Advertisement
ಮಂಗಳವಾರ ಬೆಳಗ್ಗೆ 6.40 ರಿಂದ 7.00 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಪಂಚ ಮಹಾರಥೋತ್ಸವ ನಡೆಯಲಿದ್ದು, ದೇವಸ್ಥಾನದ ಸುತ್ತ ಸೇರಿದಂತೆ ರಥಬೀದಿಯುದ್ದಕ್ಕೂ ನೀರು ಸಿಂಪಡಿಸಿ ಐದೂ ರಥಗಳಿಗೆ ಅಲಂಕಾರಿಕ ಬಂಟಿಂಗ್ಸ್ ಕಟ್ಟಿ ಬಾಳೆ ಕಂಬ, ಮಾವು ಹಸಿರು ತೋರಣಗಳಿಂದ ಸಿಂಗರಿಸಲಾಗಿದೆ.
Related Articles
Advertisement
2 ಲಕ್ಷ ಭಕ್ತರು ಭಾಗಿ: ಸೋಮವಾರ ಸಂಜೆಯೇ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಭಕ್ತರು ಆಗಮಿಸಿದ್ದು, ಜನಸಾಗರವೇ ಬೀಡು ಬಿಟ್ಟಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ.
ದೇವಸ್ಥಾನದ ವತಿಯಿಂದ ಶುದ್ಧ ಕುಡಿಯುವ ನೀರು, ಶೌಚಾಲಯ, ತಾತ್ಕಾಲಿಕ ಆಸ್ಪತ್ರೆ, ಅರಕ್ಷಕ ಠಾಣೆ, ಆ್ಯಂಬ್ಯುಲೆನ್ಸ್ ವಾಹನ, ಅಗ್ನಿಶಾಮಕ ದಳಗಳನ್ನು ಸಿದ್ಧಪಡಿಸಲಾಗಿದೆ. ದಾಸೋಹ ಭವನದಲ್ಲಿ ಸಂಜೆಯ ಪ್ರಸಾದ ವಿನಿಯೋಗಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.
ಲಕ್ಷ ಲಡ್ಡು ತಯಾರು: ಇಲ್ಲಿನ ಭಾರತೀ ತೀರ್ಥ ಶಂಕರ ಮಠದಲ್ಲಿ ಬೆಂಗಳೂರಿನ ಶ್ರೀಕಂಠೇಶ್ವರ ಸ್ವಾಮಿ ಸೇವಾ ಸಂಸ್ಥೆಯು ಭಕ್ತರಿಗಾಗಿ ಲಡ್ಡು ತಯಾರಿಸುತ್ತಿದೆ. ಸುಮಾರು ಒಂದು ಲಕ್ಷ ಭಕ್ತರಿಗೆ ಲಡ್ಡು ವಿತರಿಸಲಾಗುವುದು.
ಉಪಾಹಾರ ವ್ಯವಸ್ಥೆ: ನಂಜನಗೂಡಿನ ಸೇವಾ ಬಳಗದಿಂದ ಸಂಜೆ ಫಲಹಾರ ಭೋಜನ ಏರ್ಪಡಿಸಿದ್ದರೆ, ದೊಡ್ಡಬಳ್ಳಾಪುರದ ಶ್ರೀಕಂಠಪ್ಪನ ಭಕ್ತರು ಸುಮಾರು ಹತ್ತು ಸಾವಿರ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಿದ್ದಾರೆ. ಅರಮನೆ ಮಾಳದಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ರಥೋತ್ಸವದ ಪ್ರಯುಕ್ತ ಪ್ರಸಾದ, ನೀರು, ಮಜ್ಜಿಗೆ, ಪಾನಕ, ಹಣ್ಣು ವಿತರಣೆಗೆ ತಯಾರಿ ನಡೆಸಿವೆ.
ಮಂಗಳವಾರ ಬೆಳಗ್ಗೆ 6.40ರಿಂದ 7 ಗಂಟೆಯ ಒಳಗೆ ರಥೋತ್ಸವಕ್ಕೆ ಜಿಲ್ಲಾಧಿಕಾರಿ ಅಭಿರಾಂ ಶಂಕರ್ ಚಾಲನೆ ನೀಡಲಿದ್ದಾರೆ. ರಥಗಳ ಚಕ್ರಕ್ಕೆ ಗೊದುಮ ನೀಡುವ ಯುವಪಡೆಗೆ ದೇವಸ್ಥಾನದ ವತಿಯಿಂದಲೇ ಟೀ-ಶರ್ಟ್ ನೀಡಲಾಗುವುದು ದೇಗುಲದ ಇಒ ಕುಮಾರಸ್ವಾಮಿ ತಿಳಿಸಿದ್ದಾರೆ.