ಚಿಕ್ಕಬಳ್ಳಾಪುರ: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಶುಭ ಸುದ್ದಿ ಕೊಟ್ಟಿದೆ. ಇನ್ನು ಮುಂದೆ ಪ್ರತಿ ದಿನ ಬೆಳಗ್ಗೆ 5.30ರ ಬದಲಾಗಿ 5 ಗಂಟೆಗೇ ನಂದಿಗಿರಿಧಾಮ ಪ್ರವೇಶಕ್ಕೆ ತೆರೆದುಕೊಳ್ಳಲಿದೆ.
ಅನುಮತಿ: ಹೌದು, ಶಾಲಾ, ಕಾಲೇಜುಗಳಿಗೆ ಬೇಸಿಗೆ ರಜೆಗಳು ಘೋಷಣೆ ಆಗುತ್ತಿದ್ದಂತೆ ನಂದಿಗಿರಿಧಾಮ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ. ಹೀಗಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ನಂದಿಗಿರಿಧಾಮ ಪ್ರವೇಶದ ಸಮಯವನ್ನು ಪರಿಷ್ಕರಿಸಿರುವ ಜಿಲ್ಲಾಡಳಿತ ಅರ್ಧ ಗಂಟೆ ಮೊದಲೇ ನಂದಿಗಿರಿ ಪ್ರವೇಶಿಸಲು ಅನುಮತಿ ಕಲ್ಪಿಸಿ ಆದೇಶಿಸಿದೆ.
ಸುತ್ತಾಡಲು ಅವಕಾಶ: ಇದುವರೆಗೂ ನಂದಿಗಿರಿಧಾಮದ ಪಾರ್ಕಿಂಗ್ ಸ್ಥಳದ ನಿರ್ವಹಣೆಯನ್ನು ರಾಜ್ಯದ ಪ್ರವಾಸೋ ದ್ಯಮದ ಅಭಿವೃದ್ಧಿ ನಿಗಮದ ವತಿಯಿಂದ ಮಾಡಲಾಗುತ್ತಿತ್ತು. ಈ ಹಿಂದೆ ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶ ಸಮಯವನ್ನು ಬೆಳಗ್ಗೆ 5.30 ರಿಂದ ಸಂಜೆ 6ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಆದರೆ, ಪ್ರಸ್ತುತ ಬೇಸಿಗೆ ರಜೆ ಪ್ರಾರಂಭವಾಗುತ್ತಿದ್ದು, ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗಾಗಿ ಪ್ರವಾಸಿಗರಿಗೆ ಹೆಚ್ಚಿನ ಕಾಲಾವಕಾಶ ಒದಗಿಸುವ ನಿಟ್ಟಿನಲ್ಲಿ ಮತ್ತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ನಂದಿಗಿರಿಧಾಮ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷರ ಆದೇಶದಂತೆ ನಂದಿ ಗಿರಿಧಾಮದ ಪ್ರವೇಶ ಸಮಯವನ್ನು ಇನ್ನೂ ಮುಂದೆ ಪ್ರತಿ ದಿನ ಬೆಳಗ್ಗೆ 5ರಿಂದ ಸಂಜೆ 7ರವರೆಗೆ ನಿಗದಿಪಡಿಸಲಾಗಿದೆ. ಈ ಮೂಲಕ, ಹೆಚ್ಚುವರಿ ಒಂದೂವರೆ ಗಂಟೆ ಕಾಲ ನಂದಿಗಿರಿಧಾಮ ಸುತ್ತಾಡಲು ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಅವಕಾಶ ನೀಡಿದೆ.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು: ಬೆಳಗ್ಗೆ 5ರಿಂದ ಸಂಜೆ 7ಗಂಟೆವರೆಗೆ ಪ್ರವಾಸಿಗರಿಗೆ ನಂದಿಬೆಟ್ಟ ವೀಕ್ಷಣೆಗೆ ಸಮಯ ನಿಗದಿಪಡಿಸಿ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಯಶವಂತಪುರ ವೃತ್ತ, ಬೆಂಗಳೂರು ಅವರು ಕೋರಿದ್ದರ ಹಿನ್ನೆಲೆ ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿಗಿರಿಧಾಮಕ್ಕೆ ಈ ಹಿಂದೆ ಇದ್ದ ಸಾರ್ವಜನಿಕರ ಪ್ರವೇಶ ಸಮಯವನ್ನು ಬದಲಿಸಿ, ಹೊಸದಾಗಿ ಪರಿಷ್ಕರಿಸಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಆದೇಶಿಸಿದ್ದಾರೆ.
ಸೆ.30ರ ತನಕ ಪರಿಷ್ಕೃತ ಸಮಯ ಅನ್ವಯ: ಸದ್ಯ ಜಿಲ್ಲೆಯ ನಂದಿಗಿರಿಧಾಮದ ಪ್ರವಾಸಿಗರಿಗೆ ಪರಿಷ್ಕರಣೆಗೊಂಡಿರುವ ಬೆಳಗ್ಗೆ 5ಗಂಟೆಯಿಂದ ಸಂಜೆ 7ಗಂಟೆವರೆಗೆ ಸಮಯವನ್ನು ಏ.12ರಿಂದ ಅನ್ವಯ ವಾಗುವಂತೆ ಮುಂದಿನ ಸೆ.30 ತಿಂಗಳವರೆಗೂ ಅನ್ವಯವಾಗಲಿದೆ ಎಂದು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಎನ್.ಎಂ.ನಾಗರಾಜ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.