಿ ರಾಜ್ಯದ 175 ತಾಲೂಕುಗಳಲ್ಲಿ 114 ತಾಲೂಕುಗಳನ್ನು ಹಿಂದುಳಿದ ತಾಲೂಕುಗಳು ಎಂದು ಗುರುತಿಸಿದ್ದು, ಅವುಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 59 ತಾಲೂಕುಗಳು, ದಕ್ಷಿಣ ಕರ್ನಾಟಕದಲ್ಲಿ 55 ತಾಲೂಕುಗಳನ್ನು ಗುರುತಿಸಿದ್ದು, ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಪ್ರತಿ ವರ್ಷ 2000 ಕೋಟಿಯಂತೆ  8 ವರ್ಷಗಳವರೆಗೆ 16 ಸಾವಿರ ಕೋಟಿ ರೂ. ವಿಶೇಷ ಅನುದಾನ, ಅಲ್ಲದೇ ಬಜೆಟ್‌ನಲ್ಲಿ 15 ಸಾವಿರ ಕೋಟಿ ರೂಪಾಯಿ ಸೇರಿ 31 ಸಾವಿರ ಕೋಟಿ ರೂ.  ನೀಡುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿತ್ತು.

Advertisement

ರಾಜ್ಯ ಸರ್ಕಾರ ಪ್ರತಿ ವರ್ಷ ನಿಗದಿಯಂತೆ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಿದ ಲೆಕ್ಕ ತೋರಿಸಿದ್ದು ಬಿಟ್ಟರೆ ನಿರೀಕ್ಷಿತ ಮಟ್ಟದಲ್ಲಿ ಹಿಂದುಳಿದ ತಾಲೂಕುಗಳಲ್ಲಿ ಅಭಿವೃದ್ಧಿ ಕಾಣಲಿಲ್ಲ. ಹೀಗಾಗಿ ವರದಿ ಅನುಷ್ಠಾನಕ್ಕೆ ಮತ್ತೆ ಐದು ವರ್ಷ ಅವಧಿ ವಿಸ್ತರಿಸಲಾಗಿದ್ದು, ಪ್ರತಿ ವರ್ಷ ಮೂರು ಸಾವಿರ ಕೋಟಿ ವಿಶೇಷ ಅನುದಾನವನ್ನೂ ಬಜೆಟ್‌ನಲ್ಲಿ ಮೀಸಲಿಡಲಾಗುತ್ತಿದೆ.

ಅಲ್ಲದೇ ವರದಿ ಜಾರಿಗೊಳಿಸಿದ ನಂತರ ಆಗಿರುವ ಆಭಿವೃದ್ಧಿ ಕುರಿತು ಧಾರವಾಡ ಸಿಎಂಡಿಆರ್‌ ಸಂಸ್ಥೆಗೆ ವರದಿ ನೀಡುವಂತೆ ಕಾಂಗ್ರೆಸ್‌ ಸರ್ಕಾರ ಸೂಚಿಸಿತ್ತು. ಅದರಂತೆ 2015 ರಲ್ಲಿ ಸಿಎಂಡಿಆರ್‌ ಸಂಸ್ಥೆ ನೀಡಿರುವ ವರದಿಯಲ್ಲಿ ಪ್ರಮುಖವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಆಗಿರುವ ಬದಲಾವಣೆಗಳು ಹಾಗೂ ರಾಜ್ಯ ಸರ್ಕಾರ ವರದಿ ಅನುಷ್ಠಾನಗೊಳಿಸಲು ಕೆಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಉತ್ತರ ಕರ್ನಾಟಕದ ವಿಶೇಷವಾಗಿ ಹೈದರಾಬಾದ್‌ ಕರ್ನಾಟಕ ಭಾಗದ ತಾಲೂಕುಗಳ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಕಂಡು ಬರದಿರುವುದು ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ತಿಳಿದು ಬಂದಿದೆ.

2006 ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದ ಕುಮಾರಸ್ವಾಮಿಯೇ ಈಗ ಮತ್ತೆ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದು, ಅವರೇ ಅನುಷ್ಠಾನಕ್ಕೆ ತೀರ್ಮಾನಿಸಿದ್ದ ನಂಜುಂಡಪ್ಪ ವರದಿ ಜಾರಿ ಕುರಿತು ಸಿಎಂಡಿಆರ್‌ ಸಂಸ್ಥೆ ನೀಡಿರುವ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯನ್ನು ಉತ್ತರ ಕರ್ನಾಟಕ ಭಾಗದ ಜನತೆ ಹೊಂದಿದ್ದಾರೆ.

ನಂಜುಂಡಪ್ಪ ವರದಿಯ ಪ್ರಮುಖಾಂಶಗಳು
ರಾಜ್ಯದಲ್ಲಿ 114 ಹಿಂದುಳಿದ ತಾಲೂಕುಗಳು
39 ಅತ್ಯಂತ ಹಿಂದುಳಿದ ತಾಲೂಕುಗಳು
40 ಹಿಂದುಳಿದ ತಾಲೂಕುಗಳು
35 ಹಿಂದುಳಿದ ತಾಲೂಕುಗಳು

ಸಂಪನ್ಮೂಲ ಹಂಚಿಕೆ ಪ್ರಮಾಣ
ಕಲಬುರಗಿ ವಿಭಾಗ -28 ತಾಲೂಕುಗಳು 40% ರಷ್ಟು ಅನುದಾನ
ಬೆಳಗಾವಿ ವಿಭಾಗ-31 ತಾಲೂಕುಗಳು 20 % ರಷ್ಟು ಅನುದಾನ
ಬೆಂಗಳೂರು ವಿಭಾಗ-  33 ತಾಲೂಕುಗಳು 25% ರಷ್ಟು ಅನುದಾನ
ಮೈಸೂರು ವಿಭಾಗ 22 ತಾಲೂಕುಗಳು 15% ರಷ್ಟು ಅನುದಾನ.

ನಮ್ಮ ಸಂಸ್ಥೆಯಿಂದ 2015 ರಲ್ಲಿಯೇ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದೇವೆ. ಈ ಬಗ್ಗೆ ರಾಜ್ಯ ಸರ್ಕಾರ ಏನು ಮಾಡಿದೆ ಎಂಬ ಮಾಹಿತಿ ನಮಗೆ ಬಂದಿಲ್ಲ. ವರದಿ ಅನುಷ್ಠಾನದ ಕುರಿತು ಕೆಲವು ಸಲಹೆಗಳನ್ನು ನೀಡಲಾಗಿತ್ತು. ಸರ್ಕಾರ ಒಪ್ಪಿಕೊಂಡಿದೆಯೋ ಇಲ್ಲವೋ ಎನ್ನುವ ಬಗ್ಗೆಯೂ ನಮಗೆ ಮಾಹಿತಿ ಇಲ್ಲ.
– ಸಿದ್ದಲಿಂಗಸ್ವಾಮಿ, ಅಸಿಸ್ಟಂಟ್‌ಪ್ರೊಫೆಸರ್‌, ಸಿಎಂಡಿಆರ್‌ ಸಂಸ್ಥೆ.

ನಂಜುಂಡಪ್ಪ ವರದಿ ಅನುಷ್ಠಾನ ಯಾವ ಸ್ಥಿತಿಯಲ್ಲಿದೆ ಎನ್ನುವ ಮಾಹಿತಿ ಯಾವುದೂ ಇಲ್ಲ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣ ಇಟ್ಟಿದೆ ಎಂದು ಘೋಷಣೆ ಮಾಡುತ್ತದೆ. ಅನುಷ್ಠಾನದ ವಿಷಯದಲ್ಲಿ ಹಾಲಿ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಸಮಾನತೆ ನಿವಾರಣೆಗೆ ನಂಜುಂಡಪ್ಪ ವರದಿಯ ಮೂಲ ಆಶಯ ಏನಿದೆ ಅದು ಪರಿಗಣಿಸುತ್ತಿಲ್ಲ.
– ತ್ರಿವಿಕ್ರಮ ಜೋಷಿ, ಮಾಜಿ ಅಧ್ಯಕ್ಷರು, ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next