Advertisement
ಸಿದ್ಧಗಂಗೆಯ ಐಸಿರಿ, “ತಾನಾಗಬಲ್ಲನಿಲ್ಲಿ ನರನು ನಾರಾಯಣನಿಲ್ಲಿ’ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಶ್ರೇಷ್ಠ ನರಹರಿ, ಸಿದ್ಧಗಂಗೆಯ ಸಾಧನೆಯ ಉತ್ತುಂಗದ ಗಿರಿ ಡಾ.ಶ್ರೀ ಶಿವಕುಮಾರಸ್ವಾಮೀಜಿ ಭೌತಿಕವಾಗಿ ನಮ್ಮನ್ನೆಲ್ಲಾ ಅಗಲಿದ್ದಾರೆ. ಶಾಂತಿ ನೆಮ್ಮದಿ ಬಯಸಿದವನಿಗೆ ದಿವ್ಯ ದರ್ಶನ, ನರಳುತ್ತಾ ಬಂದವನಿಗೆ ಮಾನವೀಯ ಸೇವೆಯ ದಿಗªರ್ಶನ, ಹಸಿದವನಿಗೆ ಅನ್ನ, ಅನಾಥನಿಗೆ ಪ್ರೀತಿಯ ಸಿಂಚನ, ಅರಿವಿನ ಜೋಳಿಗೆ ಹಿಡಿದು ಬಂದವನಿಗೆ ಜ್ಞಾನ- ಸಿದ್ಧಗಂಗಾ ಸ್ವಾಮೀಜಿಯ ಬಹುಮುಖೀ ದಾಸೋಹದ ವೈಖರಿಯೇ ಅನನ್ಯ!
Related Articles
Advertisement
ಸಿದ್ಧಗಂಗಾ ಸ್ವಾಮೀಜಿ ಹಾಕಿಕೊಟ್ಟ ದಾಸೋಹದ ಶ್ರೇಷ್ಠ ಮಾರ್ಗ ಇಂದು ಹಲವು ಕಡೆ ಚಾಲ್ತಿಯಲ್ಲಿದೆ. ಅನ್ನ, ಆಶ್ರಯ ಕೊಡುವ ಮಠಗಳು, ಸ್ವಾಮಿಗಳು, ಧರ್ಮ ಸಂಸ್ಥೆಗಳು ಸಾಕಷ್ಟು ಬೆಳೆದಿವೆ. ತಲೆಯ ಮೇಲಿನ ಸೂರಿನ ಒಂದು ಆಶ್ರಯ, ಒಂದು ತಟ್ಟೆಯ ಅನ್ನ ಖಂಡಿತಾ ಒಂದು ಅನ್ನ ದಾಸೋಹದ ಸಾರ್ಥಕ ಮಾರ್ಗವೇ. ಆದರೆ ಸ್ವಾಮೀಜಿಯ ಮಡಿಲಿನಾಶ್ರಯ, ಅವರೇ ತಂದ ರಾಗಿ, ಅವರೇ ಒಡೆದ ಸೌದೆ, ಅವರೇ ಮಾಡಿದ ಅಡುಗೆ, ಆ ಬೊಬ್ಬೆ ಬಂದ ಕೈನಲ್ಲಿನ ಕೈತುತ್ತು ಇದೆಯಲ್ಲ, ಅದು ಅಮೃತ ಸಮಾನವಾದದ್ದು, ನಿಜಶರಣರ ದಾಸೋಹದ ಅಗ್ರಪಂಕ್ತಿಯದು. ಅದು ಕೇವಲ ಆಶ್ರಯವಲ್ಲ, ನಿರ್ವಾಜ್ಯ ಪ್ರೇಮದ, ಮಮತೆಯ ಅನನ್ಯತೆಯದು, ಅಕ್ಕರೆಯದು, ಅನಾಥಪ್ರಜ್ಞೆಯನ್ನು ಎಂದೂ ಕಾಡಿಸದ ಮಾತೃ ಮಮತೆಯನ್ನು ಎಂದೂ ಮರೆಸದ ವಾತ್ಸಲ್ಯದ ತುತ್ತದು. ಈ ಶ್ರೇಷ್ಠ ದಾಸೋಹವನ್ನು ಬಹುಶಃ ಸಿದ್ಧಗಂಗಾ ಸ್ವಾಮೀಜಿಯಷ್ಟು ಸಮರ್ಥವಾಗಿ ಬೇರಾರೂ ನಡೆಸಿರುವುದು ನನ್ನ ಗಮನಕ್ಕೆ ಬಂದಿಲ್ಲ.
ಇಂದು ಶಿಕ್ಷಣವೆನ್ನುವುದು ವ್ಯಾಪಾರದ ಒಂದು ಅಗ್ಗದ ಸರಕಾಗಿ ಹೋಗಿದೆ. ಇಂದಿನ ಪೀಳಿಗೆಯವರಿಗೆ ಸಿದ್ಧಗಂಗಾ ಸ್ವಾಮೀಜಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯ ಮಹತ್ವ ಗೊತ್ತಿಲ್ಲದಿರಬಹುದು. ಆದರೆ ಸ್ವಾಮೀಜಿ ಸರ್ಕಾರಕ್ಕೆ ಪರ್ಯಾಯವಾಗಿ ಪ್ರೌಢಶಿಕ್ಷಣದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದವರು. ಶಾಲೆಗಳ ಸೌಕರ್ಯವಿಲ್ಲದ ಹಲವು ಕಡೆ ಶಾಲೆಗಳನ್ನು ತೆರೆದವರು. ಮಠದಲ್ಲೇ ಜಾತಿ, ಮತ ನೋಡದೆ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ಕೊಟ್ಟವರು. ಇಂದಿಗೂ ಸಿದ್ಧಗಂಗಾ ಸಂಸ್ಥೆಯ ಹಲವು ಶಾಲಾ ಕಾಲೇಜುಗಳು ಜನಮುಖೀಯಾಗಿಯೇ ನಡೆಯುತ್ತಿವೆ. ಯಾವುದೇ ಕಾಲೇಜೂ ಇತರೆ ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಡೊನೇಶನ್ ದಂಧೆಗೆ ಇಳಿದಿಲ್ಲ. ವಿದ್ಯಾರ್ಥಿಗಳಿಗೆ ಶುಲ್ಕ ಭರಿಸಲೂ ಸಾಧ್ಯವಿಲ್ಲದಷ್ಟು ಬಡತನ ಎಂದಾಗ ಶುಲ್ಕವನ್ನೇ ಮಠ ಮಾಫಿ ಮಾಡಿದೆ. ಅಥವಾ ಶಾಲೆ ಕಾಲೇಜಿನ ಸಿಬ್ಬಂದಿಯೇ ವಿದ್ಯಾರ್ಥಿಗಳ ಕಡೆಯ ಶುಲ್ಕವನ್ನು ಪಾವತಿಸಿದ್ದಾರೆ. ಇದು ಸಿದ್ಧಗಂಗಾ ಶ್ರೀಗಳಿಂದ ಬಂದ ಸಂಸ್ಕಾರ, ಅವರು ರೂಪಿಸಿದ ಶ್ರೇಷ್ಠ ಶಿಕ್ಷಕ ವರ್ಗ ಈ ದೇಶದ ಅಮೂಲ್ಯ ಸಂಪತ್ತು ಎಂಬುದನ್ನು ಮರೆಯಬಾರದು. ಹಾಗೇ ಈ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾಮೀಜಿಯವರ ನೇರ ಹಸ್ತಕ್ಷೇಪವಿಲ್ಲದೆ ಪರಿಣತರು, ಶಿಕ್ಷಣ ತಜ್ಞರು ಮೇಲ್ವಿಚಾರಣೆ ಮಾಡುವ ಒಂದು ವಿಕೇಂದ್ರೀಕರಣ ವ್ಯವಸ್ಥೆ ಇದೆ ಎನ್ನುವುದೂ ಅತ್ಯಂತ ಹೆಗ್ಗಳಿಕೆಯ ಸಂಗತಿ.
ನಮ್ಮಲ್ಲಿ ವಿದ್ಯಾವಂತರೇ ಮೂಢನಂಬಿಕೆಗಳನ್ನು ಆಚರಿಸುವುದು ಹೆಚ್ಚು. ಅದರಲ್ಲೂ ಅವರೇ ಸ್ವಾಮಿಗಳಾದರೆ ಮುಗಿದೇ ಹೋಯಿತು. ಕವಡೆ, ಗಿಣಿಶಾಸ್ತ್ರ ಕೈಲಿ ಹಿಡಿದು ಭಕ್ತಾದಿಗಳಿಗೆ ನಾಮ ಹಾಕಲು ಸಿದ್ಧರಾಗಿ ಕುಳಿತುಬಿಡುತ್ತಾರೆ. ಆದರೆ ಸಿದ್ಧಗಂಗಾ ಮಠ ಇದಕ್ಕೆ ಅಪವಾದವೆಂಬಂತೆ ವಿವೇಕದ ಬೆಳಕಿನಲ್ಲಿ ಬೆಳಗಿದ ಮಠ. ಸಿದ್ಧಗಂಗಾ ಶ್ರೀಗಳು ಕೇವಲ ವಿದ್ಯಾವಂತರಾಗಿರಲಿಲ್ಲ, ವಿಚಾರವಂತರು, ವಿವೇಕಿಗಳೂ, ವೈಚಾರಿಕ ಚಿಂತಕರೂ ಆಗಿದ್ದರು. ಹಾಗಾಗಿ ಶ್ರೀ ಮಠದಲ್ಲಿ ಶೂನ್ಯದಿಂದ ವಾಚು, ಉಂಗುರ ಸೃಷ್ಟಿಸುವ ಪವಾಡಗಳಿರಲಿಲ್ಲ. ಅಲ್ಲಿದ್ದದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಹಗಲು ರಾತ್ರಿ ಅನ್ನ ಸೃಷ್ಟಿಯಾಗುತ್ತಿದ್ದ ಪವಾಡ, ಬದುಕಲು ದಾರಿಯೇ ಮುಚ್ಚಿದವನಿಗೆ ತಟ್ಟನೆ ಸ್ವಾಮೀಜಿಯವರ ದಿವ್ಯ ಕರುಣೆ ಮಾರ್ಗ ತೋರುತ್ತಿದ್ದ ಚಮತ್ಕಾರ, ಕಾಯಕದ ಶ್ರಮ ಸಂಸ್ಕೃತಿಯ ಬೆವರು, ರಕ್ತ ಹೆಪ್ಪುಗಟ್ಟಿ ಒಡೆಯದ ವಜ್ರವಾದ ಪವಾಡ! ಇಷ್ಟೆಲ್ಲಾ ಪ್ರಭಾವಶಾಲಿಗಳೂ, ಭಕ್ತರ ಅಂತರಂಗ ಗೆದ್ದವರೂ ಆದ ಸಿದ್ಧಗಂಗೆ ಸ್ವಾಮೀಜಿ ಎಂದೂ ಟಿವಿಯಲ್ಲಿ ಜ್ಯೋತಿಷ್ಯ ಹೇಳಲು ಹೋಗಲಿಲ್ಲ, ರಾಜಕೀಯದವರಿಗೆ ಕವಡೆ ಶಾಸ್ತ್ರ ಹೇಳಲಿಲ್ಲ. ಲೌಕಿಕವಾದ ರಾಜಕೀಯವಾದ ಯಾವುದೇ ಭವಿಷ್ಯ ನುಡಿಯುವ ಅವಿವೇಕ ಮಾಡಲಿಲ್ಲ. ಇಡೀ ಮಠವನ್ನು ಕೇವಲ ಪರಮಾತ್ಮನ ಮೇಲಿನ ನಂಬಿಕೆಯಲ್ಲಿ ನೆಲೆನಿಲ್ಲಿಸಿದರು, ಅಲ್ಲಿ ಮೂಢನಂಬಿಕೆಗೆ ಜಾಗವೇ ಇಲ್ಲದಂತೆ ನೋಡಿಕೊಂಡರು. ಇದು ಸಿದ್ಧಗಂಗಾ ಮಠ ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ಟ ಅತಿ ದೊಡ್ಡ ಕೊಡುಗೆ.
ಮಠಗಳೆಂದರೆ ಬೆಳಗಿನ ಜಾವಕ್ಕೇ ಶುರುವಾಗುತ್ತದೆ ನಗಾರಿ, ಡೋಲುಗಳ ಅಬ್ಬರ! ಜೊತೆಗೇ ಸ್ವಾಮಿಗಳ ಡೌಲು ಬೇರೆ! ಅತಿರೇಕದ ಆಡಂಬರ ಪೂಜೆಗಳು, ಆಟಾಟೋಪಗಳು, ದೇವರನ್ನು ಮೈಮೇಲೆ ಆಹ್ವಾನಿಸಿಕೊಳ್ಳುವ ಶಿಷ್ಯ ಕೋಟಿಯ ನೂರೆಂಟು ಅವತಾರಗಳು, ನೂರಾರು ಗಂಟೆ ಜಾಗಟೆಗಳ ಕಿವಿಗಡಚಿಕ್ಕುವ ಆರ್ಭಟ, ಲಕ್ಷಾಂತರ ರೂಪಾಯಿ ದುಂದು ಮಾಡುವ ಅಲಂಕಾರಗಳು, ಅಡ್ಡಪಲ್ಲಕ್ಕಿ ಉತ್ಸವಗಳು. ಆದರೆ ಸಿದ್ಧಗಂಗಾ ಮಠ ಇದೆಲ್ಲಕ್ಕೂ ಹೊರತಾಗಿತ್ತು.ಅಲ್ಲಿ ಜಾಗಟೆ ತಮಟೆ ಸದ್ದಿರಲಿಲ್ಲ, ಅಲಂಕಾರದ ಅಬ್ಬರವಿರಲಿಲ್ಲ, ಜಾತ್ರೆ ಸಮಯ ಬಿಟ್ಟರೆ ಮಿಕ್ಕೆಲ್ಲ ಸಮಯದಲ್ಲಿ ಅದು ಪ್ರಶಾಂತ ಶಾಂತಿನಿಕೇತನದ ಮಾದರಿಯಾಗಿತ್ತು. “ಇಳೆಗೆ ಮೊಳಕೆವೊಗೆವಂದು ತಮಟೆಗಳಿಲ್ಲ, ಫಲಮಾಗುವಂದು ತುತ್ತೂರಿಯಿಲ್ಲ, ಬೆಳಕೀವ ಸೂರ್ಯ ಚಂದ್ರರ ಸದ್ದಿಲ್ಲ, ಹೊಲೆ ನಿನ್ನ ತುಟಿಗಳನು ಮಂಕುತಿಮ್ಮ’ ಎಂಬ ಡಿವಿಜಿಯವರ ವಾಣಿಯನ್ನು ಸಾಕ್ಷಾತ್ ಆಚರಣೆಗೆ ತಂದು ಅದನ್ನು ಪುನರುಚ್ಚರಿಸುವ ಅಧಿಕಾರ ಹೊಂದಿದ್ದರೆ ಅದು ಕೇವಲ ಸಿದ್ಧಗಂಗಾ ಶ್ರೀಗಳು ಮಾತ್ರ.
ಇಂದಿನ ಕೆಲವು ಸ್ವಾಮೀಜಿಗಳು ಪೀಠ ಹತ್ತಿದ ತಕ್ಷಣವೇ ವೈಭೋಗದ ಬೆನ್ನು ಹತ್ತುತ್ತಾರೆ. ಐಷಾರಾಮೀ ಬದುಕಿಗೆ ತಮ್ಮನ್ನು ಒಪ್ಪಿಸಿಕೊಂಡುಬಿಡುತ್ತಾರೆ. ಅವರಿಗೆ ತಮ್ಮ ಪೂರ್ವಾಶ್ರಮದ ಕಷ್ಟ ಕಾರ್ಪಣ್ಯದ ದಿನಗಳು ಮರೆತೇ ಹೋಗುತ್ತವೆ. ಸಹಜವಾಗೇ ಈಗ ಅಂತಹ ಸ್ಥಿತಿಯಲ್ಲಿರುವವರೂ ಮುಂದೆ ಮರೆತು ಹೋಗುತ್ತಾರೆ. ಅಂತಹ ಎಚ್ಚರದ ಸ್ಥಿತಿಯನ್ನು ಕಾಯ್ದುಕೊಳ್ಳಬೇಕಾದುದು ಸ್ವಾಮೀಜಿಯಾದವರಿಗೆ ಅತ್ಯಂತ ಮುಖ್ಯವಾದುದು. ಅದಕ್ಕಾಗಿ ಅವರು ತಮ್ಮೆದುರಿರುವ ಮೃಷ್ಟಾನ್ನವನ್ನೂ ತ್ಯಾಗ ಮಾಡ ಬೇಕಾಗುತ್ತದೆ. ವೈಭೋಗ, ಐಷಾರಾಮಿ ಬದುಕಿನಿಂದ ದೂರವೇ ನಿಂತು ಸಮಚಿತ್ತರಾಗಿರಬೇಕಾಗುತ್ತದೆ. ಕಾಮ, ಕ್ರೋಧದ ಕ್ಷೊàಭೆಗಳಿಗೆ ಲಂಗು-ಲಗಾಮು ಹಾಕಿಕೊಳ್ಳಬೇಕಾಗುತ್ತದೆ. ಪ್ರತಿಕ್ಷಣ ಅಗ್ನಿಪರೀಕ್ಷೆ, ಸತ್ವ ಪರೀಕ್ಷೆಗೆ ತಮ್ಮನ್ನು ತಾವು ಒಡ್ಡಿಕೊಂಡು ಪರಿಪಕ್ವರಾಗಬೇಕಾಗುತ್ತದೆ. ಹೀಗೆ ಯಾವುದೇ ಕ್ಷೊàಭೆಗೊಳಗಾಗದೆ ಅತ್ಯಂತ ಸಂಯಮಯುತ, ಸಂಸ್ಕಾರಯುತ, ನಿರ್ವಿವಾದ, ಸರಳ, ಸುಂದರ, ಶಾಂತ ಬದುಕನ್ನು ನಡೆಸಿದವರು ಡಾ. ಶಿವಕುಮಾರ ಸ್ವಾಮೀಜಿ. ಅವರು ಹುಟ್ಟಿದ ಪುಣ್ಯಭೂಮಿಯಲ್ಲಿ ನಾವು ಹುಟ್ಟಿದ್ದೇವೆ, ಅವರ ಕಾಲದಲ್ಲೇ ನಾವೂ ಬದುಕಿದ್ದೆವು ಎಂಬುದೇ ಒಂದು ಧನ್ಯತೆಯ ಸಂಗತಿ.
ಹೀಗೆ ಡಾ. ಶಿವಕುಮಾರಸ್ವಾಮೀಜಿ ಸಂತರ ಪರಂಪರೆಗೇ ಒಂದು ದಿವ್ಯ ರತ್ನ. ಪ್ರಕೃತಿ, ಪರಿಸರ, ಭೂತಾಯಿ, ಪ್ರಾಣಿ ಪಕ್ಷಿಗಳೊಂದಿಗೆ ಅವರ ಅನುಸಂಧಾನ ಅವರನ್ನು ನಿಜ ಮಣ್ಣಿನ ಮಗನನ್ನಾಗಿಸಿದೆ. 12ನೇ ಶತಮಾನದ ಬಸವಾದಿ ಶರಣರ ಜಾತ್ಯತೀತ ಪ್ರಜ್ಞೆ, ಸ್ತ್ರೀ ಸಮಾನತೆ, ಪರಿಸರ ಕಾಳಜಿ, ವೈಚಾರಿಕ ವಿಚಾರವಂತಿಕೆ, ದಾಸೋಹ ಮಾನವೀಯ ಮೌಲ್ಯ ಮೊದಲಾದ ಉದಾತ್ತ ಕ್ರಾಂತಿಕಾರಿ ಮೌಲ್ಯಗಳನ್ನು ಅನುಷ್ಠಾನಕ್ಕೆ ತಂದು ಶಿವಕುಮಾರಸ್ವಾಮೀಜಿ ಸಿದ್ಧಗಂಗಾಮಠವನ್ನು ಆಧ್ಯಾತ್ಮಿಕ ಹಾಗೂ ಕ್ರಾಂತಿಯ ಕರ್ಮಭೂಮಿಯನ್ನಾಗಿಸಿದ್ದಾರೆ. ಅವರು ಕೇವಲ ಭಾರತ ರತ್ನವಲ್ಲ, ವಿಶ್ವ ರತ್ನ. ಮನುಕುಲದ ಮುುಕುಟಮಣಿ, ಅವರು ಕಲಶಪ್ರಾಯರು, ಶಿಖರಸೂರ್ಯರು, ಜಗದ ಗುರುಗಳು, ಯುಗದ ಗುರುಗಳು. ನಮೋ ಶಿವಕುಮಾರಸ್ವಾಮಿ, ಶರಣಂ ಗಚ್ಛಾಮಿ!
ತುರುವೇಕೆರೆ ಪ್ರಸಾದ್