ಬೆಂಗಳೂರು: ಸರದಿಯಲ್ಲಿ ನಿಲ್ಲಬೇಕಿಲ್ಲ. ಟೋಕನ್ ಖರೀದಿಸುವ ಅವಶ್ಯಕತೆಯೂ ಇಲ್ಲ. ಇನ್ಮುಂದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಕ್ಯುಆರ್ ಕೋಡ್ ತೋರಿಸಿ “ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಬಹುದು! – ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಕನ್ನಡ ರಾಜ್ಯೋತ್ಸವಕ್ಕೆ ಕನ್ನಡಿಗರಿಗೆ ಈ ಹೈಟೆಕ್ ಸೌಲಭ್ಯ ಕಲ್ಪಿಸುವ ಮೂಲಕ ವಿಶೇಷ ಕೊಡುಗೆ ನೀಡಿದೆ.
ಈ ಸೌಲಭ್ಯಕ್ಕಾಗಿ ಪ್ರಯಾಣಿಕರು ಮಾಡಬೇಕಾದ್ದು ಇಷ್ಟೇ- ಬಿಎಂಆರ್ ಸಿಎಲ್‌ನ ವ್ಯಾಟ್ಸ್‌ಆ್ಯಪ್ ಸಂಖ್ಯೆ 8105 5 56677ಕ್ಕೆ “ಹಾಯ್’ ಎಂಬ ಸಂದೇಶ ಕಳು ಹಿಸುವ ಮೂಲಕ ಕ್ಯೂಆರ್ ಟಿಕೆಟ್ ಖರೀದಿಸಲು ಸಂವಹನ ಸಾಧಿಸಿಕೊಂಡು ಸೌಲಭ್ಯ ಪಡೆದುಕೊಳ್ಳ ಬಹುದು ಅಥವಾ ಆ್ಯಂಡ್ರಾಯ್ಡ ಫೋನ್‌ನಲ್ಲಿ “ನಮ್ಮ ಮೆಟ್ರೋ’ ಆ್ಯಪ್ ಡೌನ್‌ಲೋಡ್ ಮಾಡಿ ಅಲ್ಲಿಂದಲೂ ಕ್ಯುಆರ್ ಆಧಾರಿತ ಟಿಕೆಟ್ ಪಡೆಯಬಹುದು. ಇದರಡಿ ಟಿಕೆಟ್ ಪಡೆಯುವ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ದಾರರಿಗೆ ಸಿಗುವಂತೆಯೇ ಪ್ರತಿ ಪ್ರಯಾಣದಲ್ಲಿ ಶೇ. 5ರಷ್ಟು ರಿಯಾಯ್ತಿ ಕೂಡ ದೊರೆಯಲಿದೆ. ನವೆಂಬರ್ 1ರಿಂದ (ಮಂಗಳವಾರದಿಂದ) ಈ ಸೌಲಭ್ಯ ಪ್ರಯಾಣಿಕರಿಗೆ ಲಭ್ಯವಾಗಲಿದೆ.
“ವಿಶ್ವದಲ್ಲಿ ವಾಟ್ಸ್‌ಆ್ಯಪ್ ಚಾಟ್‌ಬಾಟ್ ವ್ಯವಸ್ಥೆ ಮೂಲಕ ಟಿಕೆಟ್ ಕಲ್ಪಿಸುತ್ತಿರುವುದು “ನಮ್ಮ ಮೆಟ್ರೋ’ ದಲ್ಲೇ ಮೊದ ಲು ಎಂಬುದು ವಿಶೇಷ. ಕ್ಯುಆರ್ ಕೋಡ್ ಮೂಲಕ ವಿದೇಶಗಳಲ್ಲಿ ಮೆಟ್ರೋ ಪ್ರಯಾಣ ಟಿಕೆಟ್ ಸೌಲಭ್ಯವಿದೆ. ಆದರೆ, ಚಾಟ್‌ಬಾಟ್ ವೇದಿಕೆಯಲ್ಲಿ ಇದುವರೆಗೆ ಎಲ್ಲಿ ಯೂ ಈ ಸೌಲಭ್ಯ ಇಲ್ಲ. ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಚಾಟ್ ಮಾಡಬಹುದಾಗಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಟಿಕೆಟ್ ಪಡೆಯುವುದು ಹೇಗೆ?: ವಾಟ್ಸ್‌ಆ್ಯಪ್ ಸಂಖ್ಯೆ 8105 5 56677ಕ್ಕೆ “ಹಾಯ್’ ಎಂದು ಸಂದೇಶ ಕಳುಹಿಸಿದ ಬೆನ್ನಲ್ಲೇ ಚಾಟ್‌ಬಾಟ್ ವೇದಿಕೆ ತೆರೆದುಕೊಳ್ಳುತ್ತದೆ. ಆ ಕಡೆಯಿಂದ ಗ್ರಾಹಕರಿಗೆ ಎಲ್ಲಿಂದ ಎಲ್ಲಿಗೆ ಮತ್ತಿತರ ಸಂದೇಶಗಳು ಬರುತ್ತವೆ. ಅದರಂತೆ ಪ್ರಯಾಣ ಆರಂಭಿಸುವ ನಿಲ್ದಾಣ ಮತ್ತು ತಲುಪಬೇಕಾದ ನಿಲ್ದಾಣ ನಮೂದಿಸಿ, ಆನ್‌ಲೈನ್‌ನಲ್ಲೇ ದರ ಪಾವತಿಸಿದರೆ ಕ್ಯುಆರ್ ಕೋಡ್ ಸೃಷ್ಟಿಯಾಗುತ್ತದೆ. ಇದಕ್ಕೆ ಪೂರಕವಾಗಿ ಈ ಕ್ಯುಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ಎಲ್ಲಾ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ಗೇಟ್ ಗಳಲ್ಲಿ ಸ್ಕ್ಯಾನಿಂಗ್ ಉಪಕರಣಗಳನ್ನು ಅಳವಡಿಸಲಾಗಿದೆ. ಆ ಉಪಕರಣಕ್ಕೆ ಮೊಬೈಲ್ ಫೋನ್‌ನಲ್ಲಿ ಇರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ಗೇಟ್ ತೆರೆದುಕೊಳ್ಳುತ್ತದೆ. ನಿರ್ಗಮನ ಸಂದರ್ಭದಲ್ಲೂ ಸ್ಕ್ಯಾನ್ ಮಾಡಿ ನಿರ್ಗಮಿಸಬಹುದು. ಇದೇ ವಿಧಾನ ಪ್ಲೇ ಸ್ಟೋರ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಾಗಲೂ ಅನ್ವಯ ಆಗುತ್ತದೆ. ಇದರಿಂದ ಪ್ರಯಾಣಿಕರಿಗೆ ಶೇ. 30ರಷ್ಟು ಸಮಯ ಉಳಿತಾಯ ಆಗಲಿದೆ. ಇನ್ನು ಒಮ್ಮೆ ಖರೀದಿಸಿಸುವ ಕ್ಯುಆರ್ ಕೋಡ್ ಟಿಕೆಟ್ ಆ ದಿನದ ಅಂತ್ಯದ ತನಕ ಚಾಲ್ತಿಯಲ್ಲಿರುತ್ತದೆ. ಪ್ರಯಾಣ ಮಾಡದಿರಲು ನಿರ್ಧರಿಸಿದರೆ ದಿನ ಮುಕ್ತಾಯ ಆಗುವಷ್ಟರಲ್ಲಿ ಟಿಕೆಟ್ ರದ್ದತಿ ವಿಧಾನ ಬಳಸಿ ಮೊತ್ತ ವಾಪಸ್ ಪಡೆಯಬಹುದಾಗಿದೆ.