ಶ್ರೀಮಂತ ಮನೆತನದ ಹುಡುಗಿ, ಬಡ ಹುಡುಗನ ನಡುವಿನ ಲವ್, ಪ್ರೀತಿಗೆ ಅಡ್ಡ ಬರುವ ಹುಡುಗಿಯ ಮಾವ, ಜೊತೆಗೆ ಆಸ್ತಿ-ಅಂತಸ್ತು … ಇಂತಹ ಸಿನಿಮಾಗಳು ಕನ್ನಡ ಚಿತ್ರರಂಗಕ್ಕಂತೂ ಹೊಸದಲ್ಲ. ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ನಮ್ಮೂರಲ್ಲಿ’. ಇದು ಕೂಡಾ ಶ್ರೀಮಂತ ಮನೆತನದ ಹುಡುಗಿಯನ್ನು ಇಷ್ಟಪಟ್ಟು ಮದುವೆಯಾಗಲು ಹೋದಾಗ ಏನೆಲ್ಲಾ
ಅಡೆತಡೆ ಹಾಗೂ ತೊಂದರೆ, ತಾಪತ್ರಯಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ ತಯಾರಾದ ಸಿನಿಮಾ.
ಎಲ್.ಎಂ.ಗೌಡ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ “ಲೀಲಾ’ ಎಂಬ ಸಿನಿಮಾ ಮಾಡಿದ್ದ ಇವರು ಈಗ ಕೋಲಾರ ಸಮೀಪದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ “ನಮ್ಮೂರಲ್ಲಿ’ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆಯಾಯಿತು. ಚಿತ್ರಕ್ಕೆ ಹರ್ಷ ಕೋಗೂಡು ಸಂಗೀತ ನೀಡಿದ್ದಾರೆ.
ಶೇಖರ್ ರಾಜ್ ಈ ಚಿತ್ರದ ನಾಯಕ. ಹಳ್ಳಿಯ ಮುಗ್ಧ ಹುಡುಗನಾಗಿ ಕಾಣಿಸಿಕೊಂಡ ಅವರು, ಯಾವ ರೀತಿ ಪ್ರೀತಿಯಿಂದ ಮೋಸ ಹೋಗುತ್ತಾರೆ, ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ ಅವರ ಪಾತ್ರ ಸಾಗುತ್ತದೆಯಂತೆ. ಚಿತ್ರದಲ್ಲಿ ರಚಿತಾ ಗೌಡ ನಾಯಕಿ. ಹಳ್ಳಿ ಹುಡುಗಿಯ ಪಾತ್ರವಾಗಿದ್ದು, ಏನೂ ತಿಳಿಯದ ಹಳ್ಳಿ ಹುಡುಗನಿಗೆ ಪ್ರೀತಿ ಪಾತ್ರ ಪಾಠ ಹೇಳುವ ಶ್ರೀಮಂತ ಕುಟುಂಬದ ಹುಡುಗಿಯಾಗಿ ನಟಿಸಿದ್ದಾರಂತೆ.
ಚಿತ್ರದಲ್ಲಿ ತನುಜಾ ನಾಯಕನ ತಾಯಿಯಾಗಿ ನಟಿಸಿದ್ದಾರೆ. ಬೆಂಗಳೂರು, ಮಡಿಕೇರಿ ಹಾಗೂ ಚಿಕ್ಕಮಂಗಳೂರು ಸುತ್ತಮುತ್ತ ಸುಮಾರು 28 ದಿನಗಳ ಕಾಲ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ನಾಗೇಂದ್ರ ಈ ಸಿನಿಮಾದ ನಿರ್ಮಾಪಕರು.