ಬೆಂಗಳೂರು : ತೆಲುಗು ಚಿತ್ರರಂಗದ ಪ್ರಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಮಾಡಿ ಕಣ್ಣೀರಿಟ್ಟಿದ್ದಾರೆ.
ಬಾಲಕೃಷ್ಣ ಅವರು ನಟ ಪ್ರಭುದೇವ ಅವರೊಂದಿಗೆ ಆಗಮಿಸಿ , ಪುನೀತ್ ಅವರ ಅಂತಿಮ ದರ್ಶನ ಮಾಡಿ ಕಣ್ಣೀರಿಟ್ಟರು. ಶಿವರಾಜ್ ಕುಮಾರ್ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ ಅವರು, ದೇವರು ಬಹಳ ದೊಡ್ಡ ತಪ್ಪು ಮಾಡಿದ್ದಾನೆ. ನಾವು ಒಂದೇ ಕುಟುಂಬದ ಹಾಗೆ ಬದುಕಿದ್ದೆವು. ನನ್ನ ತಮ್ಮನನ್ನು ಕಳೆದುಕೊಂಡಿದ್ದೇನೆ. ಅಪ್ಪು ಒಳ್ಳೆಯ ಸಮಾಜ ಸೇವಕನಾಗಿದ್ದ ಎಂದರು.
ಅಭಿಮಾನಿಗಳ ಸಾಗರ
ಕಂಠೀರವ ಸ್ಟೇಡಿಯಂ ನಲ್ಲಿ ಇಂದು ಸಂಜೆಯ ವರೆಗೆ ಪುನೀತ್ ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ಅಭಿಮಾನಿ ಸಾಗರವೇ ಹರಿದು ಬಂದಿದೆ.
ವಿವಿಐಪಿ , ವಿಐಪಿ ಮತ್ತು ಅಭಿಮಾನಿಗಳಿಗೆ ಪ್ರತ್ಯೇಕ ದ್ವಾರಗಳ ಮೂಲಕ ಒಳಗೆ ಬಿಡಲಾಗುತ್ತಿದೆ. ವ್ಯಾಪ್ಯಾಕ್ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.