Advertisement

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರಕ್ಕೆ ಸೌಲಭ್ಯ

09:18 AM Jan 28, 2019 | Team Udayavani |

ಸಂಡೂರು: ವಿಶ್ವವಿದ್ಯಾಲಯದ ಮುಖ್ಯಕೇಂದ್ರಕ್ಕಿಂತಲೂ ಉತ್ತಮ ಕೇಂದ್ರವಾಗಿ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ ಅಭಿವೃದ್ಧಿ ಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಮ ಹೇಳಿದರು.

Advertisement

ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ಸ್ನೇಹಕೂಟ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ ನಾವುಗಳು ವಿಶ್ವವಿದ್ಯಾಲಯ ನಮಗೆ ಶಿಕ್ಷಣ ಕೊಟ್ಟು ಉನ್ನತ ಸ್ಥಾನಕ್ಕೇರಿಸಿದೆ. ಆದರೆ ನಾವೇನು ವಿಶ್ವವಿದ್ಯಾಲಯಕ್ಕೆ ಕೊಟ್ಟಿದ್ದೇವೆ ಎನ್ನುವ ಅವಲೋಕನ ಮಾಡಿಕೊಂಡಾಗ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂಬಿಎ, ಇತರ ಕೋರ್ಸ್‌ಗಳನ್ನು ತರಲಾಗುವುದು. ಈಗಾಗಲೇ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿನಿಲಯ ಆರಂಭಿಸಲಾಗಿದೆ. ವಿದ್ಯಾರ್ಥಿನಿಯರ ವಸತಿನಿಲಯಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಮುಂದಿನ ಹಂತದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ಇಡೀ ಸ್ನಾತಕೋತ್ತರ ಕೇಂದ್ರವನ್ನು ನವೀಕರಣ ಮಾಡಲಾಗುವುದು ಎಂದು ತಿಳಿಸಿದರು.

ರಸ್ತೆ, ಬೀದಿ ದೀಪ, ಬಾಲಕಿಯರಿಗೆ ಶಿಕ್ಷಣ ಉತ್ತಮ ಗ್ರಂಥಾಲಯ, ಕಂಪ್ಯೂಟರ್‌ ತರಬೇತಿ, ಆಧುನಿಕವಾಗಿ ಸಿಗುವಂತಹ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು. ಸಂಡೂರು ತಾಲೂಕು ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಹೊರತಂದು 1ನೇ ಸ್ಥಾನಕ್ಕೆ ತರಲು ನಿರಂತರ ಶ್ರಮವಹಿಸಲಾಗುವುದು ಎಂದರು.

Advertisement

ಈಗಾಗಲೇ ತಾಲೂಕಿನಾದ್ಯಂತ 22 ಪ್ರೌಢಶಾಲೆಗಳು, 11 ವಸತಿ ಶಾಲೆಗಳು, ಐಟಿಐ ಕಾಲೇಜು, ಡಿಪ್ಲೋಮಾ ಕಾಲೇಜು, ಶಿಕ್ಷಣದಲ್ಲಿ ಪೂರ್ಣ ಶಿಕ್ಷಣ ನೀಡುವ ಎಲ್ಲ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ 426 ಕಿ.ಮೀ. ರಸ್ತೆ ಅಭಿವೃದ್ಧಿಯಾಗಿದ್ದು, ಕೇವಲ 80 ಕಿ.ಮೀ. ಬಾಕಿ ಇದ್ದು, ಅದನ್ನೂ ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.

ನಿರ್ದೇಶಕ ಡಾ| ಗೋಪಾಲಕೃಷ್ಣ ಮಾತನಾಡಿ, ಮೂರು ಬಾರಿ ಶಾಸಕರಾಗಿ, ಸಚಿವರಾಗಿದ್ದರೂ ಸಹ ಇಂದಿಗೂ ಸಾಮಾನ್ಯ ವಿದ್ಯಾರ್ಥಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರದ ಅಭಿವೃದ್ಧಿಗೆ 15 ಕೋಟಿ ರೂ. ಅನುದಾನ ತಂದು ಈಗಾಗಲೇ ಅಭಿವೃದ್ಧಿ ಪಡಿಸಿದ್ದಾರೆ. ಪೂರ್ಣ ರಸ್ತೆ, ವಿದ್ಯುತ್‌ ಪೂರೈಕೆ, ಕುಡಿಯುವ ನೀರು, ಗ್ರಂಥಾಲಯ, ವಸತಿ ನಿಲಯಗಳು, ಜನರೇಟರ್‌ ವ್ಯವಸ್ಥೆ ಮಾಡಿ ಇಡೀ ಕೇಂದ್ರ ಅಧುನಿಕತೆಯತ್ತ ದಾಪುಗಾಲಿಡುವಂತೆ ಮಾಡಿದ್ದಾರೆ ಎಂದು ಹೇಳಿದರು.

ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ ವಿಭಾಗ) ಪ್ರೊ| ಸಿ.ಬಿ. ಹೊನ್ನುಸಿದ್ಧಾರ್ಥ ಮಾತನಾಡಿ,ಸಚಿವರು ಹೇಳಿದ ಮಾತನ್ನು ಪ್ರತಿಯೊಬ್ಬ ವಿದ್ಯಾರ್ಥಿ ಪಾಲಿಸಿದ್ದೇ ಆದಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ವಿಶ್ವವಿದ್ಯಾಲಯಕ್ಕೆ ನಮ್ಮ ಕೊಡುಗೆ ಏನು ಎನ್ನುವ ಮಾತು ಬಹು ಮುಖ್ಯ. ಅದು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ ಎಂದರು.

ಕುಲಸಚಿವರಾದ ಬಿ.ಕೆ. ತುಳಸಿಮಾಲಾ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ| ಆರ್‌. ಪುರುಷೋತ್ತಮ ರಡ್ಡಿ, ಎಂ.ವಿ. ರುದ್ರಮುನಿಯಪ್ಪ, ಗುಲ್ಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರೊ| ಶಿವಾಜಿ ವಾಘ್ಮೋರೆ, ಗುಲ್ಬರ್ಗಾ ವಿವಿವಿ ದೈಹಿಕ ನಿದೇರ್ಶಕ ಮಲ್ಲಿಕಾರ್ಜುನ ಎಸ್‌. ಪಾಸೋಡಿ, ಎಸ್‌.ಜೆ. ಗೋಪಾಲಕೃಷ್ಣ, ಪುರಸಭೆ ಅಧ್ಯಕ್ಷ ಗಡಂಬ್ಲಿ ಚನ್ನಪ್ಪ, ಶಶಿಧರ್‌ ಭಾಣದ್‌, ಸಣ್ಣ ನಿಂಗಪ್ಪ ಡಿಜೆಎ ಮಂಜುನಾಥ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next