Advertisement

“ಅಚ್ಚು’ಮೆಚ್ಚಿನ ನಂದಿನಿ

07:30 AM Apr 25, 2018 | |

ಕನ್ನಡದ ಚಿತ್ರರಂಗದ ಬ್ಯುಸಿ ನಟರ ಪೈಕಿ ಅಚ್ಯುತ್‌ ಕುಮಾರ್‌ ಕೂಡ ಒಬ್ಬರು. ಎಂಥಾ ಪಾತ್ರಕ್ಕೂ ಜೀವ ಕೊಡುವಂಥ ಅಪರೂಪದ ಕಲಾವಿದ. ಅವರಷ್ಟೇ ಮನೋಜ್ಞ ಅಭಿನಯ ನೀಡುವ ಸಾಮರ್ಥ್ಯವಿರುವ ಕಲಾವಿದೆ ನಂದಿನಿ ಪಟವರ್ಧನ್‌. ಅಚ್ಯುತ್‌ರ ಪತ್ನಿಯಾಗಿ ಇವರು ಜನರಿಗೆ ಅಷ್ಟಾಗಿ ಪರಿಚಯವಿರಲಿಕ್ಕಿಲ್ಲ. ಆದರೆ, “ಮಂಥನ’ ಮತ್ತು “ಮೂಡಲ ಮನೆ’ ಧಾರಾವಾಹಿಗಳ ನಟಿಯಾಗಿ ಪ್ರೇಕ್ಷಕರಿಗೆ ಇವರು ಚಿರಪರಿಚಿತ. ಮೂಲತಃ ರಂಗಭೂಮಿ ಕಲಾವಿದೆ. ನೀನಾಸಂನಲ್ಲಿ ಅಭಿನಯ ಕಲಿತವರು. ಈಗಲೂ “ಥಿಯೇಟರ್‌ ತತ್ಕಾಲ್‌’ ಎಂಬ ರಂಗತಂಡದ ಸದಸ್ಯರಾಗಿ ರಂಗಭೂಮಿಯಲ್ಲಿ ಸಕ್ರಿಯರು. “ರಂಗಭೂಮಿ ಕೊಡುವಷ್ಟು ಸಂಭ್ರಮ ಧಾರಾವಾಹಿ, ಸಿನಿಮಾ ಕೊಡುವುದಿಲ್ಲ’ ಎಂಬುದು ಇವರ ಅಭಿಪ್ರಾಯ…

Advertisement

ರಂಗಭೂಮಿ ಮತ್ತು ಧಾರಾವಾಹಿ, ಇವೆರಡರಲ್ಲಿ ನಿಮ್ಮ ಮನಸ್ಸಿಗೆ ಯಾವುದು ಹತ್ತಿರ?
ಧಾರಾವಾಹಿಯಲ್ಲಿ ನಮ್ಮ ಪಾತ್ರಪೋಷಣೆ ಕುರಿತು ವೀಕ್ಷಕರಿಂದ ಪ್ರತಿಕ್ರಿಯೆ ಸಿಗಲು ಸಮಯ ಬೇಕು. ಆದರೆ, ರಂಗಭೂಮಿ ಹಾಗಲ್ಲ. ಇಲ್ಲಿ ರಂಗದ ಮೇಲಿದ್ದಾಗಲೇ ಜನರ ಪ್ರತಿಕ್ರಿಯೆ ಗೊತ್ತಾಗಿ ಬಿಡುತ್ತದೆ. ಧಾರಾವಾಹಿಯಲ್ಲಿ ನಮ್ಮ ನಟನೆ ಬಗ್ಗೆ ನಮಗೆ ಬೇಗ ತೃಪ್ತಿ ಸಿಗುತ್ತದೆ. “ಇವತ್ತು ಪರವಾಗಿಲ್ಲ, ಅಭಿನಯ ಚೆನ್ನಾಗಿ ಮಾಡಿದೆ’ ಎಂದು ನನಗೆ ನಾನೇ ಹೇಳಿಕೊಂಡಿರುವುದೂ ಇದೆ. ಆದರೆ, ಆ ತೃಪ್ತಿ ರಂಗಭೂಮಿಯಲ್ಲಿ ಯಾವತ್ತೂ ಸಿಗುವುದಿಲ್ಲ. ನನ್ನ ಪ್ರದರ್ಶನ ಇನ್ನಷ್ಟು ಸುಧಾರಿಸಬೇಕು. ನಟನೆಯಲ್ಲಿ ಇನ್ನಷ್ಟು ಕಲಿಯಬೇಕು. ಆ ಸಂಭಾಷಣೆಯನ್ನು ಬೇರೆ ರೀತಿ ಹೇಳಬೇಕು ಎಂಬ ವಿಚಾರಗಳೇ ನಾಟಕ ಮುಗಿದ ಮೇಲೂ ತಲೆಯಲ್ಲಿರುತ್ತವೆ. ರಂಗಭೂಮಿಯನ್ನು ಹೆಚ್ಚು ಪ್ರೀತಿಸಲು ಮತ್ತೂಂದು ಕಾರಣವೆಂದರೆ, ಒಂದು ತಂಡ ಒಂದು ಕುಟುಂಬದಂತೆ ಅರಿತು, ಬೆರೆತು ಹೋಗಿರುತ್ತೇವೆ. ರೀಡಿಂಗ್‌ನಿಂದ ಹಿಡಿದು ನಾಟಕ ಮುಗಿದು ಮನೆಗೆ ಬರುವವರೆಗೂ ನಾವು ಒಂದೇ ಕುಟುಂಬದಂತೆ ಇರುತ್ತೇವೆ. ರಂಗಭೂಮಿಯ ಸಡಗರವೇ ಬೇರೆ. ಅಂತಹ ಬಾಂಧವ್ಯ ಧಾರಾವಾಹಿ ಶೂಟಿಂಗ್‌ನಲ್ಲಿ ಬೆಳೆಯುವುದಿಲ್ಲ. 

ಕಲಿಕೆಯ ಆರಂಭದ ದಿನಗಳಲ್ಲಿ ಪೋಷಕರ ಪ್ರೋತ್ಸಾಹ ಹೇಗಿತ್ತು?
ಹೆಣ್ಣುಮಕ್ಕಳು ನಾಟಕ ಕಲಿಯುತ್ತೇನೆ ಎಂದರೆ ಬಹುತೇಕ ಕುಟುಂಬಗಳಲ್ಲಿ ಬೇಡ ಎಂದೇ ಹೇಳುತ್ತಾರೆ. ಆದರೆ, ನಮ್ಮ ಮನೆಯಲ್ಲಿ ತದ್ವಿರುದ್ಧ. ನನಗೆ ನಟನೆಯಲ್ಲಿ ಆಸಕ್ತಿಯಿದೆ, ನೀನಾಸಂಗೆ ಹೋಗುತ್ತೇನೆ ಎಂದಾಗ ಮನೆಯಲ್ಲಿ ಎಲ್ಲರಿಗೂ ಖುಷಿಯಾಗಿತ್ತು. ನಮ್ಮ ಮನೆಯಲ್ಲಿ ಯಾರೂ ನಟನೆಯಲ್ಲಿ ತೊಡಗಿಕೊಂಡಿಲ್ಲ, ನೀನಾದರೂ ಈ ಕ್ಷೇತ್ರದಲ್ಲಿ ತೊಡಗು ಅಂತ ಹುರಿದುಂಬಿಸಿದ್ದರು. ನೀನಾಸಂ ಕೋರ್ಸ್‌ ಮುಗಿಸಿ ತಿರುಗಾಟದಲ್ಲಿ ತೊಡಗಿಕೊಂಡಿದ್ದಾಗ ಅಪ್ಪ, ಅಮ್ಮ, ಅಜ್ಜ, ಅಜ್ಜಿ ಎಲ್ಲರೂ ನಾಟಕ ಪ್ರದರ್ಶನ ನಡೆಯುವ ಊರಿಗೇ ಬಂದು ನಾಟಕ ನೋಡುತ್ತಿದ್ದರು. ನೀನಾಸಂನಲ್ಲಿ ನಾಟಕ ಪ್ರದರ್ಶನ ಇದ್ದಾಗಲೂ ತಪ್ಪಿಸುತ್ತಿರಲಿಲ್ಲ. ಅಷ್ಟೊಂದು ಪೋ›ತ್ಸಾಹ ನನಗೆ ನನ್ನ ಕುಟುಂಬದಿಂದ ಸಿಕ್ಕಿದೆ. 

ಸದ್ಯ ಯಾವೆಲ್ಲಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೀರಿ?
ನಮ್ಮದೊಂದು ರಂಗತಂಡವಿದೆ. “ಥಿಯೇಟರ್‌ ತತ್ಕಾಲ್‌’ ಅಂತ ಅದರ ಹೆಸರು. ಅಲ್ಲಿ ನೀನಾಸಂನಲ್ಲಿ ತರಬೇತಿ ಪಡೆದವರೂ ಇದ್ದಾರೆ, ಇತರ ರಂಗತಂಡದಿಂದ ಬಂದಿರುವವರು ಮತ್ತು ಹವ್ಯಾಸಿ ರಂಗಭೂಮಿ ಕಲಾವಿದರೂ ಇದ್ದಾರೆ. ನಾವು ಸತತವಾಗಿ ನಾಟಕಗಳನ್ನು ಪ್ರದರ್ಶಿಸುತ್ತಿರುತ್ತೇವೆ. ಅದಲ್ಲದೇ “ಚಿರಬಂದೇ ವಾಡೆ’ ನಾಟಕದ ಎರಡನೇ ಆವೃತ್ತಿ “ಕೊಳ’ ಎಂಬ ನಾಟಕದಲ್ಲಿ ಅಭಿನಯಿಸುತ್ತಿದ್ದೇನೆ. ಈಗ 16 ಪ್ರದರ್ಶನಗಳನ್ನು “ಕೊಳ’ ಮುಗಿಸಿದೆ. ಬಿಡುಗಡೆಗೆ ಸಿದ್ಧವಾಗಿರುವ “ಗೋಧಾ’ ಎಂಬ ಸಿನಿಮಾದಲ್ಲಿ ನಟಿಸಿದ್ದೇನೆ. 

ಅಚ್ಯುತ್‌ರ ಭೇಟಿ ಎಲ್ಲಾಯಿತು. ಮದುವೆಗೆ ಒಪ್ಪಿಸಿದ್ದು ಹೇಗೆ? 
ನಾನು ನೀನಾಸಂನಲ್ಲಿ ಕಲಿಯುತ್ತಿದ್ದಾಗ, ಅವರು ಮರುತಿರುಗಾಟದಲ್ಲಿದ್ದರು. ಜೊತೆಗೆ ಕ್ವಾಲಿಟಿ ಕಂಟ್ರೋಲರ್‌ ಆಗಿದ್ದರು. ನನ್ನ ನಾಟಕಗಳನ್ನು ನೋಡುತ್ತಿದ್ದರು. ಅವರಿಗೆ ಎಲ್ಲಾ ಹೇಳುತ್ತಿದ್ದರಂತೆ “ಈ ವರ್ಷ ನಂದಿನಿ ಅಂತ ಒಬ್ಬಳು ಹುಡುಗಿ ಕೋರ್ಸ್‌ ಮಾಡಲು ಬಂದಿದ್ದಾಳೆ. ಅವಳಿಗೆ ಪ್ರಪೋಸ್‌ ಮಾಡು’ ಅಂತ. ಇವರು ನನ್ನ ಬಳಿ ಬಂದು ನಿನಗೆ ಸೂಜಿ ಪೋಣಿಸಲು ಬರುತ್ತಾ? ಹೂ ಕಟ್ಟಲು ಬರುತ್ತಾ? ಒಮ್ಮೆ ಹೀಗೆ ನಡೆದು ತೋರಿಸು ಅಂತೆಲ್ಲಾ ಕೇಳುತ್ತಿದ್ದರು. ನನಗೆ ನಗು ಬರ್ತಾ ಇತ್ತು, ಇವರೇಕೆ ಹೀಗೆಲ್ಲಾ ಕೇಳ್ತಿದ್ದಾರೆ ಅಂತ. ಆಮೇಲೆ ಅವರೇ ನನ್ನ ಕುಟುಂಬದವರೆದುರು ಪ್ರಸ್ತಾವನೆ ಇಟ್ಟರು. ಆಗ ಅವರು “ಗೃಹಭಂಗ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಮನೆಯವರಿಗೆ ಅವರ ಬಗ್ಗೆ ವಿಶ್ವಾಸ ಮೂಡಿತ್ತು. ಹೀಗಾಗಿ ಮದುವೆಗೆ ಒಪ್ಪಿದರು. 

Advertisement

ಬ್ಯುಸಿ ನಟರಾಗಿರುವ ಅಚ್ಯುತ್‌ ಕಡೇಪಕ್ಷ ನಿಮ್ಮ ಕೈಗಾದ್ರೂ ಸಿಗುತ್ತಾರಾ?
ಯಾವತ್ತೂ ಅವರೊಬ್ಬ ಬ್ಯುಸಿ ನಟ, ದೊಡ್ಡ ನಟ ಎಂದೆಲ್ಲಾ ನನಗೆ ಅನ್ನಿಸಿಯೇ ಇಲ್ಲ. ಪರಿಚಯವಾದಾಗ ಅವರ ವರ್ತನೆ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಎಲ್ಲರ ಜೊತೆ ಆರಾಮಾಗಿ ಬೆರೆಯುತ್ತಾರೆ. ಎಲ್ಲಿದ್ದರೂ ಖುಷಿ ಖುಷಿಯಾಗಿ ಕಾಲ ಕಳೆಯುತ್ತಾರೆ. ಕೆಲಸದ ಒತ್ತಡ ಎಷ್ಟೇ ಇದ್ದರೂ ಕುಟುಂಬಕ್ಕೆ ಸಮಯ ಕೊಡುವುದರಲ್ಲಿ ಜಿಪುಣತನ ಮಾಡುವುದಿಲ್ಲ. ಹೀಗಾಗಿ ಅವರು ದೊಡ್ಡ ನಟರಾಗಿ ಬೆಳೆದಿದ್ದಾರೆ ಎಂಬುದು ನನ್ನ ತಲೆಗೆ ಹೋಗಿಯೇ ಇಲ್ಲ. 

ನಟರಾಗಿ ಅವರ ಗ್ರಾಫ್ ಹೆಚ್ಚಿದೆ ಎಂಬ ಅರಿವು ನಿಮ್ಮ ಅನುಭವಕ್ಕೆ ಎಂದಾದರೂ ಬಂದಿದೆಯೇ?
ಒಮ್ಮೆ ಶೂಟಿಂಗ್‌ ಸೆಟ್‌ನಿಂದ ಅವರಿಗಾಗಿ ಕಾರ್‌ ಕಳಿಸಿದ್ದರು. ಅವರು ಕಾರಿನಲ್ಲಿ ಹೋದವರು ದಾರಿ ಮಧ್ಯದಲ್ಲಿ ಯಾವುದೋ ತುರ್ತು ಕೆಲಸಕ್ಕಾಗಿ ಕಾರನ್ನು ಒಂದಷ್ಟು ಹೊತ್ತು ನಿಲ್ಲಿಸಿಕೊಂಡಿದ್ದರು. ನಾನು ಅವರಿಗೆ “ಏಕೆ ಕಾರು ನಿಲ್ಲಿಸಿಕೊಂಡಿದ್ದೀರಿ? ನಿಮ್ಮಿಂದ ಬೇರೆಯವರಿಗೆ ತೊಂದರೆಯಾಗುತ್ತಲ್ವಾ?’ ಅಂತೆಲ್ಲಾ ಕೇಳಿದೆ. ಅವರು “ಇಲ್ಲಾ ಕಣೆ ನನಗೋಸ್ಕರಾನೆ ಗಾಡಿ ಕಳಿಸಿದ್ದು. ಬೇರೆ ಯಾರೂ ಇರಲಿಲ್ಲ’ ಎಂದರು. ಇವರೊಬ್ಬರಿಗೋಸ್ಕರ ಅಷ್ಟು ಒಳ್ಳೆಯ ಕಾರು ಕಳಿಸ್ತಾರಾ ಅಂತ ನನಗೆ ಆಶ್ಚರ್ಯ ಆಯ್ತು. ಆಗ ಹೌದಲ್ವಾ ಇವರ ವೃತ್ತಿ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಅಂತನ್ನಿಸಿತ್ತು.

ಮಗಳು ತುಂಬಾ ತುಂಟಿಯಂತೆ. ಆಕೆಗೂ ನಟನೆಯಲ್ಲಿ ಆಸಕ್ತಿ ಇದೆಯಾ?
ಮಗಳು ಈಗ 8ನೇ ತರಗತಿಯಲ್ಲಿದ್ದಾಳೆ. ಚಿಕ್ಕವಳಿದ್ದಾಗ ಅವಳನ್ನು ಹಿಡಿಯುವುದೇ ದೊಡ್ಡ ಕಷ್ಟವಾಗಿತ್ತು. ಅಷ್ಟೊಂದು ತುಂಟಿಯಾಗಿದ್ದಳು. ಹೈಸ್ಕೂಲ್‌ಗೆ ಬಂದಾಗಿನಿಂದ ಸ್ವಲ್ಪ ಗಂಭೀರವಾಗಿರ್ತಾಳೆ. ಮೊದಲೆಲ್ಲಾ ಆಟ ಅಂದುಕೊಂಡು ಸದಾ ಮಕ್ಕಳ ಜೊತೆ ಮನೆ ಮುಂದೆ ರೋಡಿನಲ್ಲೇ ಇರ್ತಾ ಇದ್ದಳು. ಈಗ ಅದೆಲ್ಲಾ ಕಡಿಮೆಯಾಗಿದೆ. ಅವಳಿಗೆ ನಟನೆ, ಸಿನಿಮಾದಲ್ಲಿ ಅಂಥ ಆಸಕ್ತಿಯೇನೂ ಇಲ್ಲ. ಫೋಟೊಗ್ರಫಿ ಕಲಿಯಬೇಕು, ವನ್ಯಜೀವಿ ಛಾಯಾಗ್ರಾಹಕಿ ಆಗ್ತಿನಿ ಅಂತ ಹೇಳ್ತಿರ್ತಾಳೆ. ಈಗೀಗ ನಾನು ಪತ್ರಕರ್ತೆ ಆಗ್ತಿನಿ ಅಂತ ಹೇಳ್ತಿದ್ದಾಳೆ. ನಟಿ ಆಗ್ತಿನಿ ಅಂತ ಮಾತ್ರ ಯಾವತ್ತೂ ಹೇಳಿಲ್ಲ. 

ಅಪ್ಪನ ಸಿನಿಮಾಗಳಿಗೆ ಹೇಗೆ ಪ್ರತಿಕ್ರಿಯೆ ಕೊಡ್ತಾಳೆ?
ನನ್ನ ಮಗಳಿಗೆ ಸಿನಿಮಾ ನೋಡುವ ಆಸಕ್ತಿ ಬಹಳ ಕಡಿಮೆ. ಒಮ್ಮೆ ಯಾವಾಗಲೋ ಅಚ್ಯುತ್‌ ಕಾಮಿಡಿ ಪಾತ್ರ ಮಾಡಿದ್ದರು. ಆಗ ಮಾತ್ರ. “ನೀನು ಕಾಮಿಡಿ ರೋಲ್‌ ಮಾಡ್ಬೇಡ ಅಪ್ಪ. ನಿನಗೆ ಹೊಂದಿಕೆ ಆಗಲ್ಲ’ ಅಂತ ಹೇಳಿದ್ದಳು. 

ನೀವು ಮನೆಯಲ್ಲಿ ಇಲ್ಲದ ವೇಳೆ ಮನೆಯ ಸ್ಥಿತಿ ಹೇಗಿರುತ್ತದೆ?
ನಾನಿದ್ದರೆ ರೇಗಿಕೊಂಡು ಅವರ ಚೇಷ್ಟೆ ಕೆಲಸಗಳಿಗೆ ಅಡ್ಡಿಪಡಿಸುತ್ತಿರುತ್ತೇನೆ. ನಾನು ಮನೆಯಲ್ಲಿ ಇಲ್ಲ ಅಂದರೆ ಅಪ್ಪ, ಮಗಳು ಆರಾಮಾಗಿಯೇ ಇರುತ್ತಾರೆ. ಊಟ- ತಿಂಡಿ ಎಲ್ಲಾ ಹೊರಗೆ ಹೋಟೆಲ್‌ನಲ್ಲಿ. ಮಗಳು ಏನೇ ಮಾಡಿದರೂ ಅಪ್ಪನಿಗೆ ಚಂದ. ಅಪ್ಪ ಹೇಗಿದ್ದರೂ ಮಗಳಿಗೆ ಚಂದ. ಹೀಗಾಗಿ ನಾನಿಲ್ಲ ಎಂದರೆ ಅಪ್ಪ, ಮಗಳು ಖುಷಿಯಾಗಿಯೇ ಇರ್ತಾರೆ. ಆದರೆ ಮನೆ ಮಾತ್ರ ತಿಪ್ಪೆ ರೀತಿ ಆಗಿರುತ್ತದೆ!

ನಿಮ್ಮ ಅಡುಗೆ ಕೋಣೆಯ ದಿನಚರಿ ಹೇಗಿರುತ್ತದೆ?
ನನ್ನ ಕೈರುಚಿ ಅಷ್ಟಕ್ಕಷ್ಟೇ. ನನ್ನ ಅಡುಗೆಮನೆಯಲ್ಲಿ ಅತಿ ಹೆಚ್ಚುಬಾರಿ ಮಾಡಲ್ಪಡುವ ಖಾದ್ಯ ಉಪ್ಪಿಟ್ಟು. ಎಲ್ಲರೂ ಉಪ್ಪಿಟ್ಟು ಎಂದರೆ ಮೂಗು ಮುರಿಯುತ್ತಾರೆ. ಆದರೆ, ಅಚ್ಯುತ್‌ಗೆ ಉಪ್ಪಿಟ್ಟು ಅಂದ್ರೆ ಪ್ರಾಣ. ಹೀಗಾಗಿ, ಉಪ್ಪಿಟ್ಟೊಂದನ್ನು ಚೆನ್ನಾಗಿ ಮಾಡುತ್ತೇನೆ. ಶಾಪಿಂಗ್‌ಗೆ ಅಂತ ಹೋದರೆ, ನನ್ನ ಕಣ್ಣು ಹೆಚ್ಚು ಹೋಗುವುದು ಪಾತ್ರೆ, ಪಿಂಗಾಣಿ ತಟ್ಟೆ, ಲೋಟಗಳ ಕಡೆಯೇ. ನನಗೆ ಅಡುಗೆ ಮಾಡುವ ಆಸಕ್ತಿಗಿಂತ ಅಡುಗೆಮನೆಯನ್ನು ಚಂದಗಾಣಿಸುವ ಆಸಕ್ತಿಯೇ ಜಾಸ್ತಿ!

ನಿಮ್ಮ ಆಲ್‌ಟೈಮ್‌ ಫೇವರಿಟ್‌ ಸಿನಿಮಾ ಮತ್ತು ನಟ ಯಾರು?
ನಟರಲ್ಲಿ ವಿಷ್ಣುವರ್ಧನ್‌ ಇಷ್ಟ. “ಬೆಳದಿಂಗಳ ಬಾಲೆ’, ಇಷ್ಟದ ಸಿನಿಮಾ. 

ಅಚ್ಯುತ್‌ ಅಭಿನಯದ ಚಿತ್ರಗಳಲ್ಲಿ ಯಾವುದಿಷ್ಟ?
ರಾಜಕುಮಾರ, ನಾನು ನನ್ನ ಕನಸು.
       
ನೀನಾಸಂ ನಟನೆಯ ಗೀಳು ಹಿಡಿಸುತ್ತೆ…
ನೀನಾಸಂನಲ್ಲಿ ನಟನೆ ಕುರಿತು ಪ್ರಾಯೋಗಿಕ ಮತ್ತು ಪಠ್ಯ ಎರಡೂ ರೀತಿಯ ತರಗತಿಗಳು ನಡೆಯುತ್ತವೆ. ಅಲ್ಲಿ ವಿದ್ಯಾರ್ಥಿಗಳಾಗಿ ಸೇರಿದವರು ನಾಟಕ ಅಥವಾ ನಟನೆಯನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ನಟನೆಯಲ್ಲೇ ಏನನ್ನಾದರೂ ಸಾಧಿಸಬೇಕು ಎಂಬ ಕಿಚ್ಚು ಹತ್ತಿಸುತ್ತದೆ ನೀನಾಸಂ. ರಂಗಭೂಮಿಯೇ ನಮ್ಮ ಕ್ಷೇತ್ರ, ಇಲ್ಲಿಯೇ ಏನಾದರೂ ಸಾಧಿಸಬೇಕು. ಈ ಕ್ಷೇತ್ರ ಬಿಟ್ಟು ಹೋದರೆ ನಮ್ಮ ಜೀವನ ವ್ಯರ್ಥ ಎಂಬ ಭಾವನೆ ಮೂಡುವಷ್ಟು ನಮ್ಮ ಮನಸ್ಸನ್ನು ಸೆಳೆದುಬಿಡುತ್ತದೆ.

ನಟನಾ ಜೀವನದ ಆರಂಭ ಎಲ್ಲಿ ಮತ್ತು ಹೇಗಾಯಿತು? 
ನಾನು 7ನೇ ತರಗತಿಯಲ್ಲಿದ್ದಾಗ ಚಿಕ್ಕಮಗಳೂರಿನಲ್ಲಿ ರಂಗ ಬೇಸಿಗೆ ಶಿಬಿರ ಆರಂಭವಾಗಿತ್ತು. ಅದಕ್ಕೆ ನನ್ನ ಅಪ್ಪನ ಸಹೋದ್ಯೋಗಿಗಳ ಮಕ್ಕಳೆಲ್ಲಾ ಸೇರಿಕೊಂಡಿದ್ದರು. ಹಾಗಾಗಿ ನಾನೂ ಸೇರಿಕೊಂಡೆ. ಇದು ಪ್ರತಿವರ್ಷ ಮುಂದುವರಿಯಿತು. ಆಗೆಲ್ಲಾ ಕಲಾವಿದೆಯಾಗಬೇಕು ಎಂಬ ಆಸಕ್ತಿಯೇನೂ ನನಗೆ ಇರಲಿಲ್ಲ. ಡಿಗ್ರಿ ಮುಗಿದ ಮೇಲೆ ನಟನೆಯನ್ನೇ ಪೂರ್ಣಪ್ರಮಾಣದ ವೃತ್ತಿಯಾಗಿ ಸ್ವೀಕರಿಸಬೇಕು ಎಂದು ನಿರ್ಧರಿಸಿ ರಂಗಾಯಣಕ್ಕೆ ಅರ್ಜಿ ಹಾಕಿದೆ.

– ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next