ಬೆಳಗಾವಿ: ನೂತನ ಕೃಷಿ ತಿದ್ದುಪಡಿ ಕಾಯ್ದೆಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬರುತ್ತಿದ್ದ ಆದಾಯ ಗಣನೀಯವಾಗಿ ಇಳಿಮುಖವಾಗುತ್ತಿತ್ತು, ಖಾನಾಪುರ ತಾಲೂಕಿನಲ್ಲಿರುವ ನಂದಗಡ ಎಪಿಎಂಸಿ ಆದಾಯ ಇಲ್ಲದೇ ಮುಚ್ಚುವ ಹಂತಕ್ಕೆ ತಲುಪಿದೆ.
ನೂತನ ಕೃಷಿ ಕಾಯ್ದೆಯಿಂದ ರೈತರು ತಮ್ಮ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಎಪಿಎಂಸಿಗೆ ಬರುತ್ತಿದ್ದ ಸೆಸ್ ಸಂಗ್ರಹದಲ್ಲಿ ಸಾಕಷ್ಟು ಇಳಿಕೆ ಆಗುತ್ತಿದೆ. ಇದರಿಂದ ಮಾರುಕಟ್ಟೆ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲು ಆರಂಭಿಸಿದೆ.
ಹೊರಗಡೆಯೇ ಮಾರಾಟ ಹೆಚ್ಚು: ನಂದಗಡ ಎಪಿಎಂಸಿಗೆ ಭತ್ತ, ಗೋಡಂಬಿ, ಮೆಕ್ಕೆಜೋಳ ಬರುತ್ತಿದೆ. ರೈತರು ಮಾರುಕಟ್ಟೆಗೆಗೆ ಸಣ್ಣ ಪ್ರಮಾಣದಲ್ಲಿ ಸೋಯಾಬಿನ್ ತಂದು ಕೊಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬಾರದೇ ರೈತರು ತಮಗೆ ಬೇಕಾದ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.
ಕಳೆದ ವರ್ಷ ನಂದಗಡ ಎಪಿಎಂಸಿ 55 ಲಕ್ಷ ರೂ. ಆದಾಯದ ಗುರಿ ಇಡಲಾಗಿತ್ತು. ಅದರಂತೆ 49 ಲಕ್ಷ ರೂ. ಆದಾಯ ಬಂದಿತ್ತು. ಸರ್ಕಾರದ ನೂತನ ಕಾಯ್ದೆಯಿಂದಾಗಿ ಜುಲೆ„ 2020ರಿಂದ ಆದಾಯ ಕುಸಿತಗೊಂಡಿದ್ದು, ಜನೇವರಿವರೆಗೆ ಕೇವಲ 16 ಲಕ್ಷ ರೂ. ಮಾತ್ರ ಆದಾಯ ಬಂದಿದೆ. ದಲ್ಲಾಳಿಗಳು ನೇರವಾಗಿ ರೈತರ ಮನೆ ಬಾಗಿಲಿಗೆ ಹೋಗಿ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿರುವುದರಿಂದ ಇದರ ನೇರ ಪರಿಣಾಮ ಎಪಿಎಂಸಿ ಮೇಲೆ ಬಿದ್ದಿದೆ.
ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿ ಇಡಲು ಮಾಡಿರುವ ಗೋದಾಮು ಬಾಡಿಗೆ ರೂಪದಲ್ಲಿ ನೀಡಲಾಗಿದ್ದು, ಇದಕ್ಕೆ ಪ್ರತಿ ತಿಂಗಳು 28 ಸಾವಿರ ರೂ. ಬರುತ್ತಿದೆ. ಜತೆಗೆ ಇನ್ನೆರಡು ಗೋದಾಮು ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಬಾಗಿಲು ಹಾಕಲಾಗಿದೆ. ಇನ್ನುಳಿದ ನಾಲ್ಕು ಮಳಿಗೆಗಳು ಇದ್ದು,ಬಾಡಿಗೆಗಾಗಿ ಟೆಂಡರ್ ಕರೆಯಲಾಗಿದೆ. ಸೆಸ್ ಸಂಗ್ರಹಕ್ಕೂ ಇಲ್ಲ ಅವಕಾಶ: ಕೃಷಿ ಉತ್ಪನ್ನಗಳ ಒಳಗೆ ಹಾಗೂ ಹೊರಗೆ ಮಾರಾಟಕ್ಕೆ ಸೆಸ್ ಸಂಗ್ರಹಿಸಲಾಗುತ್ತಿತ್ತು. ನೂತನ ಕೃಷಿ ತಿದ್ದುಪಡಿಕಾಯ್ದೆಯಿಂದಾಗಿ ಹೊರಗಡೆ ಮಾರಾಟವಾಗುವ ಉತ್ಪನ್ನಕ್ಕೆ ಸೆಸ್ ಸಂಗ್ರಹಿಸಲು ಅವಕಾಶ ಇಲ್ಲ. ಎಪಿಎಂಸಿಯ ವರಮಾನ ಇಳಿಕೆಯಾಗಲು ಇದು ಮುಖ್ಯ ಕಾರಣವಾಗಿದೆ. ದಿನದಿಂದ ದಿನಕ್ಕೆ ವರಮಾನ ಇಳಿಕೆ ಆಗುತ್ತಿರುವುದರಿಂದ ಎಪಿಎಂಸಿ ನಡೆಸುವುದಾದರೂ ಹೇಗೆ ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡುತ್ತಿದೆ.
ಬೀಗ ಹಾಕುವುದೊಂದೇ ಬಾಕಿ: ಈ ಮುಂಚೆ ರೈತರ ಬಳಿಯೇ ಹೋಗಿ ಕೃಷಿ ಉತ್ಪನ್ನಗಳನ್ನು ಖರೀದಿಸಿಕೊಂಡು ಬಂದು ಆದಾಯ ಹೆಚ್ಚಿಸಲಾಗುತ್ತಿತ್ತು. ಬೀಡಿ, ಖಾನಾಪುರ ಕಡೆಯಿಂದಲೂ ಕೃಷಿ ಉತ್ಪನ್ನಗಳು ನಮ್ಮ ಎಪಿಎಂಸಿಗೆ ಬರುತ್ತಿದ್ದವು. ಸೆಸ್ ಸಂಗ್ರಹಿಸಿಕೊಂಡು ಎಪಿಎಂಸಿ ಲಾಭದಲ್ಲಿತ್ತು. ಈಗ ಎಪಿಎಂಸಿಯ ಅವಶ್ಯಕತೆ ಇದ್ದವರು ಮಾತ್ರ ಬರುತ್ತಿದ್ದಾರೆ. ಇದರಿಂದ ಆದಾಯ ಬಹಳಷ್ಟು ಕಡಿಮೆ ಆಗಿದೆ. ಎಪಿಎಂಸಿಗೆ ಮುಂದಿನ ದಿನಗಳಲ್ಲಿ ಬೀಗ ಹಾಕುವುದೊಂದೇ ಬಾಕಿ ಉಳಿದಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಸಿಬ್ಬಂದಿ ಕೊರತೆ: ನಂದಗಡ ಎಪಿಎಂಸಿಗೆ ಒಟ್ಟು 9 ಸಿಬ್ಬಂದಿಯ ಅಗತ್ಯವಿದೆ. 4-5 ವರ್ಷದಿಂದ ಕೇವಲ ಮೂವರು ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗಳ ಕೊರತೆಯಿಂದ ಇಲ್ಲಿ ಕಾರ್ಯನಿರ್ವಹಿಸುವುದೇ ಕಷ್ಟಕರವಾಗಿದೆ.
ಭೈರೋಬಾ ಕಾಂಬಳೆ