Advertisement

ರಾಮ ಚಂದನ್‌ಗೆ ನಿಟ್ಟೂರು ಬೋಜಪ್ಪ ಸುವರ್ಣ ಪ್ರಶಸ್ತಿ 

08:15 AM Feb 09, 2018 | Team Udayavani |

ಉಡುಪಿ ಯಕ್ಷಗಾನ ಕಲಾ ಕ್ಷೇತ್ರ ಸಂಸ್ಥೆಯ ಸಂಸ್ಥಾಪಕ ನಿಟ್ಟೂರು ಬೋಜಪ್ಪ ಸುವರ್ಣ ಸ್ಮರಣಾರ್ಥ ನೀಡುವ ಪ್ರಶಸ್ತಿಗೆ ಈ ಸಾಲಿನಲ್ಲಿ ನಡುತಿಟ್ಟಿನ ಕಲಾವಿದ ಹೆಮ್ಮಾಡಿ ರಾಮ ಚಂದನ್‌ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಸಂಸ್ಥಾಪನಾ ದಿನವಾದ ಫೆ.10ರಂದು ಪ್ರಶಸ್ತಿ ಪ್ರದಾನಿಸಲಾಗುವುದು. 

Advertisement

ವಿವಿಧ ಬಯಲಾಟ ಮೇಳಗಳಲ್ಲಿ ದಶಕಗಳಿಂದ ತಿರುಗಾಟ ನಡೆಸಿ ನಿವೃತ್ತಿಯ ಅಂಚಿನಲ್ಲಿರುವ ಕಲಾವಿದ ರಾಮ ಚಂದನ್‌. ಗೋಳಿಗರಡಿ ಮೇಳವೊಂದರಲ್ಲೇ ದೀರ್ಘ‌ಕಾಲ ತಿರುಗಾಟ ನಡೆಸುತ್ತಿರುವ ಇವರು ಹಾಲಾಡಿ, ಅಮೃತೇಶ್ವರಿ, ಕಮಲಶಿಲೆ, ಕಳುವಾಡಿ, ಬಗ್ವಾಡಿ ಮುಂತಾದ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಕುಂದಾಪುರದಲ್ಲಿ ಚಾಲ್ತಿ ಇರುವ ನಡುತಿಟ್ಟಿನ ಪ್ರಾತಿನಿಧಿಕ ಕಲಾವಿದ ಇವರು.

ಹೆಮ್ಮಾಡಿಯ ಬುಗ್ರಿಕಡುವಿನಲ್ಲಿ ಮಂಜ ಪೂಜಾರಿ ಮತ್ತು ಚಿಕ್ಕಮ್ಮ ದಂಪತಿಯ ಮಗನಾಗಿ ಜನಿಸಿದ ರಾಮ ಚಂದನ್‌ ಉಪ್ಪಿನಕುದ್ರುವಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮತ್ತು ಗಂಗೊಳ್ಳಿ ಹೈಸ್ಕೂಲಿನಲ್ಲಿ ಹೈಸ್ಕೂಲು ವಿದ್ಯಾಭ್ಯಾಸವನ್ನು ಮುಗಿಸಿ ಯಕ್ಷಗಾನದ ಗೀಳನ್ನು ಅಂಟಿಸಿಕೊಂಡು ಬಡಗುತಿಟ್ಟಿನ ದಶಾವತಾರಿ ಗುರು ಹೆರಂಜಾಲು ವೆಂಕಟರಮಣನವರಲ್ಲಿ ತಾಳ ಹೆಜ್ಜೆ ಅಭ್ಯಾಸ ಮಾಡಿದರು.ಬಡಗುತಿಟ್ಟು ಪರಂಪರೆಯ ಕಲಾವಿದ ಐರೋಡಿ ಗೋವಿಂದಪ್ಪನವರಿಂದ ಪ್ರೇರಣೆಗೊಂಡು ಸುಮಾರು 40 ವರ್ಷದ ಹಿಂದೆ ಗೋವಿಂದಪ್ಪನವರ ಸಾಲಿಗ್ರಾಮ ಮೇಳ ಸೇರ್ಪಡೆಯಾಗಿ ಗೋಳಿಗರಡಿ ಮೇಳದಲ್ಲಿ ತೆರವಾದ ಸ್ಥಾನವನ್ನು ತುಂಬಿ ಎರಡನೇ ವೇಷದಾರಿಯಾಗಿ ಗುರುತಿಸಿಕೊಂಡರು.

ಅವರು ನಿರ್ವಹಿಸುತಿದ್ದ ಕರ್ಣ, ಶಲ್ಯ, ಬೀಷ್ಮ, ಪರಶುರಾಮ,ಅರ್ಜುನ, ವಿಕ್ರಮಾದಿತ್ಯ, ಶನಿ, ಯಮ, ಪೆರುಮಳ ಬಳ್ಳಾಲ, ಕೋಟಿ-ಚೆನ್ನಯ, ವಾಲಿ, ಈಶ್ವರ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಗಳಿಸಿವೆ. 1968ರಿಂದ ಮೂರು ವರ್ಷ ಮುಂಬಯಿಯಲ್ಲಿ ಕನ್ನಡ ಸಂಘ ಮತ್ತು ನಾರಾಯಣ ಗುರು ಯಕ್ಷಗಾನ ಮಂಡಳಿಯಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದ ಇವರು ಅಲ್ಲಿ ಹಲವಾರು ಯಕ್ಷಗಾನ ಪ್ರದರ್ಶನ ನೀಡಿದ್ದರು.ಸುಮಾರು 18 ವರ್ಷಗಳ ಕಾಲ ಉಪ್ಪಿನಕುದ್ರುವಿನಲ್ಲಿ ಶ್ರೀ ಗಣೇಶ ಗೊಂಬೆಯಾಟ ಮಂಡಳಿಯಲ್ಲಿ ಗೊಂಬೆಗಳ ಹಿಂದೆ ನಿಂತು ಅರ್ಥ ಹೇಳುವ ಮೂಲಕ ಗೊಂಬೆಗಳಿಗೆ ಕಂಠದಾನ ಮಾಡುವ ಕ್ಲಿಷ್ಟಕರ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.ದೀರ್ಘ‌ಕಾಲ ಗೊಂಬೆಗಳ ಬಣ್ಣಗಾರಿಕೆ ವೇಷ ಭೂಷಣಗಳನ್ನು ಇವರು ನಿರ್ವಹಿಸುತಿದ್ದರು.ತಾಳಮದ್ದಳೆಯ ಮೇರು ಪಂಕ್ತಿಯ ಅರ್ಥದಾರಿಯಾದ ಇವರ ಶನಿಕಥಾ ಕಾಲಕ್ಷೇಪ ಜಿಲ್ಲೆಯಾದ್ಯಂತ ಖ್ಯಾತಿ ಗಳಿಸಿದೆ. ಸುದೀರ್ಘ‌ ಕಾಲ ಬಯಲಾಟದಲ್ಲಿಯೇ ಸೇವೆ ಸಲ್ಲಿಸಿ ನಡುತಿಟ್ಟನ್ನು ಜನಪ್ರಿಯಗೊಳಿಸಿದ ಅವರಿಗೆ ಇದೀಗ ನಿಟ್ಟೂರು ಬೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿಯ ಗರಿ. 

ಉದಯ  

Advertisement
Advertisement

Udayavani is now on Telegram. Click here to join our channel and stay updated with the latest news.

Next