Advertisement

ನಾಣಿ ಈಗ ಕೆಇಬಿ ಕೆಂಪಣ್ಣ!

10:30 AM Dec 11, 2019 | Lakshmi GovindaRaj |

ಈ ಹಿಂದೆ “ಕರಿಯಪ್ಪ’ನಾಗಿ ಗಮನಸೆಳೆದಿದ್ದ ಹಾಸ್ಯ ನಟ ತಬಲನಾಣಿ ಈಗ ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಬಳಿಕ ತಬಲ ನಾಣಿ ಅವರು ಸಿಕ್ಕಾಪಟ್ಟೆ ಬಿಝಿಯಾಗಿದ್ದು ಗೊತ್ತೇ ಇದೆ. ಈಗ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಮತ್ತೂಮ್ಮೆ ಕಚಗುಳಿ ಇಡಲು ಸಜ್ಜಾಗಿದ್ದಾರೆ. ಹೌದು, ತಬಲನಾಣಿ ಅವರೀಗ ಚಿತ್ರವೊಂದರ ಮುಖ್ಯ ಆಕರ್ಷಣೆ. ಆ ಚಿತ್ರಕ್ಕೆ “ಕೆಇಬಿ ಕೆಂಪಣ್ಣ’ ಎಂದು ನಾಮಕರಣ ಮಾಡಲಾಗಿದೆ.

Advertisement

ಸೋಮವಾರ ನಗರದ ಶ್ರೀಕಂಠೇಶ್ವರ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತವೂ ನಡೆದಿದ್ದು, ಮೊದಲ ದೃಶ್ಯಕ್ಕೆ ನಿರ್ದೇಶಕ ಎಎಂಆರ್‌ ರಮೇಶ್‌ ಅವರು ಚಾಲನೆ ನೀಡಿದರೆ, ಮಂಜುಳ ನಾಣಿ ಕ್ಲಾಪ್‌ ಮಾಡಿದ್ದಾರೆ. ಈ ಚಿತ್ರಕ್ಕೆ ಶ್ರೀನಾಥ್‌ ನಿರ್ದೇಶಕರು. ಈ ಹಿಂದೆ “ರ್‍ಯಾಂಬೋ’, “ಪುಂಗಿದಾಸ’ ನಿರ್ದೇಶಿಸಿದ್ದ ಶ್ರೀನಾಥ್‌, “ವಿಕ್ಟರಿ’ ಸಿನಿಮಾಗೆ ಕಥೆ, ಚಿತ್ರಕಥೆ ಕೂಡ ಬರೆದಿದ್ದರು. ಈಗ “ಕೆಇಬಿ ಕೆಂಪಣ್ಣ’ ಚಿತ್ರಕ್ಕೆ ಸಜ್ಜಾಗಿದ್ದಾರೆ.

ತಬಲನಾಣಿ ಇದ್ದಾರೆಂದ ಮೇಲೆ ಅದೊಂದು ಹಾಸ್ಯ ಪ್ರಧಾನ ಚಿತ್ರವೇ ಇರುತ್ತೆ. ಅದರಲ್ಲೂ ಶೀರ್ಷಿಕೆಯೇ ಒಂದು ಮಜ ಕೊಡುವಂತಹ ಸೂಚನೆಯನ್ನೂ ಕೊಡುತ್ತಿದೆ. ಈ ಚಿತ್ರದ ಬಗ್ಗೆ ಮಾತನಾಡುವ ತಬಲನಾಣಿ, “ಇದೊಂದು ಗಂಭೀರವಾಗಿರುವ ವಿಷಯದ ಮೇಲೆ ಸಾಗುವ ಕಥೆ. ಅದರಲ್ಲೂ ತಂದೆ-ತಾಯಿ ತಮ್ಮ ಮಕ್ಕಳ ಮೇಲೆ ಏನೆಲ್ಲಾ ಆಸೆ, ಆಕಾಂಕ್ಷೆ ಇಟ್ಟುಕೊಂಡಿರುತ್ತಾರೆ, ಅವರನ್ನು ಭವಿಷ್ಯದಲ್ಲಿ ಹೇಗೆಲ್ಲಾ ಕಾಣಬೇಕು ಅಂದುಕೊಂಡಿರುತ್ತಾರೆ ಎಂಬ ಹಿನ್ನೆಲೆಯಲ್ಲಿ ಸಾಗುವ ಕಥೆ ಇಲ್ಲಿದೆ.

ಜ್ಯೋತಿಷಿ, ಸಂಖ್ಯಾಶಾಸ್ತ್ರಗಳನ್ನು ನಂಬುವ ತಂದೆ, ತನ್ನ ಮಗನ ಭವಿಷ್ಯ ಹೇಗಿದೆ ಅಂತ ತಿಳಿದುಕೊಳ್ಳಲು ಜ್ಯೋತಿಷಿಗಳ ಹಿಂದೆ ಬೀಳುತ್ತಲೇ, ಅವರ ಮಾತುಗಳೆಲ್ಲವೂ ಸುಳ್ಳು ಎನಿಸಿದಾಗ, ಆಗುವ ನೋವು, ನಿರಾಸೆ ಹೇಗೆಲ್ಲಾ ಇರುತ್ತೆ ಅನ್ನುವ ಸಿನಿಮಾದಲ್ಲಿ ವಾಸ್ತವ ಅಂಶಗಳಿವೆ. ಇಡೀ ಸಿನಿಮಾ ಜ್ಯೋತಿಷಿ ಮಾತುಗಳ ಮೇಲೆಯೇ ಕೇಂದ್ರೀಕೃತವಾಗಿರುತ್ತೆ. ಮಕ್ಕಳ ಭವಿಷ್ಯಕ್ಕಾಗಿ ತಂದೆ, ತಾಯಿಗಳು ಹೇಗೆಲ್ಲಾ ಅಲೆಯುತ್ತಾರೆ ಎಂಬ ವಿಷಯವನ್ನು ಹಾಸ್ಯವಾಗಿಯೇ ತೋರಿಸುತ್ತ, ಗಂಭೀರ ವಿಷಯ ಹೇಳುವ ಪ್ರಯತ್ನ ಇಲ್ಲಿದೆ’ ಎನ್ನುತ್ತಾರೆ ತಬಲನಾಣಿ.

ಚಿತ್ರದಲ್ಲಿ ವೀಣಾ ಸುಂದರ್‌, ಮಿತ್ರ, ಪ್ರವೀಣ್‌, ಮಿಮಿಕ್ರಿ ದಯಾನಂದ್‌ ಇತರರು ನಟಿಸುತ್ತಿದ್ದಾರೆ. ಬೆಂಗಳೂರಲ್ಲಿ 15 ದಿನಗಳ ಚಿತ್ರೀಕರಣ ನಡೆಸಿ, ನಂತರ ಚನ್ನಪಟ್ಟಣ ಹಾಗು ಇತರೆ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸುವ ಉದ್ದೇಶ ಚಿತ್ರತಂಡಕ್ಕಿದೆ. ಚಿತ್ರಕ್ಕೆ ಆಕಾಶ್‌ ಪರ್ವ ಸಂಗೀತವಿದೆ. ರಾಜ ಶಿವಶಂಕರ್‌ ಛಾಯಾಗ್ರಹಣವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next