Advertisement

ಹುಲ್ಲಿನ ಮಹಡಿಯಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆಗೆ 105 ವರ್ಷ

11:51 PM Nov 18, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಉಪ್ಪುಂದ:
ಮಣ್ಣಿನಿಂದ ಕಟ್ಟಿರುವ, ಹುಲ್ಲಿನ ಮಹಡಿಯನ್ನು ಹೊಂದಿರುವ ಒಂದು ಸಣ್ಣ ಕಟ್ಟಡದಲ್ಲಿ 1914ರಲ್ಲಿ ನಂದನವನದ ಜನನಿಭೀಡ ಪ್ರದೇಶದಲ್ಲಿ ಆರಂಭವಾದ ಐಗಳ ಶಾಲೆಗೆ ಶತಮಾನೋತ್ಸವ ಪುರೈಸಿರುವ ಹೆಗ್ಗಳಿಕೆ.

ನಂದನವನ ಕಿ.ಪ್ರಾ. ಶಾಲೆಯು 105 ವರ್ಷಗಳ ಇತಿಹಾಸ ಹೊಂದಿದ್ದು, ಈಗಿನ ಜಾಗದಲ್ಲಿ ರಾಮ ಉಪಾಧ್ಯಾಯ ಎನ್ನುವರು ತಮ್ಮ ಸ್ವಂತ ಜಾಗದಲ್ಲಿ ಹುಲ್ಲು ಮಹಡಿನ ಕಟ್ಟಡದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಆರಂಭಿಸಿದ್ದರು. ಬಳಿಕ ಸರಕಾರಿ ಶಾಲೆಯಾಗಿ ಮಾರ್ಪಾಡುಗೊಂಡಿತ್ತು. ಶಾಲೆಯ ಜಾಗ ರಾಮ ಉಪಾಧ್ಯಾಯ ಅವರ 3.50ಸೆಂಟ್ಸ್‌ ಹಾಗೂ ಶೇಷಿ ಗಾಣಿಗ, ಸುಬ್ಬಿ ಗಾಣಿಗ ಅವರ ಅಧೀನದಲ್ಲಿದ್ದು ಊರಿನವರ ಮನವಿ ಮೇರೆಗೆ ಶಾಲೆಗಾಗಿ ಬಿಟ್ಟುಕೊಟ್ಟಿದ್ದರು. ಇವರಿಗೆ ಊರಿನವರು ಸೇರಿ ಯಕ್ಷಗಾನ ಆಟ ನಡೆಸಿ ಸಂಗ್ರಹಗೊಂಡ ಅಲ್ಪಸ್ವಲ್ಪ ಹಣವನ್ನು ನೀಡಿರುವುದಾಗಿ ಸ್ಥಳೀಯ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ. ಶಾಲೆಯು 10 ಸೆಂಟ್ಸ್‌ ಜಾಗವನ್ನು ಹೊಂದಿದೆ. ಸರಕಾರಕ್ಕೆ ಒಳಪಟ್ಟ ಬಳಿಕ 4ನೇ ತರಗತಿಯ ವರೆಗೆ ಶಿಕ್ಷಣ ನೀಡಲಾಗುತ್ತಿತ್ತು. ಮಕ್ಕಳ ಸಂಖ್ಯೆ ಹೆಚ್ಚಾದಂತೆ ಮೂರು ಕೊಠಡಿಗಳನ್ನು ನಿರ್ಮಿಸಲಾಯಿತು.ಬಳಿಕ 5ನೇ ತರಗತಿಯನ್ನು ಪ್ರಾರಂಭಿಸಲಾಯಿತು.

ಪ್ರಸ್ತುತ ಸ್ಥಿತಿಗತಿ
ಇದೀಗ ಒಂದೇ ಕೊಠಡಿ ಮಾತ್ರ ಇದ್ದು 1ರಿಂದ 5ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಅದರಲ್ಲಿಯೇ ಕುಳಿತು ಕೊಳ್ಳಬೇಕು.ಅಲ್ಲದೇ ಶಿಕ್ಷಕರ ಕೊಠಡಿ, ಶಾಲಾ ದಾಖಲಾತಿ ಎಲ್ಲದಕ್ಕೂ ಇರುವುದೊಂದೇ ಕೊಠಡಿ. 1ರಿಂದ 3ನೇ ತರಗತಿಯವರೆಗೆ ನಲಿಕಲಿ ಪದ್ಧತಿಯಂತೆ ಒಂದೇ ತರಗತಿಯಲ್ಲಿ ಪಾಠ ಮಾಡಲು ಅಡ್ಡಿ ಇಲ್ಲ.4ಮತ್ತು 5ನೇ ತರಗತಿಯ ವಿದ್ಯಾರ್ಥಿಗಳನ್ನು ಎಲ್ಲ ವಿದ್ಯಾರ್ಥಿಗಳ ಜೊತೆಗೆ ಪಾಠ ಮಾಡಲು ಸಾಧ್ಯವಿಲ್ಲ. ಆದರಿಂದ ಅಡುಗೆಕೋಣೆಯಲ್ಲಿ ಕೂರಿಸಿಕೊಂಡು ಪಾಠ ಮಾಡಬೇಕಾದ ಅನಿವಾರ್ಯದ ಪರಿಸ್ಥಿತಿ. ಸುಮಾರು 20 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಅಡುಗೆ ಕೋಣೆಯು ಮಳೆಗೆ ಸೊರುತ್ತಿದೆ.

ಆಗಲೂ ಈಗಲೂ
ಒಂದೇ ಕೊಠಡಿ
ಪ್ರಸ್ತುತ 25 ವಿದ್ಯಾರ್ಥಿಗಳಿದ್ದಾರೆ. ಎಲ್‌ಕೆಜಿಯಿಂದ 5ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ.ಇಬ್ಬರು ಶಿಕ್ಷಕರು, ಒಬ್ಬರು ಗೌರವ ಶಿಕ್ಷಕರು ಇದ್ದಾರೆ. ಕಳೆದ ಆಗಸ್ಟ್‌ 10ರಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಶಾಲೆಯ ಮೂರು ಕೊಠಡಿ ಗಳು ಧರಾಶಾಯಿಯಾಗಿದೆ. ರಾತ್ರಿ ಹಿತ್ತಿನಲ್ಲಿ ಕಟ್ಟಡ ಕುಸಿದ ಪರಿಣಾಮ ಯಾವುದೇ ಅನಾಹುತವಾಗಿಲ್ಲ. ಇದುವರೆಗೂ ಯಾವುದೇ ಕಟ್ಟಡ ನಿರ್ಮಿಣವಾಗದ ಕಾರಣ ಅಷ್ಟು ಮಕ್ಕಳು ಒಂದೇ ಕೋಣೆಯಲ್ಲಿ ಕುಳಿತು ಪಾಠ ಕಲಿಯುತ್ತಿದ್ದಾರೆ.

Advertisement

ಈ ಭಾಗದ ನೂರಾರು ವಿದ್ಯಾರ್ಥಿಗಳು ಊರಿನ ಶಾಲೆಯಲ್ಲಿ ಮೂಲ ಸೌಕರ್ಯ, ವಿವಿಧ ವ್ಯವಸ್ಥೆಗಳ ಕೊರತೆಯಿಂದಾಗಿ ಬೇರೆ ಬೇರೆ ಶಾಲೆಗಳಿಗೆ ತೆರಳುವಂತೆ ಮಾಡಿದೆ. ಶಾಸಕ ಸುಕುಮಾರ್‌ ಶೆಟ್ಟಿಯವರ ಮುರ್ತುವಜಿಯಿಂದ ಒಂದು ಕಟ್ಟಡಕ್ಕೆ ರೂ.10ಲಕ್ಷ ಅನುದಾನ ನೀಡಿಲಾಗಿದೆ. ಇನ್ನಷ್ಟೇ ಕಾಮಗಾರಿ ಆರಂಭಿಸಬೇಕಿದೆ. ಇನ್ನು ಎರಡು ಕೊಠಡಿ ಅಗತ್ಯವಿದೆ. ಮಳೆಯಿಂದಾಗಿ ಕಟ್ಟಡ ಬಿದ್ದು ಹೋಗಿದ್ದರೂ ಪ್ರಕೃತಿ ವಿಕೋಪದಡಿಯಲ್ಲಿ ಯಾವುದೇ ಅನುದಾನ ಮಂಜೂರು ಆಗದಿರುವುದು ಸಂಬಂಧಪಟ್ಟ ಇಲಾಖೆಗೆ ಶಿಕ್ಷಣ ಸಂಸ್ಥೆಗಳ ಮೇಲಿರುವ ಕಾಳಜಿಯನ್ನು ತೋರ್ಪಡಿಸುತ್ತದೆ.

ಆಗಿನ ಕಾಲದಲ್ಲಿ ಮನೆಯವರು ಶಾಲೆಗೆ ಹೋಗಲು ಬಿಡುತ್ತಿಲ್ಲ, ನಾನು ಶಾಲೆಗೆ ಹೋಗುವ ಮಕ್ಕಳ ಜತೆಗೆ ಹೋಗುತ್ತಿದ್ದೆ. ಊರಿನವರು, ಹಳೆ ವಿದ್ಯಾರ್ಥಿಗಳು ಜೊತೆಗೂಡಿ ಶಾಲೆಯ ಉಳಿಸಲು ಕೈಜೋಡಿಸಬೇಕಿದೆ..
-ಅಬ್ಬಕ್ಕ ಪೂಜಾರಿ , ಹಳೆ ವಿದ್ಯಾರ್ಥಿ

ಶಾಲೆಗೆ 3ಕೊಠಡಿ, ಆಫೀಸ್‌ ರೂಮ್‌, ಕಂಪ್ಯೂಟರ್‌ ಶಿಕ್ಷಣ ಕಲಿಸಲು ವ್ಯವಸ್ಥೆ ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ. ಹೆಚ್ಚಿನ ವ್ಯವಸ್ಥೆಗಳಿದ್ದರೆ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತದೆ. ಪೂರಕ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟವರು ಗಮನಹರಿಸಬೇಕಿದೆ..
-ರುಕ್ಮಿಣಿ ಬಿ., ಮುಖ್ಯ ಶಿಕ್ಷಕಿ

-ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next