ಬೆಳ್ಮಣ್: ಇಲಾಖಾಧಿಕಾರಿಗಳ ಗೈರು ಹಾಜರಿಯಿಂದಾಗಿ ನಂದಳಿಕೆ ಗ್ರಾಮಸಭೆ ಕಾಟಾಚಾರಕ್ಕೆ ನಡೆದ ಗ್ರಾಮಸಭೆಯ ಪಟ್ಟಿಗೆ ಸೇರ್ಪಡೆಗೊಂಡಿತು. ನಂದಳಿಕೆ ಗ್ರಾಮ ಪಂಚಾಯತ್‌ನ ದ್ವಿತೀಯ ಸುತ್ತಿನ ಗ್ರಾಮ ಸಭೆ ನಂದಳಿಕೆ ಬೋರ್ಡು ಶಾಲಾ ಸಭಾಂಗಣದಲ್ಲಿ ಸೋಮವಾರ ನಡೆದಾಗ ಗ್ರಾಮ ಸಭೆಯಲ್ಲಿ ಭಾಗವಹಿಸಿ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡಬೇಕಾಗಿದ್ದ ಅಧಿಕಾರಿಗಳು ವೇದಿಕೆಯಲ್ಲಿ ಗೈರಾಗಿದ್ದು ಸೇರಿದ್ದ ಗ್ರಾಮಸ್ಥರು ಆಕ್ರೋಶಗೊಂಡರು.
ಕಂದಾಯ ಇಲಾಖೆಯ ನಂದಳಿಕೆ ಗ್ರಾಮ ಪಂಚಾಯತ್ ಗ್ರಾಮ ಕರಣಿಕ ಆನಂದ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಮೇಲ್ವಿಚಾರಕಿ ಸೌಭಾಗ್ಯ ಮಾತ್ರ ವೇದಿಕೆಯಲ್ಲಿದ್ದು ಗ್ರಾಮಸ್ಥರಿಗೆ ಮಾಹಿತಿಯ ಕರ್ತವ್ಯ ಮುಗಿಸಿಕೊಟ್ಟರು. ಇದೇ ಸಂದರ್ಭ ವಿವಿಧ ಇಲಾಖೆಯ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ನಂದಳಿಕೆ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ತಾ.ಪಂ. ಸದಸ್ಯೆ ಪುಷ್ಪಾ ಸತೀಶ್ ಪೂಜಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ್ ಸಾಲ್ಯಾನ್, ನೋಡಲ್ ಅಧಿಕಾರಿ ಮಂಜು ದೇವಾಡಿಗ, ಕೌನ್ಸಿಲರ್ ಅಮರ್‌ನಾಥ್ ಹೆಗ್ಡೆ, ಶಾಲಾ ಮುಖ್ಯ ಶಿಕ್ಷಕಿ ಎಮಿಲ್ಡ ಪಿಂಟೋ, ಗ್ರಾಮ ಪಂಚಾಯತ್ ಸದಸ್ಯರಾದ ಉಷಾ, ಗಿರೀಶ್ ಶೆಟ್ಟಿ, ಪ್ರವೀಣ್, ಜೋಯ್ಸ ಟೆಲ್ಲಿಸ್ ಮತ್ತಿತರರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಧಿಕಾರಿ ಶಂಕರ್ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.
ಇಲಾಖೆ ಅಧಿಕಾರಿಗಳು ಗ್ರಾಮಸಭೆಗಳಲ್ಲಿ ಭಾಗವಹಿಸುವುದು ಮುಖ್ಯ ವಾಗಿದ್ದು, ಗ್ರಾಮಸ್ಥರ ಬೇಕು ಬೇಡಿಕೆಗಳಿಗೆ ಸ್ಪಂದಿಸುವ ಅಧಿಧಿಕಾರಿಗಳೇ ಗೈರಾದರೇ ಮಾಹಿತಿ ದೊರಕುವುದಾದರೂ ಹೇಗೆ ?.
-ರೇಷ್ಮಾ ಉದಯ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ