ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹಾಗೂ ವಿಪಕ್ಷ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರತೊಡಗಿದ್ದು, ಸೋಮವಾರ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಅದ್ದೂರಿ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ಎದುರಾಗಿದ್ದು, ಅವರ ಪತ್ನಿ ಗೀತಾ ಮಹದೇವಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಇಂದು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಗುಂಡ್ಲುಪೇಟೆ ಬಿಜೆಪಿ ಅಭ್ಯರ್ಥಿಯಾಗಿ ನಿರಂಜನ್ ಕುಮಾರ್ ನಾಮಪತ್ರ ಸಲ್ಲಿಸಿದರು.
ಸಚಿವ ಸ್ಥಾನ ವಂಚಿತರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಡ್ಡು ಹೊಡೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ್ದರೆ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿರುವ ಅಭ್ಯರ್ಥಿ ಕಳಲೆ ಕೇಶವಮೂರ್ತಿ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ನೆರೆದಿದ್ದರು.
ಲಾಠಿಚಾರ್ಜ್, ಕಾರ್ಯಕರ್ತರು ಚೆಲ್ಲಾಪಿಲ್ಲಿ!
ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಉಭಯ ಪಕ್ಷಗಳ ಕಾರ್ಯಕರ್ತರು ಮುಖಾಮುಖಿಯಾದ ವೇಳೆ ವಾಗ್ವಾದ, ಜಟಾಪಟಿ ನಡದಿತ್ತು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿ ಹೋದ ಘಟನೆ ನಡೆಯಿತು.