Advertisement
ಒಂದು ಮಗುವಿಗೆ ಹೆಸರಿಡುವುದು ಅಂದರೆ, ಅದು ಅಷ್ಟು ಸುಲಭದ ಕೆಲಸವಲ್ಲ. ಕನ್ನಡ ವರ್ಣಮಾಲೆಯಲ್ಲಿನ ಅ-ಳವರೆಗಿನ ಅಕ್ಷರಗಳಲ್ಲಿ, ಐದೋ ಆರೋ ಅಕ್ಷರಗಳನ್ನಾರಿಸಿ, ಜೀವನಪರ್ಯಂತ ಐಡೆಂಟಿಟಿ ನೀಡುವ ಅರ್ಥಪೂರ್ಣವಾದ ಹೆಸರು ಹುಡುಕಲು ಹೆತ್ತವರು ಮಾಡುವ ಸರ್ಕಸ್ ಅಷ್ಟಿಷ್ಟಲ್ಲ. ಮಗುವಿಗೆ ಹೆಸರಿಡುವುದರ ಹಿಂದೆ ಎಷ್ಟೆಲ್ಲಾ ಲೆಕ್ಕಾಚಾರಗಳು ನಡೆಯುತ್ತವೆ ಎಂದು ನನಗೆ ಅರ್ಥವಾಗಿದ್ದು ಮಗ ಹುಟ್ಟಿದ ಮೇಲೇ.
Related Articles
Advertisement
ಈ ಮಧ್ಯೆ, ಬಾಣಂತನಕ್ಕೆ ನೆರವಾಗಲೆಂದು ಚೆನ್ನೈನಿಂದ ಬಂದ ಅಜ್ಜಿ ತನ್ನ ಬತ್ತಳಿಕೆಯಿಂದ, ರಮೇಶ್, ಸುರೇಶ್, ಸಂದೇಶ್, ಸಂತೋಷ್, ವೆಂಕಟೇಶ್ ಮುಂತಾದ ಹಳೇಕಾಲದ ಹೆಸರುಗಳನ್ನು ಹೊರಗಿಟ್ಟಳು. ಇದುವರೆಗೆ ಯಾರೂ ಇಡದ ಹೆಸರಿಡಬೇಕು, ಎಲ್ಲರೂ ಹೆಸರು ಕೇಳಿ ಅಹುದಹುದು ಎನ್ನಬೇಕು ಅಂತ ಕನಸು ಕಾಣುತ್ತಿದ್ದ ನಾನು, ಆ ಔಟ್‌ಡೇಟೆಡ್ ಹೆಸರುಗಳನ್ನು ಒಪ್ಪಿಕೊಳ್ಳುತ್ತೇನೆಯೇ? ಕೊನೆಗೂ ಅಜ್ಜಿ ಈ ಹೆಸರು ಹುಡುಕುವ ಆಟದಿಂದ ಹೊರಗುಳಿದಳು.
ಇನ್ನೊಂದೆರಡು ದಿನಗಳಲ್ಲಿ ಮಗುವಿನ ಹೆಸರು ನಿಶ್ಚಯವಾಗಲೇಬೇಕು ಅಂತ ನಿರ್ಧರಿಸಿ, ಮೇನಕಾ ಗಾಂಧಿ ಬರೆದ “ಗಂಡು ಮಕ್ಕಳಿಗೆ ಹಿಂದೂ ಹೆಸರುಗಳು’ ಪುಸ್ತಕವನ್ನು ಖರೀದಿಸಿದೆ. ನಾನು ತಲೆಕೆಡಿಸಿಕೊಂಡಿರುವುದನ್ನು ನೋಡಲಾಗದೆ ಅಪ್ಪ, ಯಂಡಮೂರಿ ವೀರೇಂದ್ರನಾಥ್ ಬರೆದ “ಮಕ್ಕಳ ಹೆಸರಿನ ಪ್ರಪಂಚ’ ಪುಸ್ತಕವನ್ನು ತಂದುಕೊಟ್ಟರು. ಬಹಳಷ್ಟು ಒಳ್ಳೆಯ ಹೆಸರುಗಳು ಸಿಕ್ಕಿದವಾದರೂ, ಪರಿಚಿತರಲ್ಲೇ ಕೆಲವರು ಆ ಹೆಸರಿನವರಿದ್ದರು. ಹಾಗಾಗಿ ಆ ಹೆಸರುಗಳನ್ನು ಕೈ ಬಿಡಬೇಕಾಯ್ತು.
ಮಗು ಹುಟ್ಟಿದ ಕೂಡಲೇ, ನನ್ನ ಮತ್ತು ಗಂಡನ ಸ್ನೇಹಿತರು, ಬಂಧುಗಳನ್ನೆಲ್ಲ ಹೆಸರು ಹುಡುಕುವ ಕೆಲಸಕ್ಕೆ ಸೇರಿಸಿಕೊಂಡಿದ್ದೆವು. ವಾಟ್ಸ್‌ಆ್ಯಪ್ ತೆಗೆದು ನೋಡಿದರೆ, ಒಂದೊಂದು ಗ್ರೂಪ್‌ನಲ್ಲೂ ನೂರಾರು ಹೆಸರುಗಳ ಸುರಿಮಳೆ! ದೇವರು, ಪುರಾಣಪುರುಷರು, ರಾಜಮಹಾರಾಜರು ಹೀಗೆ ಹಳೆಯ ಹೆಸರುಗಳಿಂದ ಹಿಡಿದು, ಒಂದೇ ಅಕ್ಷರದ ಹೆಸರಿನವರೆಗೆ ಎಲ್ಲವೂ ಇದ್ದವು. ಪುರಾಣದಲ್ಲಿ ಕಡುಕಷ್ಟ ಅನುಭವಿಸಿದ ಕೆಲವರ ಹೆಸರು ಚೆನ್ನಾಗಿದೆ ಎನಿಸಿದರೂ, ಅದನ್ನು ಮಗನಿಗೆ ಇಡುವುದು ಶೋಭೆಯಲ್ಲ ಅಂತ ಅನ್ನಿಸಿತು. ಕರ್ಣ ಅನ್ನುವ ಹೆಸರು ಎಷ್ಟೇ ಚೆನ್ನಾಗಿದ್ದರೂ, ಅವನ ದುರಂತ ಜೀವನದ ಕತೆ ಗೊತ್ತಿದ್ದವರ್ಯಾರೂ ಆ ಹೆಸರನ್ನು ಇಡುವುದಿಲ್ಲ. ಚಕ್ರವ್ಯೂಹದೊಳಗೆ ಸಿಕ್ಕಿಕೊಂಡ ಅಭಿಮನ್ಯು, ಹುಟ್ಟುವ ಮೊದಲೇ ಪರೀಕ್ಷೆ ಎದುರಿಸಿದ ಪರೀಕ್ಷಿತನ ಹೆಸರುಗಳು ನಿರ್ದಾಕ್ಷಿಣ್ಯವಾಗಿ ರಿಜೆಕ್ಟ್ ಆದವು. ಕ್ಷ, ಶಿ, ಋ, ಕ್ರೂ, ಹ್ರಂ, ಹ್ರಿಂ ಮುಂತಾದ ಬೀಜಾಕ್ಷರಗಳ ಹೆಸರುಗಳನ್ನು ಕರೆಯಲು ಕಷ್ಟ ಅಂತ ಪಕ್ಕಕ್ಕೆ ಸರಿಸಿದೆವು. ಕೆಲವೊಂದಷ್ಟು ಹೆಸರುಗಳೇನೋ ಚೆನ್ನಾಗಿದ್ದವು. ಆದರೆ, ನಿಘಂಟಿನಲ್ಲಿ ಅದಕ್ಕೆ ಅರ್ಥವೇ ಇರಲಿಲ್ಲ. ಮುಂದೆ, ನಿನ್ನ ಹೆಸರಿನ ಅರ್ಥವೇನು ಅಂತ ಯಾರಾದರೂ ಮಗನನ್ನು ಕೇಳಿದಾಗ, ಅವನು ನಮ್ಮನ್ನು ಬೈದುಕೊಳ್ಳದಿರಲಿ ಎಂದು ಆ ಹೆಸರುಗಳನ್ನು ನಿರ್ಲಕ್ಷಿಸಬೇಕಾಯ್ತು. ಮತ್ತೆ ಕೆಲವು ಹೆಸರುಗಳು, ಮೊಟಕುಗೊಳಿಸಿ ಕರೆದಾಗ ಅನರ್ಥ ಬರುವಂತಿದ್ದವು. ಕೆಲವು ಹೆಸರನ್ನು ಹುಡುಗಿಯರಿಗೂ ಇಡಬಹುದಾಗಿತ್ತು.
ಹೀಗೆ, ಒಂದು ಹೆಸರನ್ನು 360 ಡಿಗ್ರಿ ದೃಷ್ಟಿಕೋನದಿಂದ ನೋಡಿ, ಕೆಲವೊಂದನ್ನು ಆಯ್ಕೆ ಮಾಡಿದೆವು. ಸರಿ, ಇದರಲ್ಲೇ ಒಂದನ್ನು ಇಡೋಣ ಅಂದುಕೊಂಡರೆ, ಇವತ್ತು ಮನಸ್ಸಿಗೆ ಮುದ ನೀಡಿದ ಹೆಸರು, ಮರುದಿನ ಬೆಳಗ್ಗೆ ಆಗುವಷ್ಟರಲ್ಲಿ ಹಳೆಯದೆನಿಸುತ್ತಿತ್ತು ಅಥವಾ ಕುಟುಂಬದಲ್ಲಿ ಯಾರೋ ಒಬ್ಬರು, “ಏ, ಆ ಹೆಸರು ಚೆನ್ನಾಗಿಲ್ಲ’ ಅಂದುಬಿಡುತ್ತಿದ್ದರು. ಯಾರೋ ಒಬ್ಬರು ತಿರಸ್ಕರಿಸಿದರೂ ಸಾಕು, ಆ ಹೆಸರನ್ನು ಇಡಬೇಕೆಂದು ಅನ್ನಿಸುತ್ತಿರಲಿಲ್ಲ.
ಕೊನೆಗೆ ಅಳೆದು ತೂಗಿ 24 ಹೆಸರುಗಳ ಪಟ್ಟಿ ಮಾಡಿದೆವು. ಆ ಪಟ್ಟಿಯನ್ನು ಮನೆ-ಮಂದಿಯ ಮುಂದೆ ಇಟ್ಟು, ಒಂದನ್ನು ಆರಿಸುವಂತೆ ಹೇಳಿದೆವು. “ಈ ಮಗುವಿಗೆ ಹೆಸರಿಟ್ಟಿದ್ದು ನಾನೇ’ ಅಂತ ಕರೆಸಿಕೊಳ್ಳುವ ತವಕ ಎಲ್ಲರಿಗೂ ಇದ್ದುದರಿಂದ, ಅವರೆಲ್ಲರೂ ತಮಗಿಷ್ಟವಾದ ಹೆಸರೇ ಚೆನ್ನಾಗಿದೆಯೆಂದು ಪ್ರತಿಪಾದಿಸಿದರು. ಆಗ ನಮ್ಮ ಕೈ ಹಿಡಿದಿದ್ದು, ಸಂಗೀತದ ಮೇಲಿರುವ ಆಸಕ್ತಿ. ಕುಟುಂಬದಲ್ಲಿ ಎಲ್ಲರೂ ಸಂಗೀತಪ್ರಿಯರೇ ಆಗಿರುವುದರಿಂದ, “ನಿನಾದ್’ ಎಂಬ ಹೆಸರನ್ನು ಎಲ್ಲರೂ ಇಷ್ಟಪಟ್ಟರು. ಅದರ ಜೊತೆಗೆ, ವಿಷ್ಣು ಸಹಸ್ರನಾಮದಿಂದ ಆರಿಸಿದ “ಶರ್ವ’ ಎಂಬುದನ್ನು ಸೇರಿಸಿ, ಮಗುವಿನ ಕಿವಿಯಲ್ಲಿ “ನಿನಾದ್ ಶರ್ವ’ ಎಂದು ಮೂರು ಬಾರಿ ಉಸುರಿ, ಅಬ್ಟಾ ಅಂತೂ ಹೆಸರು ಹುಡುಕಿದೆವು ಅಂತ ನಿಟ್ಟುಸಿರುಬಿಟ್ಟೆವು.
ಹೆಸರಿನಲ್ಲೇನಿದೆ ಅಂತ ಷೇಕ್ಸ್‌ಪಿಯರ್ ಹೇಳಿದ್ದಾರೆ. ಸಾರ ಇರುವುದು ಹೆಸರಿನಲ್ಲಲ್ಲ, ವ್ಯಕ್ತಿತ್ವದಲ್ಲಿ ಅಂತ ನಮಗೂ ಗೊತ್ತು. ಆದರೂ, ಮಗುವೊಂದಕ್ಕೆ ಹೆಸರಿಡುವುದು ಯಾವ ಸಂಶೋಧನೆ, ಅನ್ವೇಷಣೆಗಿಂತಲೂ ಕಡಿಮೆಯಾದುದಲ್ಲ ಎಂಬುದು ನನ್ನ ಅಭಿಪ್ರಾಯ. ನೀವೇನಂತೀರಾ?
-ವಿನೀತ ಸುಮಂತ್