Advertisement

Namma Clinic; ದ.ಕ. 5, ಉಡುಪಿಯ 3 ಕಡೆ ನಿರ್ಮಾಣಕ್ಕೆ ಸಿದ್ಧತೆ

12:34 AM Jan 15, 2024 | Team Udayavani |

ಮಂಗಳೂರು: ನಗರ ಭಾಗದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್‌ ಸದ್ಯದಲ್ಲೇ ಪಟ್ಟಣ ಪಂಚಾಯತ್‌ ವ್ಯಾಪ್ತಿಗೂ ವಿಸ್ತರಣೆಯಾಗಲಿದೆ. ಕರಾವಳಿ ಭಾಗದ ಒಟ್ಟು ಎಂಟು ಕಡೆ ಹೊಸದಾಗಿ ಆರಂಭಿಸುವ ಚಿಂತನೆ ರಾಜ್ಯ ಸರಕಾರದ್ದು.

Advertisement

ದಕ್ಷಿಣ ಕನ್ನಡ ಜಿಲ್ಲೆಯ 5 ಮತ್ತು ಉಡುಪಿ ಜಿಲ್ಲೆಯ 3 ಕಡೆ ಕೆಲವೇ ತಿಂಗಳಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಸದ್ಯ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸೂಟರ್‌ ಪೇಟೆ, ಬೋಳಾರ, ಬಂದರು, ಪಚ್ಚನಾಡಿ, ಕೋಡಿಕಲ್‌, ಕುಂಜತ್ತಬೈಲ್‌, ಮೀನಕಳಿಯ, ಸುಳ್ಯದ ದುಗ್ಗಲಡ್ಕ, ಮೂಡುಬಿದಿರೆಯ ಗಂಟಾಲಕಟ್ಟೆ, ಉಳ್ಳಾಲದ ಕೆರೆಬೈಲು, ಕಡಬದ ಕೋಡಿಂಬಾಳ, ಪುತ್ತೂರಿನ ಬನ್ನೂರು ಗ್ರಾಮದಲ್ಲಿ “ನಮ್ಮ ಕ್ಲಿನಿಕ್‌’ ಆರಂಭಗೊಂಡಿದೆ. ಉಡುಪಿ ಜಿಲ್ಲೆಯ ಬೀಡಿನಗುಡ್ಡೆ, ಕಕ್ಕುಂಜೆ, ನಿಟ್ಟೂರು, ಕುಂದಾಪುರದ ಖಾರ್ವಿಕೇರಿ, ಟಿ.ಟಿ. ರಸ್ತೆ, ಕಾರ್ಕಳದ ಮರೀನಾಪುರದಲ್ಲಿ ಇವೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

“ನಮ್ಮ ಕ್ಲಿನಿಕ್‌’ಗಳು ಈವರೆಗೆ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಕಾರ್ಯ ನಿರ್ವಹಿಸುತ್ತಿದ್ದವು. ಕಾರ್ಮಿಕ ಸ್ನೇಹಿ ಮಾಡಬೇಕು ಎಂಬ ಉದ್ದೇಶದಿಂದ ಬೆಳಗ್ಗೆ 8ರಿಂದ ಮಧ್ಯಾಹ್ನ 12 ಮತ್ತು ಸಂಜೆ 4ರಿಂದ ರಾತ್ರಿ 8ರ ವರೆಗೆ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ. ಬಳಿಕ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸದ್ಯ ಸರಾಸರಿ 25ರಿಂದ 30 ಮಂದಿ ಪ್ರತೀ ದಿನ ಆಗಮಿಸುತ್ತಿದ್ದಾರೆ.

ಏನೆಲ್ಲಾ ಸೇವೆ ಸಿಗಲಿದೆ?
ಗರ್ಭಿಣಿ, ಶಿಶುವಿನ ಆರೈಕೆ, ಮಕ್ಕಳ ಸೇವೆ, ಕುಟುಂಬ ಕಲ್ಯಾಣ ಸೇವೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಂಪೂರ್ಣ ಹೊರರೋಗಿ ಸೇವೆಗಳು, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ಕ್ಯಾನ್ಸರ್‌ ಸ್ಕ್ರೀನಿಂಗ್‌ ಸೇವೆ, ಬಾಯಿ ಆರೋಗ್ಯ ಸಮಸ್ಯೆಗಳು ಸೇವೆ, ಕಣ್ಣಿನ ತಪಾಸಣೆ, ಮೂಗು, ಗಂಟಲು ಇತರೇ ಸೇವೆಗಳು, ಮಾನಸಿಕ ಆರೋಗ್ಯ ಸ್ಕ್ರೀನಿಂಗ್‌ ಸೇವೆ, ವೃದ್ಧಾಪ್ಯ ಆರೈಕೆ ಸಹಿತ ತುರ್ತು ವೈದ್ಯಕೀಯ ಸೇವೆ ಸಹಿತ ಒಟ್ಟು 12 ಪ್ರಮುಖ ಆರೋಗ್ಯ ಸೇವೆಗಳು ಲಭ್ಯ ಇರಲಿವೆ. ವೈದ್ಯಾಧಿಕಾರಿ, ಶುಶ್ರೂಷಕಿ, ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಡಿ ಗ್ರೂಪ್‌ ಸಿಬಂದಿ ಸೇರಿ ಒಟ್ಟು ನಾಲ್ವರ ಕಾರ್ಯ ನಿರ್ವಹಿಸುತ್ತಾರೆ. ಸಾರ್ವಜನಿಕರಿಗೆ ಉಚಿತ ಸೇವೆ ಸಿಗಲಿದೆ.

ಎಲ್ಲೆಲ್ಲಿ ಸ್ಥಾಪನೆ ?
ನಮ್ಮ ಕ್ಲಿನಿಕ್‌ ಹೊಸದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರು ಪಟ್ಟಣ ಪಂಚಾಯತ್‌, ಬಜಪೆ, ಮೂಲ್ಕಿ, ವಿಟ್ಲ, ಕಿನ್ನಿಗೋಳಿಯಲ್ಲಿ ಸದ್ಯದಲ್ಲೇ ಆರಂಭಗೊಳ್ಳಲಿದೆ. ಉಡುಪಿ ಜಿಲ್ಲೆಯ ಕಾಪು, ಸಾಲಿಗ್ರಾಮ, ನಗರ ಭಾಗದ ಮಣಿಪಾಲದಲ್ಲಿಯೂ ನಮ್ಮ ಕ್ಲಿನಿಕ್‌ ಆರಂಭಕ್ಕೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.

Advertisement

ನಮ್ಮ ಕ್ಲಿನಿಕ್‌ಗಳನ್ನು ಪಟ್ಟಣ ಪಂಚಾಯತ್‌ ವ್ಯಾಪ್ತಿಗೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದ್ದು, ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಹೆಚ್ಚಿನ ಸಂಖ್ಯೆಯ ರೋಗಿಗಳು ಕೂಡ ನಮ್ಮ ಕ್ಲಿನಿಕ್‌ಗೆ ಬರುತ್ತಿದ್ದಾರೆ. ದಿನಗೂಲಿ ನೌಕರರನ್ನು, ದುಡಿಯುವ ವರ್ಗದವರನ್ನು ಗಮನದಲ್ಲಿ ಇರಿಸಿಕೊಂಡು “ನಮ್ಮ ಕ್ಲಿನಿಕ್‌’ ಸಮಯವನ್ನು ಪರಿಷ್ಕರಣೆ ಮಾಡಲು ರಾಜ್ಯ ಸರಕಾರದ ನಿರ್ದೇಶನ ನೀಡಿದ್ದು, ಅದರಂತೆ ಕಾರ್ಯಾಚರಿಸುತ್ತಿದೆ.
– ಡಾ| ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next