ನಂಜನಗೂಡು : ಮದುವೆ ಆಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ ಪೇದೆಯ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ನ್ಯಾಯ ಕೇಳಲು ಬಂದ ಮಹಿಳೆಯನ್ನ ಪೇದೆ ಹಾಗೂ ಆತನ ಮಗ ಹಿಗ್ಗಾ ಮುಗ್ಗ ಥಳಿಸಿ ಜಮೀನಿನಲ್ಲಿ ತಳ್ಳಿ ಪರಾರಿಯಾಗಿದ್ದಾರೆ. ಅಪ್ಪ ಮಗನ ದೌರ್ಜನ್ಯಕ್ಕೆ ಸಿಲುಕಿ ಅನಾಥಳಂತೆ ಜಮೀನಿನಲ್ಲಿ ಬಿದ್ದಿದ್ದ ಮಹಿಳೆಯನ್ನ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಕೃಷ್ಣ ಹಾಗೂ ಈತನ ಮಗ ಕಿರಣ್ ವಿರುದ್ದ ಕೇಸು ದಾಖಲಾಗಿದೆ. ತಲಕಾಡು ಮೂಲದ ಗೌರಮ್ಮ ಎಂಬ ಮಹಿಳೆಯನ್ನ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ಮತ್ತೊಂದು ಮದುವೆ ಆದ ಪೇದೆ ಕೃಷ್ಣನ ವಿರುದ್ದ ಪ್ರಕರಣ ದಾಖಲಾಗಿದೆ.
ನಂಜಯ್ಯ ಎಂಬುವರನ್ನ ಮದುವೆ ಆಗಿದ್ದ ಗೌರಮ್ಮ ಕೌಟುಂಬಿಕ ಸಮಸ್ಯೆ ಎದುರಾದಾಗ ಬನ್ನೂರು ಪೊಲೀಸರ ಮೊರೆ ಹೋಗಿದ್ದರು. ಆಗ ಬನ್ನೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವವಹಿಸುತ್ತಿದ್ದ ಕೃಷ್ಣ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡಿದ್ದಾನೆ. ನಂತರ ಪತಿಗೆ ವಿಚ್ಛೇದನ ಕೊಡು ನಾನು ನಿನ್ನನ್ನ ಮದುವೆ ಆಗ್ತೀನಿ ಎಂದು ನಂಬಿಸಿದ್ದಾನೆ. ಕೃಷ್ಣನ ಮಾತನ್ನ ನಂಬಿದ ಗೌರಮ್ಮ ನಂಜಯ್ಯನಿಂದ ವಿಚ್ಛೇದನ ಪಡೆದು ಬೇರ್ಪಟ್ಟಿದ್ದಾಳೆ. ನಂತರ ಕೃಷ್ಣ ಮೈಸೂರಿನ ಗೋಕುಲಂ ನಲ್ಲಿ ಮನೆ ಬಾಡಿಗೆ ಪಡೆದು ಗೌರಮ್ಮಳೊಂದಿಗೆ ಸಂಸಾರ ನಡೆಸಿದ್ದಾನೆ. ಮದುವೆ ಆಗುವುದಾಗಿ ನಂಬಿಸುತ್ತಲೇ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಮಧ್ಯೆ ಸೊಸೈಟಿಯಿಂದ ಗೌರಮ್ಮಳ ಹೆಸರಲ್ಲಿ 5 ಲಕ್ಷ ಸಾಲ ಪಡೆದಿದ್ದಾನೆ. ಅಲ್ಲದೆ ಪ್ರತ್ಯೇಕವಾಗಿ 3 ಲಕ್ಷ ಸಾಲ ಪಡೆದಿದ್ದಾನೆ. ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಗೌರಮ್ಮ ಗರ್ಭವತಿಯಾಗಿದ್ದಾಳೆ. ತನ್ನ ಗುಟ್ಟು ಬಯಲಾಗುತ್ತದೆಂದು ಹೆದರಿ ಗರ್ಭಪಾತ ಮಾಡಿಸಿದ್ದಾನೆ. ಹೀಗೆ ನಾಲ್ಕಾರು ವರ್ಷಗಳು ಉರುಳಿ ಹೋದರೂ ಗೌರಮ್ಮಳನ್ನ ಮದುವೆ ಆಗದೆ ಸತಾಯಿಸಿದ್ದಾನೆ. ಇದ್ದಕ್ಕಿದ್ದಂತೆ ಕೃಷ್ಣನ ನಡುವಳಿಕೆಯಲ್ಲಿ ಬದಲಾವಣೆಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಕೃಷ್ಣ ಮತ್ತೊಂದು ಮದುವೆ ಆಗಿರುವುದು ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಗೌರಮ್ಮ ವಿರೋಧಿಸಿದಾಗ ದೈಹಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಗೌರಮ್ಮಳಿಗೆ ಸಾಲ ಕೊಟ್ಟ ಹಣ ಹಿಂದುರಿಗಿದೆ. ಆದರೆ ಮದುವೆ ವಿಚಾರದಲ್ಲಿ ಕೃಷ್ಣ ಮತ್ತೆ ಕೈಕೊಟ್ಟಿದ್ದಾನೆ.
ಇದನ್ನೂ ಓದಿ : ಶಿವಮೊಗ್ಗ : ಕರ್ಪ್ಯೂ ಸಡಿಲಿಕೆ, ನಿಷೇಧಾಜ್ಞೆ ಮುಂದುವರಿಕೆ, ಶಾಲಾ ಕಾಲೇಜುಗಳಿಗೆ ರಜೆ
ನಂಜನಗೂಡಿನ ಬಳ್ಳೂರಹುಂಡಿ ಗ್ರಾಮದ ಜಮೀನಿನಲ್ಲಿ ಕೃಷ್ಣ ಇರುವ ವಿಚಾರ ತಿಳಿದು ನ್ಯಾಯ ಕೇಳಲು ಹೋದ ಗೌರಮ್ಮಳಿಗೆ ಅಪ್ಪ ಹಾಗೂ ಮಗ ಇಬ್ಬರೂ ಹಿಗ್ಗಾ ಮುಗ್ಗ ಥಳಿಸಿದ್ದಾರೆ. ಅಪ್ಪನಿಗೆ ವಯಸ್ಸಾಯ್ತು ನಾನು ಇಟ್ಟುಕೊಳ್ತೀನಿ ಅಂತ ಮಗ ಕಿರಣ್ ಅವ್ಯಾಚ ಶಬ್ದಗಳನ್ನ ಬಳಸಿ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ. ಗೌರಮ್ಮನ ಕಿರುಚಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಬರುವಷ್ಟರಲ್ಲಿ ಕೃಷ್ಣ ಹಾಗೂ ಕಿರಣ್ ಎಸ್ಕೇಪ್ ಆಗಿದ್ದಾರೆ. ತೀವ್ರ ಹಲ್ಲೆಗೆ ಒಳಗಾದ ಗೌರಮ್ಮ ಳನ್ನ ಗ್ರಾಮಸ್ಥರು ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೇದೆ ಕೃಷ್ಣ ಹಾಗೂ ಪುತ್ರ ಕಿರಣ್ ಮೇಲೆ ಕೊಲೆ ಬೆದರಿಕೆ, ವಂಚನೆ ಪ್ರಕರಣ ದಾಖಲಾಗಿದೆ. ಕಣ್ಣೀರಿಡುತ್ತಿರುವ ಗೌರಮ್ಮಳಿಗೆ ನ್ಯಾಯ ದೊರೆಯಬೇಕಿದೆ. ನಂಜನಗೂಡು ಸರ್ಕಲ್ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ ತಳವಾರ್ ರವರು ಪ್ರಕರಣ ದಾಖಲಿಸಿ ಗೌರಮ್ಮಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.