ದಯಾನಂದ ಸರಸ್ವತಿಯವರು ಹಾದಿ ತಪ್ಪಿ ಅನ್ಯಮಾರ್ಗವನ್ನು ತುಳಿಯುತ್ತಿದ್ದ ಜನರಿಗೆ ಅಂದು ವೇದಗಳಿಗೆ ಹಿಂದಿರುಗಿ ಎಂದು ಕರೆ ನೀಡಿದ್ದರು.
ಅವರ ಕರೆಯಂತೆ ಅದೆಷ್ಟೋ ಜನರು ಮರಳಿ ತಮ್ಮ ಮೂಲನೆಲೆಯನ್ನು ಸೇರಿಕೊಂಡರು. ಇದೀಗ ಕೊರೊನಾ ಮಹಾಮಾರಿ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದ ಅನೇಕರಿಗೆ ಹಳ್ಳಿಗಳಿಗೆ ಹಿಂದಿರುಗಿ ಎಂದು ಕರೆ ನೀಡುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹಳ್ಳಿ ಬಿಟ್ಟು ಪಟ್ಟಣ ಸೇರುವುದು ತಪ್ಪೆಂದಲ್ಲ. ವಯಸ್ಸಾದ ಹೆತ್ತವರನ್ನು ಬಿಟ್ಟು, ಪಟ್ಟಣದ ಮೋಹದ ಬಲೆಗೆ ಬಿದ್ದು ಮೂಲ ನೆಲೆಯನ್ನು ಕಣ್ಣೆತ್ತಿ ನೋಡದೆ ಇರುವುದು ತಪ್ಪು.
ಹಳ್ಳಿಯೆಂದರೆ ಸ್ವರ್ಗಕ್ಕೆ ಸಮಾನವಾದುದು. ಮಲಗಿದವರನ್ನು ಎಬ್ಬಿಸುವ ಪಕ್ಷಿಗಳ ಅಲಾರಾಂ, 6 ಗಂಟೆಯಾಗಿದ್ದರೂ 8 ಗಂಟೆಯಾಯಿತು ಏಳು ಎಂದು ಹೇಳುವ ಅಮ್ಮ, ಅವಳ ಕೈ ಚಳಕದಿಂದ ಮನೆಯನ್ನೆಲ್ಲ ಆವರಿಸುವ ಒಗ್ಗರಣೆ ಘಮ, ಮೇಯಲು ಬಿಡು ಎಂದು ಮಾಲಕನಿಗೆ ಕೂಗಿ ಹೇಳುತ್ತಿರುವ ಹಸುಗಳ ಚಿತ್ರಣ ಕಂಡುಬರುವುದು ಹಳ್ಳಿಗಳಲ್ಲಿ ಮಾತ್ರ.
ಮನೆಯ ದಿನಸಿ ಕಡಿಮೆಯಾದಾಗ ಪಕ್ಕದ ಮನೆಯವರಿಂದ ಸಾಲ ತೆಗೆದುಕೊಳ್ಳುವಿಕೆ. ಹಬ್ಬ ಹರಿ ದಿನಗಳಲ್ಲಿ ಎಲ್ಲರೂ ಸೇರಿ ಹೊಲ, ಗದ್ದೆಗಳಿಗೆ ಹೋಗಿ ಊಟ ಮಾಡುವುದು ಅವರ ಮನೆಯ ಹೋಳಿಗೆ ಇವರ ಮನೆಯ ಚಕ್ಕಲಿ ಎಲ್ಲವೂ ಒಂದೇ ವೇದಿಕೆಯಲ್ಲಿ ಸಿಗುವುದು, ಇವೆಲ್ಲ ಪಟ್ಟಣದಲ್ಲಿ ದೊರೆಯಲು ಸಾಧ್ಯವೆ? ಅಭಿವೃದ್ಧಿ ಹೆಸರಿನಲ್ಲಿ ಮರಗಳಿಗೆ ಕೊಡಲಿ ಹಾಕಿ, ಅರಣ್ಯದಲ್ಲಿ ರೆಸಾರ್ಟ್ ನಿರ್ಮಿಸಿ ಅದರೊಳಗಡೆ ಭ್ರಮಾ ಲೋಕದಲ್ಲಿ ಬದುಕುತ್ತಿರುವವರಿಗೆ ಹಳ್ಳಿಯ ಸೊಗಡು ತಿಳಿಯಲು ಸಾಧ್ಯವೇ ಇಲ್ಲ.
ಲಾಕ್‌ಡೌನ್ ಪರಿಣಾಮವಾಗಿ ಕಂಪೆನಿಗಳು ಕಾರ್ಮಿಕರನ್ನು ಕಡಿತಗೊಳಿಸಿದವು. ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡರು. ಕಾರ್ಮಿಕರೆಲ್ಲ ದಿನಗಟ್ಟಲೆ ಬಸ್‌ಗಾಗಿ ಕಾದು ತಮ್ಮ ಗೂಡು ಸೇರಿಕೊಂಡರು. ಇದೀಗ ನಮ್ಮ ಯುವಕರು ಗದ್ದೆಗಳಲ್ಲಿ ಕಾಣಸಿಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಗದ್ದೆ, ಬೆಳೆಗಳ ಪೋಸ್ಟ್ ಕಾಣುತ್ತಿವೆ. ಅಮ್ಮನ ಕೈರುಚಿಯ ಬಿಸಿ ಅಡುಗೆ ಚಪ್ಪರಿಸಿ ತಿಂದು ನಮ್ಮ ಯುವಕರು ಸದೃಢರಾಗುತ್ತಿದ್ದಾರೆ. ಎಲ್ಲವೂ ಇದೀಗ ಸಮತೋಲನವಾಗಿದೆ.
ಬಸನಗೌಡ ಪಾಟೀಲ, ಪತ್ರಿಕೋದ್ಯಮ ವಿದ್ಯಾರ್ಥಿ, ಯರಗುಪ್ಪಿ
ನೊಂದ ಮನಗಳಿಗೆ ಶಾಂತಿ ನೀಡುವ ಮಲೆನಾಡು
ಬೀಸುತ್ತಿದೆ ಗಾಳಿಯು ಜೋರಾಗಿ. ಮರೆಯುತ್ತಿದೆ ಮನ ತಾನಾಗಿ. ಎಲ್ಲವೂ ಕಣ್ಣುಗಳಿಂದ ದೂರಾಗಿ ಸವಿಯುತ್ತಿರುವೇನು ಮಲೆನಾಡನ್ನು ಬೆಟ್ಟದ ತುದಿಯಲ್ಲಿ ನಾ ಒಂಟಿಯಾಗಿ. ಮಲೆನಾಡನ್ನು ವರ್ಣಿಸಲು ಪದಗಳೇ ಸಾಲದು. ನಾನು ಮೂಲತಃ ಮಲೆನಾಡಿನವನೆ. ನನ್ನ ಕಾಲೇಜು ಶಿಕ್ಷಣ ಉಡುಪಿಯಲ್ಲಿ ಆದರೂ ಪ್ರತಿ ಬೇಸಿಗೆ ರಜೆಯಲ್ಲಿ ಬಂದು ಮಲೆನಾಡ ಗುಡ್ಡ ಬೆಟ್ಟಗಳ ಸೊಬಗನ್ನು ಸವಿಯುತ್ತಿರುತ್ತೇನೆ.
ಪ್ರತಿ ವರ್ಷವೂ ಮುಳ್ಳಯ್ಯನಗಿರಿ, ದೇವರ ಮನೆ, ಚಾರ್ಮಾಡಿ ಇಂತಹ ಜಾಗಗಳಿಗೆ ಹೋಗಿ ಅಲ್ಲಿನ ಸೊಬಗನ್ನು ಸವಿಯುತ್ತ, ಫೋಟೋಶೂಟ್ ಮಾಡುವ ಆಸೆ ಆದಾಗೆಲ್ಲ ಮನೆಗೆ ಹತ್ತಿರ ಇರುವ ದೇವರಮನೆ ಬೆಟ್ಟಕ್ಕೆ ಹೋಗಿ ಬರುತ್ತೇನೆ. ಈ ಬೆಟ್ಟಕ್ಕೆ ಪ್ರತಿ ಬಾರಿ ಹೋದಾಗೆಲ್ಲ ಸವಿ ನೆನಪುಗಳ ಬುಟ್ಟಿಗೆ ಹೊಸ ನೆನಪುಗಳು ಸೇರುತ್ತಿದ್ದವು. ನನ್ನ ಎಷ್ಟೋ ಖುಷಿಯ ಕ್ಷಣಗಳನ್ನು ಕಳೆಯುವುದು ಇಂತಹ ಜಾಗದಲ್ಲೇ.
ನೊಂದ ಮನಸ್ಸುಗಳಿಗೆ ಇಂತಹ ಜಾಗದಲ್ಲೇ ಸ್ವರ್ಗ ಎಂದೆನಿಸುವುದು. ನನ್ನ ಪ್ರತಿ ಖುಷಿ ಮತ್ತು ದುಃಖದ ಸ್ಥಿತಿಯನ್ನು ಇಂತಹ ಜಾಗದಲ್ಲೇ ಕಳೆದು ಅಭ್ಯಾಸವಿದೆ. ಆದರೆ ಈ ವರ್ಷ ನಾನು ನನ್ನ ಊರಿನಲ್ಲೇ ಇದ್ದರೂ ಇಂತಹ ಜಾಗಕ್ಕೆ ಹೋಗಲಾಗದ ನಿರಾಸೆ. ಕಾರಣ ನಿಮಗೆಲ್ಲ ತಿಳಿದಿರುವಂತೆ ಕೊರೊನಾ. ಕೊರೊನಾ ವೈರಸ್ ನಮ್ಮೆಲ್ಲರ ಖುಷಿಯ ಕ್ಷಣಗಳಿಗೆ ಅಡ್ಡವಾಗಿದೆ. ಆದಷ್ಟು ಬೇಗ ಇದು ದೂರವಾಗಲಿ. ಆದಷ್ಟು ಬೇಗ ನನ್ನ ನೆಮ್ಮದಿಯ ತಾಣವನ್ನು ತಲುಪುವಾಸೆ. ಪರಿಸ್ಥಿತಿಗೆ ಕಟ್ಟುಬಿದ್ದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಕಾಯುತ್ತಿದ್ದೇನೆ ನನ್ನ ಮಲೆನಾಡ ತಾಣವನ್ನು ಕಾಣಲು.
ರಾಜೇಶ್, ಎಂ.ಪಿ.ಎಂ. ಕಾಲೇಜು ಕಾರ್ಕಳ
ಅ ನಿರ್ವಾಹಕರ ಕರ್ತವ್ಯ ಪ್ರಜ್ಞೆ
ದೊಂದು ದಿನ ಎಂದಿನಂತೆ ಕಾಲೇಜಿನಿಂದ ಮನೆಗೆ ಬಂದಾಗ ತಡವಾಗಿತ್ತು. ಬ್ಯಾಗ್ ಕೆಳಗಿಟ್ಟು ಜೇಬಿನಲ್ಲಿದ್ದ ವಸ್ತುಗಳನ್ನು ಒಂದೊಂದಾಗಿ ಹೊರತೆಗೆದೆ. ಐಡೆಂಟಿಟಿ ಕಾರ್ಡ್‌ಗಾಗಿ ತಡಕಾಡಿದಾಗ ನಿಜಕ್ಕೂ ಆಘಾತವಾಯಿತು. ಜೇಬಿನಲ್ಲಿ ಅದರ ಪತ್ತೆಯೇ ಇರಲಿಲ್ಲ! ಯಾವ ಕ್ಷಣದಲ್ಲಿ ಕೆಳಗೆ ಬಿದ್ದಿರಬಹುದು? ಎಷ್ಟು ಯೋಚಿಸಿದರೂ ನಿಖರವಾಗಿ ಹೊಳೆಯಲಿಲ್ಲ. ಐಡಿ ಕಾರ್ಡ್ ಇಲ್ಲದಿದ್ದರೆ ಮರುದಿನ ತರಗತಿಯಲ್ಲಿ ಅಧ್ಯಾಪಕರ ಬೈಗುಳಗಳಿಗೆ ಸಿದ್ಧನಾಗಬೇಕಿತ್ತು.
ಚಿಂತಿಸುತ್ತಾ ಸಮಯ ಕಳೆದದ್ದೇ ಅರಿವಿಗೆ ಬರಲಿಲ್ಲ. ಐ.ಡಿ. ಕಾರ್ಡ್ ಕಳೆದು ಹೋದರೆ, ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ ದಂಡ ಪಾವತಿಸಬೇಕಾಗಿತ್ತು. ಅದೂ ದಂಡ ಪಾವತಿಸಿ ಒಂದು ತಿಂಗಳ ಅನಂತರ ನಮ್ಮ ಕೈ ಸೇರುತ್ತಿತ್ತು. ಬೇರೆ ವಿಧಿ ಇಲ್ಲದೇ, ಕಳೆದುಹೋದ ಕಾರ್ಡ್ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ, ಮರುದಿನ ದಂಡ ಪಾವತಿಸಲು ಮಾನಸಿಕವಾಗಿ ಸಿದ್ಧನಾದೆ.
ಅನಿರೀಕ್ಷಿತವಾಗಿ ರಾತ್ರಿ ಒಂದು ಫೋನ್ ಕರೆ ಬಂತು. ಕರೆ ಸ್ವೀಕರಿಸುತ್ತಲೇ, ಆ ಕಡೆಯಿಂದ ಹಲೋ ನೀವು ಸುದೀಪ್ ಅವರಾ? ಎಂದು ಪ್ರಶ್ನಿಸಿದರು. ಹೌದು ಎಂದುತ್ತರಿಸಿದೆ. ನನಗೆ ಒಂದು ಕಾರ್ಡ್ ಸಿಕ್ಕಿದೆ. ಯಾವ ಕಾರ್ಡ್ ಎಂದು ಗೊತ್ತಿಲ್ಲ. ನಿಮ್ಮ ನಂಬರ್ ಅದರಲ್ಲಿ ಇದ್ದುದರಿಂದ ಕರೆ ಮಾಡಿದೆ ಎಂದರು. ಅವರಿಗೆ ಇಂಗ್ಲಿಷ್ ಓದಲು ಬಾರದೆ ಇದ್ದುದರಿಂದ “ಅದು ಯಾವ ಕಾರ್ಡ್’ ಎಂಬ ಸ್ಪಷ್ಟತೆ ಇರಲಿಲ್ಲ. ಹೌದಾ, ಹಾಗಾದರೆ ನೀವು ಯಾರು? ಎಂದು ನಾನು ಪ್ರಶ್ನಿಸಿದಾಗ, ನಾನು ಸರಕಾರಿ ಬಸ್‌ನ ಕಂಡಕ್ಟರ್. ಬಸ್‌ನ ಕೊನೆಯ ಸೀಟಿನಲ್ಲಿ ಈ ಕಾರ್ಡ್ ಸಿಕ್ಕಿದೆ. ನಾಳೆ ಬೆಳಗ್ಗೆ 7.30ಕ್ಕೆ ನಿಮ್ಮ ಊರಿನ ಮಾರ್ಗವಾಗೇ ನಮ್ಮ ಬಸ್ ಹಾದು ಹೋಗುತ್ತದೆ. ಆಗ ಕಾರ್ಡ್‌ನ್ನು ಹಿಂಪಡೆದುಕೊಳ್ಳಿ ಎಂದಾಗ ನನ್ನ ಐಡಿ ಕಾರ್ಡ್ ಬಸ್ಸಿನಲ್ಲಿ ಬಿದ್ದಿರುವುದು ಖಾತ್ರಿಯಾಯಿತು.
ಮರುದಿನ ಬೆಳಗ್ಗೆ ಮಾಮೂಲಿ ಸಮಯಕ್ಕಿಂತ ಬೇಗನೆ ಬಸ್ ನಿಲ್ದಾಣಕ್ಕೆ ಹೋಗಿ ಆ ಬಸ್‌ಗಾಗಿ ಕಾದು ನಿಂತೆ. ಸರಿಯಾದ ಸಮಯಕ್ಕೆ ಬಸ್ ಬಂತು. ಬಸ್ ಹತ್ತಿದೊಡನೆ ಕಂಡಕ್ಟರ್ ಬಳಿ ವಿಚಾರಿಸಿದೆ. ತತ್‌ಕ್ಷಣ ಅವರು ನನ್ನ ಕಾರ್ಡ್ ಕೈಗಿತ್ತು, ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸಿದರು. ನಾನು ಅವರ ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆಗೆ ಬೆರಗಾಗಿ ಧನ್ಯವಾದ ಸಲ್ಲಿಸಿದೆ. “ನಿರ್ವಾಹಕರೆಂದರೆ ಕೆಲಸದ ಒತ್ತಡದಿಂದಾಗಿ ಪ್ರಯಾಣಿಕರ ಮೇಲೆ ರೇಗಾಡುವವರು’ ಎಂಬ ನನ್ನ ಮನಸ್ಸಿನಲ್ಲಿದ್ದ ಭಾವನೆ ಅಂದಿನಿಂದ ಬದಲಾಯಿತು. ತಮ್ಮ ಕೆಲಸದ ವ್ಯಾಪ್ತಿಯನ್ನು ಮೀರಿ ಅವರು ನನಗೆ ಸಹಾಯ ಮಾಡಿದ ರೀತಿ ನಿರ್ವಾಹಕರ ಮೇಲೆ ನಾನಿಟ್ಟಿದ್ದ ಗೌರವವನ್ನು ಇಮ್ಮಡಿಗೊಳಿಸಿತು.
ಸುದೀಪ್ ಶೆಟ್ಟಿ ಪೇರಮೊಗ್ರು, ಎಂಬಿಎ ಪ್ರವಾಸೋದ್ಯಮ ವಿಭಾಗ, ಮಂಗಳೂರು ವಿವಿ
ಅಪ್ಪ ನೀನೆ ನಮ್ಮ ಆಸ್ತಿ
ಅಪ್ಪಾ ಈ ಒಂದು ಪದವೇ ಸಾಕು ಇಲ್ಲಿ ನೂರಾನೆಯ ಬಲವಿದೆ, ಕೋಟಿ ದೇವರ ಆಶೀರ್ವಾದವಿದೆ, ನಂಬಿಕೆಯ ಆಗರವಿದೆ, ಪ್ರೀತಿಯ ಸಾಗರವಿದೆ. ಅಪ್ಪ ಅನ್ನೋನು ತನ್ನ ನೋವಲ್ಲಿ ಮನೆ ಮಂದಿಗೆ ಸುಖ ತರಬಲ್ಲ ಮಾಯಾವಿ. ಮನೆಯವರ ಇಷ್ಟ-ಕಷ್ಟಗಳ ಪೂರೈಸಲು ಶ್ರಮಿಸುವ ಈ ಅಪ್ಪ ತನ್ನ ಇಷ್ಟ ಕಷ್ಟಗಳ ಬಗ್ಗೆ ಆಲೋಚಿಸುವುದು ಬಹಳ ಅಪರೂಪ. ತನ್ನೆಲ್ಲ ನೋವನ್ನು ಒಡಲೊಳಗೆ ಬಚ್ಚಿಡುವ ಅಪ್ಪ ಸಿಡುಕ ಅಂತ ಅನ್ಸೋದು ಸಹಜ. ಯಾವಾಗ ನೋವನ್ನು ತೋರೊದಿಕ್ಕಾಗೋದಿಲ್ಲ ಆಗ ಹೊರ ಬರೋ ಭಾವನೆ ಕೋಪಾನೆ ಅಲ್ವಾ? ನಮ್ಮೆಲ್ಲ ಬೇಕು ಬೇಡಗಳನ್ನು ಅರ್ಥ ಮಾಡ್ಕೊಳ್ಳೋ ಅಪ್ಪನ ಬೇಕು ಬೇಡಗಳನ್ನು ಅರ್ಥಮಾಡ್ಕೊಳ್ಳೋದ್ರಲ್ಲಿ ನಾವು ಯಾಕೆ ವಿಫಲರಾಗ್ತಿವಿ?…
ಮನೆಯಿಂದ ಹೊರಗಿದ್ದು ಕೆಲಸ ಮಾಡೋ ಅಪ್ಪನಿಗೆ ಸಮಾಜದ ಆಗುಹೋಗುಗಳು ನಮಗಿಂತ ಚೆನ್ನಾಗಿ ಅರಿವಿರುತ್ತದೆ. ಮತ್ತು ಕುಟುಂಬವನ್ನು ಜೋಪಾನ ಮಾಡಿ ಕಾಪಾಡಿಕೊಳ್ಬೇಕಂದ್ರೆ ಅಪ್ಪ ಇದನ್ನೆಲ್ಲಾ ತಿಳ್ಕೊಳ್ಳಲೇಬೇಕು. ಇದರ ಅರಿವಿರೋದ್ರಿಂದನೇ ಅಪ್ಪ ನಮ್ಮಲ್ಲಿ ಶಿಸ್ತು ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳೋದಿಕ್ಕೆ ಹೇಳ್ತಾನೆ, ಕೆಲವು ಬಾರಿ ಕಟ್ಟುಪಾಡುಗಳನ್ನು ಹಾಕ್ತಾನೆ. ಅವುಗಳನ್ನು ನಾವು ಅನುಸರಿಸದೇ ಇದ್ದ ಸಂದರ್ಭದಲ್ಲಿ ಗದರಬಹುದು.ಆದ್ರೆ ಅವನ ಉದ್ದೇಶ ಒಂದೇ ಅವನ ಮಕ್ಕಳಿಗೆ ಜೀವನ ಪಾಠವನ್ನು ಕಲಿಸೋದು. ಅಪ್ಪನನ್ನು ಬೈದುಕೊಂಡೆ ನಾವು ಇವುಗಳನ್ನೆಲ್ಲಾ ಕಲ್ತಿರ್ತೀವಿ ಆದ್ರೆ ಅಪ್ಪ ಮಾಡಿದ್ದು ಸರಿ ಅಂತ ಅರ್ಥ ಆಗೋವಾಗ ತಡ ಆಗಿರುತ್ತೆ.
ಅಪ್ಪಾ ನೀ ನಮಗೆಲ್ಲವನ್ನು ಮಾಡಿಕೊಡುವುದರ ಜತೆಗೆ ಸ್ವಾವಲಂಬಿಯಾಗಿರುವುದನ್ನು ಕಲಿಸಿದ್ದೀಯ, ಕೋಪ ಮಾಡಿಕೊಂಡಾಗ ಯಾಕೆ ಹೀಗಾಡ್ತಾರೆ ಅಂತ ಅನ್ಸಿದ್ರು ನೀ ಆ ರೀತಿ ನಡೆದುಕೊಳ್ಳೊದ್ರ ಫಲವೇ ನಮ್ಮಲ್ಲಿ ಶಿಸ್ತು ಮನೆ ಮಾಡಿರೋದು. ನಾವು ಇವತ್ತು ಎಷ್ಟೇ ಬೇಳೆದು ದೊಡ್ಡವರಾಗಿರಲಿ ನಮ್ಮ ನೋವಲ್ಲಿ ಮೊದಲು ನೆನಪಾಗೋದು ನೀನೆ, ನಮ್ಮ ಪ್ರತಿ ಕಷ್ಟದಲ್ಲು ಜತೆ ನಿಂತವನೂ ನೀನೆ. ತಪ್ಪೋ ಸರಿನೋ ಆದ್ರೆ ಯಾವ ಕ್ಷಣದಲ್ಲಿಯೂ ನಮ್ಮ ಕೈ ಬಿಟ್ಟಿಲ್ಲ ನೀನು. ಸಣ್ಣ ತಪ್ಪಿಗೂ ಗದರುವ ನೀನು ನಮ್ಮ ಸಣ್ಣ ಸಣ್ಣ ಸಾಧನೆಯಲ್ಲಿಯೂ ಸಾರ್ಥಕತೆ ಕಂಡಿದ್ದೀಯ. ಅದ್ಕೆ ನೀನಂದ್ರೆ ನಮ್ಗೆ ಗೌರವ ಪ್ರೀತಿ ಎಲ್ಲ. ಮನೆಯಲ್ಲಿ ಎಷ್ಟೇ ಬೈದ್ರೂ ಶಾಲಾ ಕಾಲೇಜುಗಳ ಪೇರೆಂಟ್ಸ್ ಮೀಟಿಂಗ್‌ಗೆ ಬರೋ ನೀನು ನಮ್ಮನ್ನ ಒಂದು ದಿನ ಬಿಟ್ಟು ಕೊಟ್ಟಿದ್ದಿಲ್ಲ. ಅವಾಗೆಲ್ಲ ನಿನ್ನ ಬಗ್ಗೆ ಅಪಾರವಾದ ಹೆಮ್ಮೆ ನಮಗಾಗ್ತಿತ್ತು.
ಅಪ್ಪಾ ಯು ಆರ್ ಹೀರೋ
ನಾವು ಸಣ್ಣವರಿದ್ದಾಗ ಆ ಸ್ಕೂಟರ್ ಅಲ್ಲಿ ನಮ್ಮನ್ನೆಲ್ಲ ಕೂರಿಸ್ಕೊಂಡು ಹೋಗ್ತಿದ್ದಾಗ ದಾರಿ ಉದ್ದಕ್ಕೂ ನಿಂಗೆ ಎಲ್ಲಾರು ನಮಸ್ತೆ ಮಾಡ್ತಿದ್ರೆ ನಮ್ಗೊಂತರ ಗರ್ವ. ಜತೆಗೆ ನೀನು ಹೀರೋ ಆಗಿºಡ್ತಿದ್ದೆ ನಮ್ಮ ಕಣ್ಣಲ್ಲಿ. ನೀನು ಯಾವತ್ತಿಗೂ ಹೀರೋನೆ. ಎಷ್ಟೋ ವಿಷಯಗಳನ್ನು ನಮ್ಗೆ ಮನಬಂದಂತೆ ನೀನು ಮಾಡ್ಲಿಕ್ಕೆ ಬಿಡದಿದ್ದಾಗ ನಮ್ಗೆ ನಿನ್ನ ಬಗ್ಗೆ ಬೇಜಾರಾದ್ರೂ ಯಾವತ್ತು ನಮ್ಮನ್ನು ಅನುಮಾನಿಸದೆ ಇದ್ದೆ ಅಲ್ವ ನೀನು? ಅದಕ್ಕಾಗಿ ನಿನ್ನ ಬಗ್ಗೆ ತುಂಬಾ ಹೆಮ್ಮೆ. ಅಪ್ಪ ಅಂದ್ರೆ ನಿನ್ನ ಹಾಗೆ ಇರ್ಬೇಕು ಅಂತ ಅನ್ಸಿದ್ದು ಸುಳ್ಳಲ್ಲ. ಇವತ್ತು ನಾಲ್ಕು ಜನರ ಮಧ್ಯೆ ತಲೆ ಎತ್ತಿ ಓಡಾಡುವ ತಾಕತ್ತನ್ನು ನಮ್ಗೆ ನೀಡಿದ ನೀನು ಗ್ರೇಟ್ ಅಪ್ಪಾ.. ವಿ ಲವ್ ಯೂ…
ಎಲ್ಲರ ನೋವಿಗೂ ನಲಿವಾಗೋ ನಮ್ಮಪ್ಪನ ನಗು ನಾವಾಗಬೇಕು. ಮತ್ಯಾಕೆ ಅಲ್ವಾ ಮಕ್ಕಳಿರೋದು. ಕೋಟಿ ಕೋಟಿ ಆಸ್ತಿ ಇದ್ದರೇನು ಬಂತು ಅಪ್ಪನ ಮುಖದಲ್ಲಿ ನಗು ತರೋ ತಾಕತ್ತು ಮಕ್ಕಳಿಗಿಲ್ಲವಾದರೆ. ಅಪ್ಪ ಮಾಡಿಟ್ಟ ಆಸ್ತಿ ಕರಗಿ ಹೋಗಬಹುದು ಆದ್ರೆ ಅವನು ಕಲಿಸಿದ ಪಾಠಗಳು ಜೀವನದುದ್ದಕ್ಕೂ ನಮ್ಮನ್ನು ಕಾಪಾಡುತ್ತವೆ. ಅಪ್ಪ ಒಂಥರಾ ಆಕಾಶನೆ. ಅವನ ಅಸ್ತಿತ್ವದ ಅನಿವಾರ್ಯಯ ಅರಿವು ನಮಗಾಗದಿದ್ರೂ ಅವನ ಅನುಪಸ್ಥಿತಿ ಖಂಡಿತ ಅರಿವಾಗುತ್ತದೆ. ನಮ್ಮ ನೆಮ್ಮದಿಯ ಬಾಳಿನ ಸೂತ್ರದಾರನಿಗೆ ಧನ್ಯವಾದ. ನಮ್ಮ ಆಸ್ತಿ ನೀನು ನಿನ್ನ ಆಸ್ತಿ ನಾವುಗಳಾಗ್ತಿವಿ.
ಸಾಯಿ ಶ್ರೀಪದ್ಮ ಡಿ.ಎಸ್. ಸಂತ ಫಿಲೋಮಿನಾ ಕಾಲೇಜು, ಮೈಸೂರು