ಬೆಳ್ತಂಗಡಿ: ಸಾಮಾಜಿಕ ಚಟುವಟಿಕೆಗಳ ಮೂಲಕ ಸಂಸ್ಥೆಯೊಂದು ಪ್ರಸಿದ್ಧಿಗೆ ಬಂದಾಗ ಅದು ಜನರಿಗೆ ಇನ್ನಷ್ಟು ಹತ್ತಿರವಾಗು ತ್ತದೆ. ಕಲಾ ತಂಡವು ಅಜಿಲ ಸೀಮೆಯ ಪರಂಪರೆಗೆ ತಕ್ಕಂತೆ ಸರ್ವಧರ್ಮ ಸಮನ್ವತೆಯಿಂದ ಚಟುವಟಿಕೆ ನಡೆಸಿಕೊಂಡು ಬರುತ್ತಿದೆ. ಸಂಗ್ರಹಿಸಿದ ಹಣವನ್ನು ಅಶಕ್ತರ ಅನುಕೂಲಕ್ಕಾಗಿ ನೀಡಿದ್ದಾರೆ. ಧಾರ್ಮಿಕ ಚಟುವಟಿಕೆಗಳಿಗೂ ನೆರವು ಕೊಟ್ಟಿದ್ದಾರೆ. ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಇವರ ಕಾರ್ಯ ಇನ್ನಷ್ಟು ಸಮಾಜಮುಖಿಯಾಗಿ ಮುಂದುವರಿಯಲಿ ಎಂದು ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲ ಹೇಳಿದರು.
ನಮ ಮಾತೆರ್ಲಾ ಒಂಜೇ ಕಲಾ ತಂಡ ಅರುವ ಇದರ ದಶಕದ ಸಂಭ್ರಮವನ್ನು ಅಳದಂಗಡಿ ಪಂಚಾಯತ್ ವಠಾರ
ದಲ್ಲಿ ಶನಿವಾರ ರಾತ್ರಿ ಅರಸರು, ಖತೀಬರು ಹಾಗೂ ಧರ್ಮಗುರುಗಳು ದೀಪ ಬೆಳಗುವುದರ ಮೂಲಕ
ಉದ್ಘಾಟಿಸಿದರು.
ಅಳದಂಗಡಿ ನೂರುಲ್ ಇಸ್ಲಾಂ ಜುಮ್ಮಾ ಮಸೀದಿಯ ಖತೀಬರಾದ ಯೂಸುಫ್ ಸಖಾಫಿ ಮಾತನಾಡಿ, ಮನುಷ್ಯ ಮತ್ತೂಬ್ಬ ಮನುಷ್ಯನನ್ನು ಕೊಲ್ಲುವಂತಹ ಕಾಲಘಟ್ಟದಲ್ಲಿ ಕಲಾ ತಂಡದವರು ಎಲ್ಲ ಮತೀಯರನ್ನು ಸೇರಿಸಿಕೊಂಡು ಕಲೆ ಮಾತ್ರವಲ್ಲದೆ ಸಮಾಜಸೇವೆ ಮಾಡುತ್ತಿರುವುದು ಅನುಕರಣೀಯ ಎಂದರು.
ಅರುವ ಸಂತ ಪೀಟರ್ ಕ್ಲೇವರ್ ಚರ್ಚ್‌ನ ಧರ್ಮಗುರು ಫಾ| ಆಬೆಲ್ ಲೋಬೋ, ಮಾನವ ಸೇವೆಗೆ ಧರ್ಮ ಅಡ್ಡ ಬರುವುದಿಲ್ಲ ಎಂಬ ಸಂದೇಶ ಕಲಾ ತಂಡದ ಕಾರ್ಯಗಳಿಂದ ಹೊರಹೊಮ್ಮಿದೆ. ತಂತ್ರಜ್ಞಾನದ ಅತಿ ಬಳಕೆಯಿಂದ ನಾನು ಮಾತ್ರ ಬದುಕಬಲ್ಲೆ, ನನಗೆ ಬೇರೆ ಯಾರೂ ಬೇಡ ಎಂಬ ಮನೋಭಾವ ಮೂಡುತ್ತಿರುವ ಸನ್ನಿವೇಶದಲ್ಲಿ ತಂಡವು ಪರಸ್ಪರ ಪ್ರೀತಿಯ ಮೂಲಕ ಸಮಾಜಕ್ಕೆ ಹತ್ತಿರವಾಗಿದೆ ಎಂದರು.
ಡಾ| ಎನ್.ಎಂ. ತುಳುಪುಳೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜಾ. ಜನತಾದಳದ ಜಿಲ್ಲಾ ಉಪಾಧ್ಯಕ್ಷ
ಕೆ. ಜಗನ್ನಾಥ ಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷೆ ರಾಜಶ್ರೀ ಎಸ್. ಹೆಗ್ಡೆ, ತಾ.ಪಂ. ಸದಸ್ಯರಾದ ಸುಧೀರ್ ಆರ್. ಸುವರ್ಣ, ವಿನುಷಾ ಪ್ರಕಾಶ್, ಅಳದಂಗಡಿ ಗ್ರಾ.ಪಂ. ಉಪಾಧ್ಯಕ್ಷ ಸತೀಶ್, ರಂಗಭೂಮಿ ನಟ ಸುಂದರ ಹೆಗ್ಡೆ ವೇಣೂರು, ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಶಾಲೆಗಳ ಐದು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರದ 35
ಮಂದಿಯನ್ನು ಸಮ್ಮಾನಿಸಲಾಯಿತು. ರುಕ್ಮಯ ಮೂಲ್ಯ ಕಾಪಿಗುಡ್ಡೆ ಇವರಿಗೆ ನಿಧಿ ಪುರಸ್ಕಾರ ನೀಡಲಾಯಿತು.
ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಲಾ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ
ಕಾರ್ಯಕ್ರಮಗಳು ನಡೆದವು. ವಸಂತ ಬಿ. ಬಂಗೇರ ಸ್ವಾಗತಿಸಿದರು. ಯೋಗೀಶ್ ಕುಮಾರ್ ದೋರಿಂಜೆ ಪ್ರಸ್ತಾವಿಸಿದರು. ವಿಜಯಕುಮಾರ್ ನಾವರ ಸಮ್ಮಾನಿತರ ವಿವರ ನೀಡಿದರು. ಸುನಿಲ್ ಪಲ್ಲಮಜಲು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.