Advertisement
ತಟ್ಟೆ ಇಡ್ಲಿ, ಪೂರಿ, ರೈಸ್ ಬಾತ್… ಏನಾದರೂ ಕೊಳ್ಳಿ, ಎಲ್ಲವೂ ಪ್ಲೇಟ್ ಒಂದಕ್ಕೆ 20 ರೂ. ರುಚಿ, ಪ್ರಮಾಣದಲ್ಲಿ ಇಲ್ಲಿ ರಾಜಿ ಇಲ್ಲ. ಇಲ್ಲಿ ಮಾರಾಟ ಮಾಡುವ ತಿಂಡಿಯ ರುಚಿ ಮತ್ತು ಪ್ರಮಾಣಕ್ಕೆ ತಲೆದೂಗದವರಿಲ್ಲ. ದಿನ ನಿತ್ಯ ಬೆಳಿಗ್ಗೆ ಇಲ್ಲಿ ನೂರಾರು ಮಂದಿ ತಿಂಡಿ ತಿನ್ನಲು ಬರ್ತಾರೆ, ಸಂಜೆ ಪಾನಿಪೂರಿ ಇತ್ಯಾದಿ ಚಾಟ್ಸ್ ಸಿಗುತ್ತೆ.
ಟಿಫನ್ ಸೆಂಟರ್ ಮಾಲೀಕ ರಣವೀರ್ ಶರ್ಮರದ್ದು ಧಾರಾಳ ಗುಣ. ಚಿತ್ರಾನ್ನ, ರೈಸ್ ಬಾತನ್ನು ಬೊಗಸೆ ತುಂಬಿ ಕೊಡ್ತಾರೆ. ಇತರೆ ಹೋಟೆಲ್‌ಗಳಿಗಿಂತ, ಇಲ್ಲಿ ಕೊಡುವ ಪ್ಲೇನ್ ದೋಸೆಯ ಅಗಲ ತುಸು ಹೆಚ್ಚು. ಈ ಧಾರಾಳತನದಿಂದಾಗಿಯೇ ಇವರು ಫೇಮಸ್. ಮಿಕ್ಕೆಡೆಗಳಲ್ಲಿ ಅಳೆದು ತೂಗಿ ಬಡಿಸುತ್ತಾರೆ. ತಟ್ಟೆಗೆ ಒಂದಷ್ಟು ಪ್ರಮಾಣ ಹೆಚ್ಚಿಗೆ ಬಿದ್ದರೂ ಮತ್ತೆ ಅಲ್ಲಿಂದ ಎತ್ತಿ ಹಿಂದಕ್ಕೆ ಪಡೆದುಕೊಳ್ಳುವವರಿರುತ್ತಾರೆ. ಆದರೆ, ಶರ್ಮ ಟಿಫಿನ್ ಸೆಂಟರ್‌ನಲ್ಲಿ ತೂಕ, ಪ್ರಮಾಣ ಇವ್ಯಾವುದನ್ನೂ ಲೆಕ್ಕಕ್ಕೆ ಪರಿಗಣಿಸುವುದಿಲ್ಲ. ಕೈಲಾದಷ್ಟನ್ನೂ ತುಂಬಿ ತುಂಬಿ ಬಡಿಸುತ್ತಾರೆ. ಇದು ಇಲ್ಲಿಗೆ ಬರುವ ದಿನನಿತ್ಯದ ಗ್ರಾಹಕರ ಅನುಭವ. ಸುಮಾರು ಮೂರು ದಶಕಗಳಿಂದ ಶರ್ಮ ಟಿಫಿನ್ ಸೆಂಟರ್ ನಡೆಯುತ್ತಿದೆ. ಮಾಲೀಕ ರಣವೀರ್ ಶರ್ಮ ಶುರುಮಾಡಿದ ಈ ಖಾನಾವಳಿಯನ್ನು ಈಗ ಪುತ್ರರಾದ ಜೋಗಿಂದರ್ ಶರ್ಮ, ರತನ್ ಶರ್ಮ ನಡೆಸಿಕೊಂಡು ಹೋಗುತ್ತಿದ್ದಾರೆ.
Related Articles
ಶರ್ಮ ಟಿಫನ್ ಸೆಂಟರ್‌ನ ಆವರಣದಲ್ಲೇ ಕೆಲವು ಮಹಿಳೆಯರು ಮಸಾಲೆ ವಡೆ, ಉದ್ದಿನ ವಡೆ, ಮೆಣಸಿನ ಕಾಯಿ ಬಜ್ಜಿ (ಎರಡು ವಡೆಗೆ 5 ರೂ), ಮಜ್ಜಿಗೆ ಮಾರಾಟ ಮಾಡುತ್ತಾ ಜೀವನ ಕಟ್ಟಿಕೊಂಡಿದ್ದಾರೆ. ಎರಡೂ ವ್ಯಾಪಾರಗಳು ಒಂದಕ್ಕೊಂದು ಪೂರಕವಾಗಿ ಜೊತೆ ಜೊತೆಯಾಗಿ ನಡೆಯುತ್ತಾ ಬಂದಿವೆ. ಶರ್ಮಾ ಟಿಫನ್ ಸೆಂಟರ್‌ನಲ್ಲಿ ಎಷ್ಟು ಹೊತ್ತಾದರೂ ಸರದಿಯಲ್ಲಿ ನಿಂತು ತಿಂದುಕೊಂಡು ಹೋಗುವವರದು ಒಂದು ಕೆಟಗರಿ. ಅಲ್ಲದೆ, ಪಾರ್ಸೆಲ್‌ಗೆ ಕಾದು ನಿಂತವರದ್ದು ಮತ್ತೂಂದು ಕೆಟಗರಿ. ಪಾರ್ಸೆಲ್‌ಗೆ ಬರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಹೆಚ್ಚೇ ಇದೆ. ಅದಕ್ಕಾಗಿಯೇ ಶರ್ಮಾರವರು ಪಾರ್ಸೆಲ್‌ಗಾಗಿ ಪ್ರತ್ಯೇಕ ಕೌಂಟರ್ ಮಾಡಿಕೊಂಡಿದ್ದಾರೆ. ಅದರಲ್ಲೂ ಪಾರ್ಸೆಲ್ ಆರ್ಡರ್‌ಗಳಲ್ಲಿ ಚಿತ್ರಾನ್ನ, ರೈಸ್ ಬಾತ್‌ಗೆ ಹೆಚ್ಚು ಬೇಡಿಕೆ. ಹೀಗಾಗಿ ನೂರಾರು ಪ್ಯಾಕೆಟ್‌ಗಳನ್ನು ಮೊದಲೇ ಕಟ್ಟಿ ಸಿದ್ಧ ಮಾಡಿಟ್ಟುಕೊಂಡಿರುತ್ತಾರೆ.
Advertisement
ಎಲ್ಲಾ 20 ರೂ.ಸಂಜೆ 2 ಗಂಟೆಯಿಂದ 8 ಗಂಟೆಯವರೆಗೆ ಬೇಲ್ ಪೂರಿ, ಮಸಾಲೆ ಪೂರಿ, ಪಾನಿ ಪೂರಿ ಸಿಗುತ್ತೆ. ಇದು ಸಹ ಪ್ಲೇಟ್ ಒಂದಕ್ಕೆ 20 ರೂ. 2 ತಟ್ಟೆ ಇಡ್ಲಿ ಪ್ಲೇಟ್‌ಗೆ , ಮೂರು ಪೂರಿ, 2 ಚಪಾತಿ, ಚಿತ್ರಾನ್ನ, ರೈಸ್ ಬಾತ್ ಬೊಗಸೆ ತುಂಬುವಷ್ಟು, ಪ್ಲೇನ್ ದೋಸೆ, ಈರುಳ್ಳಿ ದೋಸೆ, 7.30 ರಿಂದ 10.30, ಮಧ್ಯಾಹ್ನ 2 ಗಂಟೆಗೆ ಚಾಟ್ಸ್. ವಿಳಾಸ: ಕರ್ನಾಟಕ ಬ್ಯಾಂಕ್ ಕಾಂಪ್ಲೆಕ್ಸ್, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ, ರಾಮನಗರ -ಬಿ.ವಿ.ಸೂರ್ಯಪ್ರಕಾಶ್