Advertisement

ವೈವಿಧ್ಯಮಯ ನಮ್ಮ ಅಬ್ಬಕ್ಕ ಸಂಭ್ರಮ

05:52 PM Oct 03, 2019 | mahesh |

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವು ಮಂಗಳೂರಿನಲ್ಲಿ ಏರ್ಪಡಿಸಿದ ದ್ವಿತೀಯ ವರ್ಷದ “ನಮ್ಮ ಅಬ್ಬಕ್ಕ’ ಕಾರ್ಯಕ್ರಮ”ಶ್ರಾವಣ ಸಂಭ್ರಮ’ ಎಂಬ ಹೆಸರಿನಲ್ಲಿ ಸಾಂಸ್ಕೃತಿಕ ವೈವಿಧ್ಯದೊಂದಿಗೆ ಸಂಪನ್ನಗೊಂಡಿತು.

Advertisement

ವೀರವನಿತೆ ಅಬ್ಬಕ್ಕ ತಾಳಮದ್ದಳೆ
ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾದ ರಾಣಿ ಅಬ್ಬಕ್ಕಳ ಕುರಿತಾಗಿ ರಾಷ್ಟ್ರಮಟ್ಟದಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸುವ ಹಿನ್ನೆಲೆಯಲ್ಲಿ 2018ರಲ್ಲಿ ಸ್ಥಾಪಿಸಲಾದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ “ವಿರಾಂಟ್‌’ ಈ ಬಾರಿ ಪ್ರತಿಷ್ಠಾನ ಪ್ರವರ, ಅಬ್ಬಕ್ಕ ಸೇವಾ ಪುರಸ್ಕಾರ ಪ್ರದಾನ ಹಾಗೂ ಶ್ರಾವ್ಯ ನೃತ್ಯ ರಂಜನೆಯೊಂದಿಗೆ “ನಮ್ಮ ಅಬ್ಬಕ್ಕ’ ಶ್ರಾವಣ ಸಂಭ್ರಮವನ್ನು ಆಚರಿಸಿತು. ಇದರಲ್ಲಿ “ವೀರವನಿತೆ ಅಬ್ಬಕ್ಕ’ ಯಕ್ಷಗಾನ ತಾಳಮದ್ದಳೆ ಪ್ರಸಿದ್ಧ ಕಲಾವಿದರ ಪ್ರಬುದ್ಧ ನಿರ್ವಹಣೆಯಿಂದ ಮೆಚ್ಚುಗೆ ಗಳಿಸಿತು.

ಕರಾವಳಿ ಭಾಗದ ವಿವಿಧ ಐತಿಹಾಸಿಕ ಸಂಗತಿಗಳನ್ನು ಕ್ರೋಢೀಕರಿಸಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು ಸಂಯೋಜಿಸಿದ ಕಥಾಹಂದರವನ್ನು ಆಧರಿಸಿ ಪುತ್ತೂರು ದೇವರಾಜ ಹೆಗ್ಡೆ ಮತ್ತು ಡಾ| ದಿನಕರ ಯಸ್‌.ಪಚ್ಚನಾಡಿ “ವೀರವನಿತೆ ಅಬ್ಬಕ್ಕ’ ಪ್ರಸಂಗ ರಚನೆ ಮಾಡಿದ್ದಾರೆ . ಭಾಗವತರಾಗಿ ಮೊದಲ ಭಾಗದಲ್ಲಿ ಭವ್ಯಶ್ರೀ ಕುಲ್ಕುಂದ ಹಾಗೂ ದ್ವಿತೀಯಾರ್ಧದಲ್ಲಿ ಪಟ್ಲ ಸತೀಶ್‌ ಶೆಟ್ಟಿ ಕಂಠಸಿರಿಯಿಂದ ಗಮನ ಸೆಳೆದರು. ಚಂಡೆಮದ್ದಳೆಯಲ್ಲಿ ದಯಾನಂದ ಶೆಟ್ಟಿಗಾರ ಮಿಜಾರು ಮತ್ತು ರೋಹಿತ್‌ ಉಚ್ಚಿಲ ಸಹಕರಿಸಿದರು.

ಅರ್ಥಧಾರಿಗಳಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಅವರು ಲಕ್ಷ್ಮಪ್ಪ ಬಂಗರಸನಾಗಿ ಗಂಗವಾಡಿಯಿಂದ ತುಳುನಾಡಿಗೆ ಬಂದ ಬಂಗರಸರ ಇತಿಹಾಸ, ಮೂಡಬಿದಿರೆಯ ಚೌಟರಸರೊಂದಿಗಿನ ಸ್ನೇಹ ಸಂಬಂಧ, ಕಡಲ್ಗಳ್ಳ ಪೋರ್ಚುಗೀಸರ ದಬ್ಟಾಳಿಕೆಯನ್ನು ಎದುರಿಸಿದ ಬಗೆ ಮೊದಲಾದ ರೋಚಕ ಸಂಗತಿಗಳನ್ನು ಪೀಠಿಕೆಯಲ್ಲಿ ಸುಂದರವಾಗಿ ತೆರೆದಿಟ್ಟರು.ಅಬ್ಬಕ್ಕನ ಪಾತ್ರವಹಿಸಿದ ಸಂಜಯಕುಮಾರ್‌ ಶೆಟ್ಟಿ ಗೋಣಿಬೀಡು ಪ್ರಸಂಗದುದ್ದಕ್ಕೂ ಸ್ವಾಭಿಮಾನ, ಸ್ವಾತಂತ್ರ್ಯದ ಕೆಚ್ಚು ಮತ್ತು ವೀರಾವೇಶಗಳ ಅಭಿವ್ಯಕ್ತಿಯಲ್ಲಿ ರಂಜಿಸಿದರು. ಮಂಗಳೂರು ಮತ್ತು ಉಳ್ಳಾಲಗಳಲ್ಲಿ ಅಬ್ಬಕ್ಕನ ವಿರುದ್ಧ ಪೋರ್ಚುಗೀಸರೊಂದಿಗೆ ಒಳಸಂಚು ಮಾಡಿಕೊಳ್ಳುವ ಅಳಿಯ ಕಾಮರಾಯನಾಗಿ ಡಾ|ಎಂ.ಪ್ರಭಾಕರ ಜೋಶಿ ಪಾತ್ರೋಚಿತ ಮಾತುಗಳಿಂದ ಮಿಂಚಿದರು.ಪೋರ್ಚುಗೀಸ್‌ ಸೇನಾನಿ ನೊರೋನ್ಹಾ ಮತ್ತವನ ಸಹಚರ ಕುಟಿನ್ಹೋ ಆಗಿ ಜಬ್ಟಾರ್‌ ಸಮೋ ಸಂಪಾಜೆ ಮತ್ತು ಸೀತಾರಾಮ ಕುಮಾರ್‌ ಕಟೀಲು ಸಂವಾದ ಚಾತುರ್ಯದಿಂದ ಕುತೂಹಲ ಮೂಡಿಸಿದರು. ಬಂಗರಸನ ದಾಯಾದಿ ಬೈಲಂಗಡಿಯ ವೀರನರಸಿಂಹನಾಗಿ ಡಾ| ದಿನಕರ ಎಸ್‌.ಪಚ್ಚನಾಡಿ ಮತ್ತು ಪ್ರಧಾನಿ ನಾರಣಪ್ಪನಾಗಿ ಉಮೇಶ ಆಚಾರ್ಯ ಗೇರುಕಟ್ಟೆ ಪ್ರಸಂಗದ ಆಶಯಕ್ಕೆ ತಕ್ಕಂತೆ ಪಾತ್ರ ನಿರ್ವಹಿಸಿದರು.

ಸಾಂಸ್ಕೃತಿಕ ಗುಂಜಾರವ
ತಾಳಮದ್ದಳೆಯ ಬಳಿಕ ಭಾಸ್ಕರ ರೈ ಕುಕ್ಕುವಳ್ಳಿ ವಿರಚಿತ ಅಬ್ಬಕ್ಕೋತ್ಸವದ ಶೀರ್ಷಿಕೆ ಗೀತೆ “ಬನ್ನಿ ಅಬ್ಬಕ್ಕನ ನಾಡಿಗೆ ‘ ಎಂಬ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ ವಿ| ರೇಷ್ಮಾ ನಿರ್ಮಲ್‌ ಭಟ್‌ ತಮ್ಮ ನೃತ್ಯ ಲಹರಿ ನಾಟ್ಯಾಲಯ ಪಜೀರು ತಂಡದಿಂದ ಸುಂದರ ರೂಪಕವೊಂದನ್ನು ಪ್ರಸ್ತುತಪಡಿಸಿದರು. ಬಳಿಕ ವೈಷ್ಣವಿ ಕಲಾವಿದರು ಕೊಯಿಲ ಬಳಗದ ರಾಜೇಶ್‌ ಪಂಜಿಕಲ…, ಸಂದೀಪ್‌ ಆಚಾರ್ಯ ಮತ್ತು ಸುರೇಶ್‌ ಸುವರ್ಣ ಅವರು “ಕುಸೆಲ್ದ ಗೌಜಿ’ ತುಳು ಹಾಸ್ಯ ಪ್ರಹಸನದಿಂದ ರಂಜಿಸಿದರು.

Advertisement

ಕೊನೆಯಲ್ಲಿ ಗಾಯಕರಾದ ಗಣೇಶ್‌ ಕಾರಂತ್‌ ಬೆಂಗಳೂರು ಮತ್ತು ಮಾಲಿನಿ ಕೇಶವ ಪ್ರಸಾದ್‌ ಅವರಿಂದ “ದೇಶಭಕ್ತಿ – ಸುಗಮ ಸಂಗೀತ’ ಗಾನ ಗುಂಜಾರವ ಜರಗಿತು. ಹಿನ್ನೆಲೆ ವಾದ್ಯದಲ್ಲಿ ಸತೀಶ್‌ ಸುರತ್ಕಲ…, ನವಗಿರಿ ಗಣೇಶ್‌ , ಗುರುದಾಸ್‌ ಮತ್ತು ದೀಪಕ್‌ ರಾಜ್‌ ಉಳ್ಳಾಲ್‌ ಸಹಕರಿಸಿದರು.

ಲಕ್ಷ್ಮೀನಾರಾಯಣ ರೈ ಹರೇಕಳ

Advertisement

Udayavani is now on Telegram. Click here to join our channel and stay updated with the latest news.

Next