Advertisement

ಹಾಸ್ಟೆಲ್‌ ಬಿಟ್ಟು ಹೋಗಲ್ಲ, ಬೇರೆ ವ್ಯವಸ್ಥೆಮಾಡಿಕೊಳ್ಳಿ

10:51 AM Jan 12, 2022 | Team Udayavani |

ನಂಜನಗೂಡು: ವಸತಿ ಶಾಲೆಯನ್ನು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಲು ಅಲ್ಲಿನ ಮಕ್ಕಳನ್ನು ಮನೆಗೆ ಕಳುಹಿಸುತ್ತಿದ್ದು, ಪರೀಕ್ಷೆ ಸಮೀಪಿಸುವ ಹೊತ್ತಿನಲ್ಲಿ ಹೀಗೆಹಾಸ್ಟೆಲ್‌ ಖಾಲಿ ಮಾಡಿ ಎಂದರೆ ನಾವು ಏನು ಮಾಡಬೇಕು, ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಬೇಕು, ಪ್ರತಿ ಬಾರಿಯೂ ಬಡ ಮಕ್ಕಳೇ ನಿಮಗೆ ಕಾಣಿಸಿಕೊಳ್ಳುತ್ತಾರಾ, ಬೇರೆ ಪರ್ಯಾಯ ಆಯ್ಕೆ ಇಲ್ಲವೇ?…ಇದು ವಿದ್ಯಾರ್ಥಿಗಳ ಪ್ರಶ್ನೆ…

Advertisement

ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ದೊಡ್ಡ ಛತ್ರಗಳು, ಕಲ್ಯಾಣ ಮಂಟಪಗಳು ಖಾಲಿ ಇವೆ. ಬೇಕಾದರೆ ಸರ್ಕಾರಿ ಕಟ್ಟಡ ಇಲ್ಲವೇ ಹೋಟೆಲ್‌ಗ‌ಳನ್ನು ಬಳಸಿಕೊಳ್ಳಬಹುದು. ಆದರೆ, ನಮ್ಮ ಮಕ್ಕಳನ್ನು ದಿಢೀರ್‌ನೇ ಮನೆಗೆ ಕಳುಹಿಸಿದರೆ ಪರೀಕ್ಷೆ ಹೊತ್ತಿನಲ್ಲಿ ಅವರು ಓದುವುದು ಹೇಗೆ, ಆನ್‌ಲೈನ್‌ ಕ್ಲಾಸ್‌ನಡೆಸಿದರೆ ನಮ್ಮ ಬಳಿ ಸ್ಮಾರ್ಟ್‌ಫೋನ್‌ ಕೊಡಿಸಲು ಹಣ ಇಲ್ಲ. ಒಂದು ವೇಳೆ ಕೊಡಿಸಿದರೂ ನಮ್ಮ ಊರುಗಳಲ್ಲಿ ನೆಟ್‌ವರ್ಕ್‌ ಸಿಗುವುದಿಲ್ಲ. ನೆಟ್‌ವರ್ಕ್‌ ಲಭ್ಯವಾದರೂ ಮಕ್ಕಳಿಗೆ ಪಾಠ ಅರ್ಥ ಆಗುವುದಿಲ್ಲ. ನಮ್ಮ ಮಕ್ಕಳ ಶಿಕ್ಷಣಕ್ಕೆ ತಣ್ಣೀರೆರೆಚುವ ಈ ಅವ್ಯವಸ್ಥೆಗೆ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಇದು ವಿದ್ಯಾರ್ಥಿಗಳ ಪೋಷಕರ ಅಳಲು…

ಇಷ್ಟಕ್ಕೆಲ್ಲ ಕಾರಣ ಏನೆಂದರೆ, ನಂಜನಗೂಡು ತಾಲೂಕಿನ ಕಡುಬಿನಕಟ್ಟೆ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್‌ ಕೇರ್‌ ಕೇಂದ್ರವನ್ನಾಗಿಪರಿವರ್ತಿಲು ಜಿಲ್ಲಾಡಳಿತ ಸಿದ್ಧತೆ ನಡೆಸಿರುವುದು.ನಾಳೆಯೊಳಗೆ (ಜ.13) ವಿದ್ಯಾರ್ಥಿಗಳನ್ನು ಹಾಸ್ಟೆಲ್‌ ನಿಂದ ಖಾಲಿ ಮಾಡಿಸಿ ಮನೆಗಳಿಗೆ ಕಳುಹಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ಪರೀಕ್ಷೆ ಹೊತ್ತಿನಲ್ಲಿ ದಿಢೀರ್‌ನೇ ಮಕ್ಕಳನ್ನು ಮನೆಗೆ ಕರೆದೊಯ್ಯವಂತೆ ನೀಡಿರುವ ಈ ಆದೇಶದಿಂದ ಪೋಷಕರು ಬೆಚ್ಚಿ ಬೀಳುವಂತಾಗಿದೆ. ವಿದ್ಯಾರ್ಥಿಗಳು ಆತಂಕಗೊಂಡಿದ್ದು, ಹೀಗಾದರೆ ಪರೀಕ್ಷೆ ಬರೆಯುವುದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ.

ಪರೀಕ್ಷೆ ಸಮಯ: ಈ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯ ವರೆಗೆ ಒಟ್ಟು236 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಅಂದರೆ ಮಾರ್ಚ್‌ 28ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ಅದಕ್ಕೂ ಮುಂಚೆಉಳಿದ ತರಗತಿಗಳ ಪರೀಕ್ಷೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಮಕ್ಕಳನ್ನು ಮನೆಗಳಿಗೆ ಕರೆದೊಯ್ದರೆ ಅವರ ಕಲಿಕೆಗೆ ತೊಂದರೆ ಆಗಲಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿಯುವವರಿಗೂ ಈ ವಸತಿ ಶಾಲೆಯನ್ನು ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಬಳಸಬಾರದು ಎಂದು ಪೋಷಕರುಇದೀಗ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದುಂಬಾಲು ಬೀಳತೊಡಗಿದ್ದಾರೆ.

Advertisement

ಮನವಿ ಸಲ್ಲಿಕೆ: ಈ ವಸತಿ ಶಾಲೆಯನ್ನು ಹಿಂದೆ ಎರಡು ಬಾರಿ ಕೋವಿಡ್‌ ಕೇರ್‌ ಸೆಂಟರ್‌ ಆಗಿ ಘೋಷಿಸಿದಾಗಲೂ ತರಗತಿ ನಡೆಯುತ್ತಿರಲ್ಲಿಲ್ಲ. ಆಗಶಾಲೆ ಬಾಗಿಲು ಮುಚ್ಚಿತ್ತು. ಈಗ ಮಕ್ಕಳೆಲ್ಲ ವಾರ್ಷಿಕ ಪರೀಕ್ಷೆಯ ಹೊಸ್ತಿಲಲ್ಲಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಮಕ್ಕಳನ್ನು ಕರೆದೊಯ್ಯಲು ಸಾಧ್ಯವಿಲ್ಲ. ನೀವೇ ಬದಲಿ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಹಶೀಲ್ದಾರ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಸಕಹರ್ಷವರ್ಧನ್‌ ಅವರಿಗೆ ಲಿಖೀತ ಮನವಿ ಸಲ್ಲಿಸಿದ್ದಾರೆ.ನಮ್ಮ ಬಳಿ ಸ್ಮಾರ್ಟ್‌ಫೋನ್‌ಇಲ್ಲ. ಅದನ್ನುಕೊಡಿಸಲು ಹಣವೂ ಇಲ್ಲ. ಅನೇಕರು ಕೊಡಿಸಿದರೂನಮ್ಮ ಹಳ್ಳಿಗಾಡಿನಲ್ಲಿ ನೆಟ್‌ವರ್ಕ್‌ ಸಿಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಮಕ್ಕಳ ವಾರ್ಷಿಕ ಪರೀಕ್ಷೆಯ ಗತಿ ಏನು ಎಂದು ಮಹಿಳೆಯೂರು ಸೇರಿದಂತೆ ನೂರಾರು ಪೋಷಕರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಮಕ್ಕಳನ್ನು ಮನೆಗೆ  ಕರೆದೊಯ್ಯಲ್ಲ: ಪೋಷಕರು  ಜಿಲ್ಲಾಡಳಿತದ ಆದೇಶದ ಪ್ರಕಾರ,ಗುರುವಾರದೊಳಗೆ ಹಾಸ್ಟೆಲ್‌ನಿಂದ ನಿಮ್ಮಮಕ್ಕಳನ್ನು ಮನೆ ಕರೆದುಕೊಂಡು ಹೋಗಿಹೇಳಿದ್ದಾರೆ. ಪರೀಕ್ಷೆ ಸಮೀಪಿಸಿರುವ ಹೊತ್ತಿನಲ್ಲಿ ನಾವು ಯಾವುದೇ ಕಾರಣಕ್ಕೂ ಮಕ್ಕಳನ್ನುಕರೆದೊಯ್ಯವುದಿಲ್ಲ. ಒಂದು ವೇಳೆ ಕರೆದುಕೊಂಡುಹೋದರೆ ಅಲ್ಲಿ ಅವರಿಗೆ ಯಾವುದೇ ವ್ಯವಸ್ಥೆಇರುವುದಿಲ್ಲ. ಹೀಗಾಗಿ ಜಿಲ್ಲಾಡಳಿತವೇ ಅವರಿಗೆಲ್ಲ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲಿ. ಬೇಕಾದರೆ ವಾರ್ಷಿಕ ಪರೀಕ್ಷೆ ಮುಗಿದ ಬಳಿಕಮನೆಗೆ ಕಳುಹಿಸಿಕೊಡಲಿ ಎಂದು ಪೋಷಕರು ಆಗ್ರಹಿಸಿದ್ದಾರೆ.

ನಾಳೆಯೊಳಗೆ ಮಕ್ಕಳು ತೆರವಾಗಬೇಕು: ತಹಶೀಲ್ದಾರ್‌ :  ಕಡುಬಿನಕಟ್ಟೆ ಮೊರಾರ್ಜಿ ಶಾಲೆಯನ್ನು ಈ ಬಾರಿಯೂ ಕೋವಿಡ್‌ ಕೇರ್‌ ಸೆಂಟರ್‌ ಆಗಿಸಲು ಜಿಲ್ಲಾಡಳಿತ ಆದೇಶಿಸಿರುವುದು ನಿಜ. ಅದಕ್ಕಾಗಿಯೇ ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ರೂಪಿಸಲು ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳು ಗುರುವಾರದ ಒಳಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ನಂಜನಗೂಡಿನಲ್ಲಿ ಕಳೆದ ಎರಡು ವಾರದಿಂದ ಕೊರೊನಾ ಇರಲಿಲ್ಲ. ಇದೀಗ ಕೊರೊನಾ ಸಂಖ್ಯೆಎರಡಂಕಿದಾಟುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಲಾಗುತ್ತಿದೆ ಎಂದು ತಹಶೀಲ್ದಾರ್‌ ಶಿವಮೂರ್ತಿ ತಿಳಿಸಿದ್ದಾರೆ.

ನಾವು ಬಡವರು. ಸ್ಮಾರ್ಟ್ ಫೋನ್‌ ಕೊಡಿಸಲು ನಮ್ಮಲ್ಲಿ ಈಗ ಹಣವಿಲ್ಲ ಮಕ್ಕಳು ಈಶಾಲೆಯಲ್ಲಿ ಓದಿದರೆ ಅವರ ಶಿಕ್ಷಣದದಾರಿ ಸುಗಮ ಎಂದು ಸೇರಿಸಿದೆವು.ಆದರೆ, ಈಗ ದಿಢೀರ್‌ನೇ ಕರೆದೊಯ್ಯಿರಿ ಎಂದರೆ ಹೇಗೆ? ಯಮುನಾ, ಮಂಡ್ಯದ ಗುತ್ತಲು ನಿವಾಸಿ

ಅಳಗಂಚಿ ಸಮೀಪದ ಜಮೀನನಲ್ಲಿ ನಾವು ವಾಸವಿದ್ದೇವೆ. ಸ್ಮಾರ್ಟ್ ಫೋನ್‌ ಕೊಡಿಸಿದರೂ ಅಲ್ಲಿನೆಟ್‌ವರ್ಕ್‌ ಸಿಗ್ನಲ್‌ಇರುವುದಿಲ್ಲ. ಹೀಗಾದರೆ ಎಸ್‌ಎಸ್‌ಎಲ್‌ಸಿ ಓದುತ್ತಿರುವ ನನ್ನ ಮಗಳ ಕತೆ ಏನು? ಯಶೋದಾ, ಪೋಷಕಿ

ಖಾಸಗಿ ಶಾಲೆಯಲ್ಲಿ ಓದುತ್ತಿರುವ ಅಧಿಕಾರಿಗಳ ಮಕ್ಕಳಿಗೆ ಮಾತ್ರ ಇಂತಹ ಸಮಸ್ಯೆಗಳು ಬರುವುದಿಲ್ಲ. ನಮ್ಮ ಮಕ್ಕಳು ಓದುತ್ತಿರುವ ಈ ಶಾಲೆಯನ್ನೇ ಏಕೆಕೋವಿಡ್‌ ಕೇರ್‌ ಕೇಂದ್ರವಾಗಿಸಬೇಕು.ಅವರ ಮಕ್ಕಳು ಓದುತ್ತಿರುವ ಶಾಲೆಯನ್ನೇ ಪರಿವರ್ತಿಸಿಕೊಳ್ಳಲಿ. ಪಾರ್ವತಿ, ಮುದ್ದಳ್ಳಿ ಗ್ರಾಮ

ನಮ್ಮ ಇಬ್ಬರು ಮಕ್ಕಳು ಇದೇ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಇಬ್ಬರಿಗೂ ಮೊಬೈಲ್‌ ಕೊಡಿಸುವ ಶಕ್ತಿ ನಮ್ಮಲ್ಲಿ ಇಲ್ಲ. ಹಾಗಾದರೆ ನಮ್ಮಮಕ್ಕಳು ಈ ಸಾಲಿನ ಪರೀಕ್ಷೆ ಹೇಗೆ ಬರೆಯುತ್ತಾರೆ ಎಂಬ ಚಿಂತೆಯಾಗಿದೆ. ಜಗದೀಶ, ಹಾಡ್ಯ ಗ್ರಾಮ

ಎಲ್ಲ ಶಾಲೆಗಳನ್ನೂ ಬಂದ್‌ ಮಾಡಿದರೆ ಈ ಶಾಲೆಯನ್ನೂವಿದ್ಯಾರ್ಥಿಗಳ ಪಾಲಿಗೆ ಮುಚ್ಚಲಿ.ಉಳಿದವರೆಲ್ಲ ಶಾಲೆಗೆ ಹೋಗಿಪರೀಕ್ಷೆ ಬರೆದರೆ ನಮ್ಮ ಮಕ್ಕಳುಮಾತ್ರ ಮನೆಯಲ್ಲೇ ಓದಿ ಪರೀಕ್ಷೆಬರಯಬೇಕೆ?, ಇದು ಸರಿಯಲ್ಲ. ಶಿವಯ್ಯ, ಕಸುವಿನಹಳ್ಳಿ

ಪ್ರಸ್ತುತ ಹೆಚ್ಚು ಜನರನ್ನು ಸೇರಿಸಿ ಮದುವೆ ಮಾಡುವಂತಿಲ್ಲ. ಹೀಗಾಗಿ ದೊಡ್ಡ ದೊಡ್ಡ ಛತ್ರಗಳು, ಕಲ್ಯಾಣಮಂಟಪಗಳು ಖಾಲಿ ಇವೆ. ಸದ್ಯಕ್ಕೆ ಅವುಗಳನ್ನು ಕೋವಿಡ್‌ ಕೇರ್‌ಸೆಂಟರ್‌ಗೆ ಬಳಸಿಕೊಂಡು ನಮ್ಮ ಮಕ್ಕಳ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಹಕಾರ ನೀಡಬೇಕು. ಚಿಕ್ಕಬಸಪ್ಪ, ಇಂದಿರಾ ನಗರ

ಶ್ರೀಧರ್‌ ಆರ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next