ಮಹಾರಾಷ್ಟ್ರ: ಮಹಾರಾಷ್ಟ್ರದ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಮತ್ತೆ ಮುಂದುವರೆದಿದೆ. ಕೇವಲ 8 ದಿನಗಳಲ್ಲಿ 108 ರೋಗಿಗಳು ಸಾವನ್ನಪ್ಪಿದ ಘಟನೆ ಸಂಚಲನ ಮೂಡಿಸಿದೆ.
ಸೆಪ್ಟೆಂಬರ್ ಕೊನೆಯ ವಾರ ಅಕ್ಟೋಬರ್ ಆರಂಭದ 48 ಗಂಟೆಗಳ ಒಳಗೆ 31 ರೋಗಿಗಳು ಸಾವನ್ನಪ್ಪಿದ್ದಾರೆ. ಇದಾದ ನಂತರ ಈ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಮುಂದುವರಿದಿತ್ತು. ಕಳೆದ 24 ಗಂಟೆಗಳಲ್ಲಿ ಒಂದು ಶಿಶು ಸೇರಿದಂತೆ 11 ರೋಗಿಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಾವಿನ ಘಟನೆಗಳ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ, ಆದರೆ ಯಾವುದೇ ಫಲಿತಾಂಶವಿಲ್ಲ.
ಕಳೆದ 24 ಗಂಟೆಗಳಲ್ಲಿ ವೈದ್ಯರು 1,100 ಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಿದ್ದಾರೆ. ಹೊಸದಾಗಿ 191 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಡೀನ್ ತಿಳಿಸಿದ್ದಾರೆ. 24 ಗಂಟೆಗಳಲ್ಲಿ ಸರಾಸರಿ ಸಾವಿನ ಪ್ರಮಾಣ 13 ಆಗಿತ್ತು. ಈ ಹಿಂದೆ ಔಷಧಿ ಕೊರತೆಯೇ ರೋಗಿಗಳ ಸಾವಿಗೆ ಕಾರಣ ಎಂದು ವೈದ್ಯರು ಹೇಳುತ್ತಿದ್ದರು. ಸದ್ಯ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಇಲ್ಲ ಎಂದು ಆಸ್ಪತ್ರೆಯ ಡೀನ್ ಹೇಳುತ್ತಿದ್ದಾರೆ ಆದರೆ ರೋಗಿಗಳ ಸಾವು ಮಾತ್ರ ನಿಂತಿಲ್ಲ.
ಯಾವುದೇ ರೋಗಿಗಳು ಔಷಧಿ ಕೊರತೆಯಿಂದ ಸಾವನ್ನಪ್ಪಿಲ್ಲ, ಬದಲಿಗೆ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಡೀನ್ ಹೇಳಿದ್ದಾರೆ. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ 60ಕ್ಕೂ ಹೆಚ್ಚು ಶಿಶುಗಳು ದಾಖಲಾಗಿವೆ, ಆದರೆ ಶಿಶುಗಳನ್ನು ನೋಡಿಕೊಳ್ಳಲು ಕೇವಲ ಮೂವರು ದಾದಿಯರು ಮಾತ್ರ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ ಹೇಳಿದರು. ಒಟ್ಟಿನಲ್ಲಿ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸರಣಿ ಸಾವಿನ ಪ್ರಕರಣ ಆತಂಕಕಾರಿಯಾಗಿದೆ.
ಇದನ್ನೂ ಓದಿ: Aamir Khan: ʼತಾರೆ ಜಮೀನ್ ಪರ್ʼ ಟೈಟಲ್ ಹೋಲುವ ಹೊಸ ಸಿನಿಮಾವನ್ನು ಘೋಷಿಸಿದ ಆಮಿರ್ ಖಾನ್