Advertisement

ಸದ್ದು ಮಾಡ್ತಿದೆ ನಮ್ಮ ಬಾಗಲಕೋಟೆ!

02:24 PM Jun 29, 2020 | Suhan S |

ಬಾಗಲಕೋಟೆ: ಹಲವು ಐತಿಹಾಸಿಕ ಸ್ಮಾರಕ, ವೈಭವಗಳಿಂದ ಕೂಡಿದ ಜಿಲ್ಲೆಯ ಮೆರಗು ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಯುವಕರು ಕೂಡಿ ರಚಿಸಿದ ರ್ಯಾಪ್‌ ಸಾಂಗ್‌ ಯುಟ್ಯೂಬ್‌ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೇವಲ 14 ದಿನಗಳಲ್ಲಿ 20 ಸಾವಿರ ಜನರು ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲೆಯ ವಿಶೇಷ ಐತಿಹಾಸಿಕ ಸ್ಥಳ, ಇಲ್ಲಿನ ತಿಂಡಿ-ತಿನಿಸು, ಆಲಮಟ್ಟಿ ಡ್ಯಾಂ, ಹಿನ್ನೀರ ಸೊಬಗು, ಬಾದಾಮಿ ಚಾಲುಕ್ಯರು, ಕಬ್ಬಿನ ನಾಡು ಹೀಗೆ ಹಲವು ಸೊಬಗು ಪರಿಚಯಿಸುವ ನಿಟ್ಟಿನಲ್ಲಿ ಬಾಗಲಕೋಟೆಯ ಯುವ ಪ್ರತಿಭೆಗಳು ನಮ್ಮ ಬಾಗಲಕೋಟೆ ಎಂಬ ರ್ಯಾಪ್‌ ಸಾಂಗ್‌ ಚಿತ್ರೀಕರಿಸಿ, ಯೂಟ್ಯೂಬ್‌ಗ ಹಾಕಿದ್ದಾರೆ. ಸದ್ಯ ಬಾಗಲಕೋಟೆ ಜಿಲ್ಲೆ ಅಷ್ಟೇ ಅಲ್ಲ, ದೇಶ-ವಿದೇಶಗಳಲ್ಲಿ ಇರುವ ಬಾಗಲಕೋಟೆಯ ಜನರೂ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

14 ದಿನದಲ್ಲಿ 20 ಸಾವಿರ ಪ್ಲಸ್‌: ಕಳೆದ 14 ದಿನಗಳ ಹಿಂದಷ್ಟೇ ಈ ರ್ಯಾಪ್‌ ಸಾಂಗ್‌, ಯೂಟ್ಯೂಬ್‌ಗ ಹಾಕಿದ್ದು, ಈಗ 20 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿ, ನಮ್ಮ ಜಿಲ್ಲೆಯ ವೈಭವ ಸುಂದರವಾಗಿ ಬಣ್ಣಿಸಿದ್ದೀರಿ ಎಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಹಾಡಿನಲ್ಲಿ ಐತಿಹಾಸಿಕ ಗ್ರಾಮಗಳು, ಬಾದಾಮಿ ಗುಹೆಗಳು, ಶಿಲ್ಪಕಲೆಯ ತೊಟ್ಟಿಲು ಐಹೊಳೆ, ಪಟ್ಟದಕಲ್ಲು ದೇವಾಲಯ, ಇಳಕಲ್ಲ ಸೀರೆ, ರನ್ನನ ನಾಡು ಮುಧೋಳ, ಬಾಗಲಕೋಟೆಯ ಐತಿಹಾಸಿಕ ಮುಚಖಂಡಿ ಕೆರೆ, ಶಿರೂರ ಅಗಸಿ, ಬಿವಿವಿ ಸಂಘದ ಬಸವೇಶ್ವರ ಕಲಾ ಕಾಲೇಜು, ಮೂರು ದಿನಗಳ ಕಾಲ ನಡೆಯುವ ಬಾಗಲಕೋಟೆ ಹೋಳಿ ಹೀಗೆ ಜಿಲ್ಲೆಯ ಹಲವು ವೈಶಿಷ್ಟ್ಯತೆ ಬಣ್ಣಿಸಲಾಗಿದೆ.

ಲಾಕ್‌ಡೌನ್‌ ದಿನ ಸದ್ಬಳಕೆ: ಕೋವಿಡ್ ವೈರಸ್‌ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್‌ಡೌನ್‌ ದಿನಗಳನ್ನೇ ಸದ್ಬಳಕೆ ಮಾಡಿಕೊಂಡಿರುವ ಸುಮಾರು 10 ಜನರ ತಂಡ, ನಮ್ಮ ಬಾಗಲಕೋಟೆ ಎಂಬ ರ್ಯಾಪ್‌ ಸಾಂಗ್‌ ರಚಿಸಿದ್ದಾರೆ. ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶಿರೂರಿನ ಮುತ್ತು ಮುಷ್ಠಿಗೇರಿಮಠ ಈ ಹಾಡು ರಚಿಸಿ, ಸಂಗೀತ ಸಂಯೋಜನೆ ಮಾಡಿದ್ದಾರೆ. ಬಸವೇಶ್ವರ ಕಲಾ ಕಾಲೇಜಿನ ಉಪನ್ಯಾಸಕ ನಟರಾಜ್‌ ಇಂಗಳಗಿ ಸಹಕಾರದೊಂದಿಗೆ ಚಿತ್ರೀಕರಣ ಮಾಡಲಾಗಿದೆ. ಮುತ್ತು ಮುಷ್ಠಿಗೇರಿಮಠ, ವಿನಾಯಕ ದಂಡಗಿ, ಪ್ರಮೋದ ಉಕ್ಕಲಿ, ಆಶಿಪ್‌ ಮಕಾನದಾರ, ಶಿವು ಹಿರೇಮಠ, ಅಶ್ವಿ‌ನ್‌ ಎನ್‌.ಎಸ್‌, ಕಲ್ಮೇಶ ದಿವಾನ, ಬಾಲ ಪ್ರತಿಭೆಗಳಾದ ಆಯುಷ್‌ ಇಂಗಳಗಿ, ಕಾವ್ಯಾ ಜುಗತಿಮಠ ಹೀಗೆ ಹಲವರು ಸೇರಿ ತಮ್ಮ ಹುಟ್ಟೂರು, ಜಿಲ್ಲೆಯ ವೈಭವ ಹೆಚ್ಚಿಸಲು, ಲಾಕ್‌ಡೌನ್‌ ದಿನಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ.

ಲಾಕ್‌ಡೌನ್‌ ವೇಳೆ ನಾನು ಊರಿಗೆ ಬಂದಿದ್ದೆ.  ಈ ವೇಳೆ ನಮ್ಮ ಜಿಲ್ಲೆಯ ಸಂಸ್ಕೃತಿ, ಪರಂಪರೆ, ಐತಿಹಾಸಿಕ ಸ್ಮಾರಕಗಳ ಕುರಿತು ಹಾಡೊಂದನ್ನು ರಚಿಸಿ, ಅದನ್ನು ಚಿತ್ರೀಕರಿಸುವ ಆಶಯ ವ್ಯಕ್ತಪಡಿಸಿದಾಗ ಹಲವರು ಸಹಕಾರ ನೀಡಿದರು. ಇದೀಗ ಈ ಸಾಂಗ್‌ಗೆ ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.-ಮುತ್ತು ಮುಷ್ಠಿಗೇರಿಮಠ, ಯುವ ಕಲಾವಿದ

Advertisement

 ಲಾಕ್‌ಡೌನ್‌ ವೇಳೆ ಸಮಯ ವ್ಯರ್ಥ ಮಾಡದೇ ನಮ್ಮ ಹುಟ್ಟೂರು, ಜಿಲ್ಲೆಯ ಸೊಬಗು ಬಿಂಬಿಸುವ ರ್ಯಾಪ್‌ ಸಾಂಗ್‌ ರಚಿಸಲು ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿ ಮುತ್ತು ಮುಷ್ಠಿಗೇರಿಮಠ ಮುಂದಾಗಿದ್ದರು. ಅವರಿಗೆ ಎಲ್ಲ ರೀತಿಯ ಸಹಕಾರ ನೀಡಿ, ಈ ಸಾಂಗ್‌ ಚಿತ್ರೀಕರಿಸಿದ್ದು, 14 ದಿನಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. –ನಟರಾಜ ಇಂಗಳಗಿ, ಉಪನ್ಯಾಸಕ, ಬಸವೇಶ್ವರ ಕಲಾ ಕಾಲೇಜು

 

-ವಿಶೇಷ ವರದಿ

 

Advertisement

Udayavani is now on Telegram. Click here to join our channel and stay updated with the latest news.

Next