Advertisement

ಕಾಫಿ ಡೇ ಮಾದರಿಯಲ್ಲಿ ನಂದಿನಿ ಕೆಫೆ ;ಶ್ರೀಮಂತ ವರ್ಗದ ಗ್ರಾಹಕರ ಸೆಳೆಯಲು ಹಲವು ತಂತ್ರ

09:51 AM Mar 12, 2020 | keerthan |

ಬೆಂಗಳೂರು: ಹಾಲು ಹಾಗೂ ಅದರ ಉತ್ಪನ್ನಗಳಿಂದ ತನ್ನದೇ ಆದ ಬ್ರಾಂಡ್‌ ಮೌಲ್ಯ ಹೊಂದಿರುವ ಕೆಎಂಎಫ್ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಿಸಿ, ಕಾಫಿ ಡೇ ಮಾದರಿಯಲ್ಲಿ “ನಂದಿನಿ ಕೆಫೆ ಮೂ’ ಎಂಬ ಹೆಸರಿನ ಔಟ್‌ಲೆಟ್‌ ತೆರೆಯಲು ತೀರ್ಮಾನಿಸಿದೆ.

Advertisement

ಅಮುಲ್‌ ನಂತೆ ದೇಶಾದ್ಯಂತ ಬ್ರ್ಯಾಂಡ್‌ ಸೃಷ್ಟಿಸುವ ಕುರಿತಂತೆ ಕೆಎಂಎಫ್ ಆಡಳಿತ ಮಂಡಳಿ ಈಗಾಗಲೇ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಮುಂದಿನ ವರ್ಷದ ಮಾರ್ಚ್‌ ಅಂತ್ಯಕ್ಕೆ ರಾಜ್ಯಾದ್ಯಂತ ನಂದಿನಿ ಕೆಫೆ ತೆರೆಯಲು ನಿರ್ಧರಿಸಿದೆ.

ಕೆಎಂಎಫ್ ಉತ್ಪನ್ನಗಳಿಗೆ ರಾಜ್ಯದಲ್ಲಿ ಸಾಕಷ್ಟು ಬೇಡಿಕೆ ಇದೆ. ಆದರೆ, ನಂದಿನಿ ಬ್ರಾಂಡ್‌ ಮಧ್ಯಮ ವರ್ಗದವರಿಗೆ ಮಾತ್ರ ಸೀಮಿತವಾಗಿದ್ದು, ಶ್ರೀಮಂತ ವರ್ಗದವರನ್ನು ಸೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ ಹೊಸ ಯೋಜನೆ ರೂಪಿಸಲು ಕೆಎಂಎಫ್ ಮುಂದಾಗಿದೆ.

ನಂದಿನಿ ಕೆಫೆ ಮೂ: ಈಗಾಗಲೇ ಪ್ರಾಯೋಗಿಕವಾಗಿ ಬೆಂಗಳೂರಿನ ಜಯ ನಗರದಲ್ಲಿ ನಂದಿನಿ ಕೆಫೆ ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಬೆಂಗಳೂರಿನಲ್ಲಿ ಒಂದು ವರ್ಷದಲ್ಲಿ ಕನಿಷ್ಠ 25 ರಿಂದ 30 ನಂದಿನಿ ಕೆಫೆಗಳನ್ನು ತೆರೆಯಲು ಕೆಎಂಎಫ್ ನಿರ್ಧರಿಸಿದೆ. ಇದರೊಂದಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ತೆರೆಯಲು ರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಈಗ ಬೆಂಗಳೂರಿನಲ್ಲಿ 300 ಕ್ಕೂ ಹೆಚ್ಚು ಕೆಎಂಎಫ್ ನಂದಿನಿ ಹಾಲು ಮಾರಾಟ ಕೇಂದ್ರಗಳಿವೆ.

ಮುಂದಿನ ಐದು ವರ್ಷದಲ್ಲಿ ಎಲ್ಲ ಕೇಂದ್ರಗಳನ್ನು ಕಾಫಿ ಡೇ ಮಾದರಿಯಲ್ಲಿ ಅಭಿವೃದ್ಧಿ ಪಡೆಸಿ, ನಂದಿನಿ ಉತ್ಪನ್ನ ಮಾರಾಟ ಮಾಡುವ ಸಿಬ್ಬಂದಿಗೂ ಆಕರ್ಷಣೀಯ ಯುನಿಫಾರ್ಮ್, ಕಾಫಿ ಡೇ ಮಾದರಿಯಲ್ಲಿ ಅಲ್ಲಿಗೆ ಬರುವ ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಪ್ರಮುಖವಾಗಿ ಏರ್‌ಪೋರ್ಟ್‌ ಗಳು, ಮಾಲ್‌ಗ‌ಳಲ್ಲಿ ನಂದಿನಿ ಕೆಫೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿದಿದೆ.

Advertisement

ಆದಾಯ ಹೆಚ್ಚಳ ಗುರಿ: ರಾಜ್ಯದಲ್ಲಿ ಸದ್ಯ ಪ್ರತಿ ದಿನ 70 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಕೆಎಂಎಫ್ ಉತ್ಪನ್ನಗಳಿಂದ ಪ್ರತಿ ವರ್ಷ ಸುಮಾರು 15 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಲಾಗುತ್ತಿದೆ. ಆದರೆ, ಉತ್ತಮ
ಗುಣಮಟ್ಟ ಹಾಗೂ ಆರೋಗ್ಯಯುತ ಉತ್ಪನ್ನಗಳನ್ನು ತಯಾರಿಸಿದರೂ, ಅದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗದ ಕಾರಣ ನಂದಿನಿ ಉತ್ಪನ್ನಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮುಲ್‌ ರೀತಿ ಬ್ರ್ಯಾಂಡ್‌ ಸೃಷ್ಟಿಸಲು ಸಾಧ್ಯವಾಗಿಲ್ಲ. ಹೀಗಾಗಿ ಹೊಸ ಮಾದರಿಯಲ್ಲಿ ಬ್ರ್ಯಾಂಡ್‌ ಸೃಷ್ಟಿಸಿ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಕೆಎಂಎಫ್ ಆಡಳಿತ ಮಂಡಳಿ ನಿರ್ಧರಿಸಿದ್ದು, ಆ ಮೂಲಕ ಮುಂದಿನ ಐದು ವರ್ಷದಲ್ಲಿ ಮಂಡಳಿಯ ವಾರ್ಷಿಕ ವಹಿವಾಟು ಸುಮಾರು 35 ಸಾವಿರ ಕೋಟಿಗೆ ಹೆಚ್ಚಿಸಲು ಗುರಿ ಹೊಂದಲಾಗಿದೆ. ಈ ಮೂಲಕ ರೈತರ ಆದಾಯವನ್ನೂ ಹೆಚ್ಚಿಸಲು ಕೆಎಂಎಫ್ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬರಲಿದೆ ಚಾಕೊಲೇಟ್‌
ಕೆಎಂಎಫ್ ಹಾಲು, ಮೊಸರು, ಬೆಣ್ಣೆ, ಬಿಸ್ಕೆಟ್‌, ಕೇಕ್‌ ಸೇರಿದಂತೆ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದೆ. ಈಗ ಮಾರುಕಟ್ಟೆಯಲ್ಲಿ ಹೆಚ್ಚು ಬಳಕೆಯಾಗುವ ಹಾಗೂ ಮಕ್ಕಳು ಮತ್ತು ಹೆಣ್ಣು  ಮಕ್ಕಳನ್ನು ಆಕರ್ಷಿಸುವ ಚಾಕೋಲೇಟ ತಯಾರಿಸಲು ಮುಂದಾಗಿದೆ. ಖಾಸಗಿ ಕಂಪನಿಗಳು ಉತ್ಪಾದಿಸುವ ಕಿಟ್‌ ಕ್ಯಾಟ್‌, ಕ್ಯಾಡ್‌ಬರೀಸ್‌, ಡೈರಿಮಿಲ್ಕ್ ನಂತೆ ನಂದಿನಿ ಚಾಕೊಲೇಟ್‌ ಉತ್ಪಾದಿಸಲು ಕೆಎಂಎಫ್ ನಿರ್ಧರಿಸಿದ್ದು, ಈ ಬಗ್ಗೆ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಶೀಘ್ರವೇ ಮಾರುಕಟ್ಟೆಗೆ ನಂದಿನಿ ಬ್ರ್ಯಾಂಡ್‌ ನೇಮ್‌ನಲ್ಲಿ ಚಾಕೊಲೇಟ್‌ ಬಿಡುಗಡೆ ಮಾಡಲು ನಿರ್ಧರಿಸಿದೆ.

ಕೆಎಂಎಫ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಕಾಫಿ ಡೇ ಮಾದರಿ ಔಟ್‌ ಲೆಟ್‌ ತೆರೆಯಲಾಗುವುದು. ರಾಷ್ಟ್ರೀಯ ಬ್ರ್ಯಾಂಡ್‌ ಸೃಷ್ಟಿಸಲಾಗುತ್ತಿದೆ.
ಬಾಲಚಂದ್ರ ಜಾರಕಿಹೊಳಿ,ಕೆಎಂಎಫ್ ಅಧ್ಯಕ್ಷ

 

ಶಂಕರ್ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next