ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಮಂಗಳವಾರ ಅತಿಹೆಚ್ಚು 8.26 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಇದು ಈವರೆಗಿನ ದಾಖಲೆ ಆಗಿದೆ.
ಈ ಹಿಂದೆ 2022ರ ಆಗಸ್ಟ್ 15ರಂದು 8.25 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದರು. ಅದು ಈವರೆಗಿನ ದಾಖಲೆಯಾಗಿತ್ತು. ಆದರೆ, ಮಂಗಳವಾರ (ಆ. 6) ಒಂದೇ ದಿನ 8,26,883 ಜನ ಪ್ರಯಾಣಿಸುವ ಮೂಲಕ ಹಿಂದಿನ ದಾಖಲೆಯನ್ನು ಸರಿ ಗಟ್ಟಿದೆ. ಇದಕ್ಕೆ ಮುಖ್ಯವಾಗಿ ನಿರಂತರ ಮಳೆಯೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಜುಲೈನಲ್ಲಿ ಪ್ರತಿದಿನ ಮೆಟ್ರೋ ಪ್ರಯಾಣಿಕರ ಸಂಖ್ಯೆ ಸರಾಸರಿ 7.62 ಲಕ್ಷ ಇತ್ತು. ಆದರೆ, ಜುಲೈ ಅಂತ್ಯಕ್ಕೆ ಮಳೆ ಆರ್ಭಟ ಹೆಚ್ಚಿದೆ. ಪರಿಣಾಮ ಜನ ಅದರಲ್ಲೂ ವಿಶೇಷವಾಗಿ ಸಾಫ್ಟ್ವೇರ್ ಉದ್ಯೋಗಿ ಗಳು ಮೆಟ್ರೋ ಮೊರೆಹೋಗುತ್ತಿದ್ದಾರೆ. ಇದರಿಂದ ಕಳೆದ ಐದಾರು ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ ಕ್ರಮದಲ್ಲೇ ಸಾಗಿದ್ದು, ಒಂದೆರಡು ಬಾರಿ 8.10 ಲಕ್ಷದ ಆಸುಪಾಸು ತಲುಪಿದ್ದೂ ಇದೆ. ಆಗಸ್ಟ್ 6ರಂದು ಇದು 8.26 ಲಕ್ಷ ತಲುಪಿತು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.
ದಾಖಲೆ ಪ್ರಯಾಣಿಕರ ಸಂಚಾರಕ್ಕೆ ಬಿಎಂಆರ್ ಸಿಎಲ್‌ಗೆ ಜನ ಸಾಮಾಜಿಕ ಜಾಲತಾಣ “ಎಕ್ಸ್’ನಲ್ಲಿ ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ಮಳೆಗಾಲದಲ್ಲಿ ಹಳಿಯಲ್ಲಿ ಬೀಳುವ ನೀರು ನೇರವಾಗಿ ಕೊಳವೆಗಳ ಮೂಲಕ ರಸ್ತೆ ಆವರಿಸುತ್ತಿದೆ. ಇದರಿಂದ ಪಾದಚಾರಿಗಳು, ವಾಹನ ಸವಾರರು ಇತರೆ ವರ್ಗಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಈ ಬಗ್ಗೆ ಗಮನಹರಿಸಬೇಕು. ಮಳೆ ನೀರು ಪ್ಲಾಟ್‌ಫಾರಂಗಳಿಗೆ ನುಗ್ಗುತ್ತಿದೆ. ಅಲ್ಲಲ್ಲಿ ಸೋರಿಕೆ ಆಗುತ್ತಿದೆ. ಈ ಸಮಸ್ಯೆಗಳ ನಿವಾರಣೆಗೆ ಒತ್ತುಕೊಡಬೇಕು. “ಪೀಕ್ ಅವರ್’ನಲ್ಲಿ ಫ್ರೀಕ್ವೆನ್ಸಿಗಳನ್ನು ಹೆಚ್ಚಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಈ ಮೊದಲು 2022ರ ಆಗಸ್ಟ್ 15ರಂದು 8.25 ಲಕ್ಷ ಪ್ರಯಾಣಿಕರು ಸಂಚರಿಸಿದ್ದು ದಾಖಲೆಯಾಗಿತ್ತು. ಆಗ ಮೆಟ್ರೋ ಮಾರ್ಗವು ಬೈಯಪ್ಪನಹಳ್ಳಿ-ವೈಟ್ ಫೀಲ್ಡ್ ಹಾಗೂ ಕೆಂಗೇರಿ-ಚಲ್ಲಘಟ್ಟ ನಡುವೆ ಇನ್ನೂ ವಿಸ್ತರಣೆ ಆಗಿರಲಿಲ್ಲ. ಆದರೆ, ಅಂದು ರ್ಯಾಲಿಯೊಂದು ಇದ್ದುದರಿಂದ ಹೆಚ್ಚು ಜನ ಸಂಚರಿಸಿದ್ದರು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದರು.