Advertisement

ನೆರೆಪೀಡಿತ ಗ್ರಾಮಕ್ಕೆ ನೆರವಾದ ಸಂಸ್ಥೆಯ ಹೆಸರು!

12:10 AM Aug 15, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಪ್ರವಾಹಪೀಡಿತ ಗ್ರಾಮಗಳ ಪುನರುಜ್ಜೀವನಕ್ಕೆ 10 ಕೋಟಿ ರೂ.ಗಿಂತ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಪುನಶ್ಚೇತನಗೊಳ್ಳುವ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನೆರೆ ಸಂತ್ರಸ್ತರಿಗೆ ನೆರವಾಗಲು ಉದ್ಯಮಿಗಳು ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಗಳ ಪ್ರಮುಖರೊಂದಿಗೆ ಸಭೆ ನಡೆಸಿದ ಯಡಿಯೂರಪ್ಪ, ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳನ್ನು ನೆರೆಪೀಡಿತ ಎಂದು ಘೋಷಿಸಲಾಗಿದೆ. ಹಲವೆಡೆ ಭೂಕುಸಿತ ಉಂಟಾಗಿದೆ. ಹಳ್ಳಿ, ಪಟ್ಟಣಗಳು ಜಲಾವೃತವಾಗಿವೆ. ಸೇತುವೆ ಮುಳುಗಿ, ರಸ್ತೆಗಳು ಹಾಳಾಗಿವೆ. ರಕ್ಷಣಾ ಕಾರ್ಯ ನಡೆಯುತ್ತಿವೆ. 1,160 ಪರಿಹಾರ ಕೇಂದ್ರ ತೆರೆಯಲಾಗಿದ್ದು, 6.97 ಲಕ್ಷ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.

ಸುಮಾರು 56,000 ಮನೆಗಳು ವಾಸಕ್ಕೆ ಯೋಗ್ಯವಿಲ್ಲ ಎಂದು ಘೋಷಿಸಲಾಗಿದೆ. ನಾನು ಹಾಗೂ ಅಧಿಕಾರಿಗಳು ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಎರಡು ದಿನದಿಂದ ಮಳೆ ನಿಯಂತ್ರಣಕ್ಕೆ ಬಂದಿದೆ. ಪ್ರವಾಹ ಹಾನಿಯ ಸಂಪೂರ್ಣ ಚಿತ್ರಣ, ನಷ್ಟದ ಪ್ರಮಾಣವನ್ನು ನಿಖರವಾಗಿ ತಿಳಿಯಲು ಇನ್ನೂ ಕೆಲವು ದಿನ ಬೇಕಾಗಲಿದೆ. 22 ಜಿಲ್ಲೆಗಳಲ್ಲಿ 200 ಗ್ರಾಮಗಳನ್ನು ಸ್ಥಳಾಂತರಿಸಬೇಕಾದ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಕೈಗಾರಿಕೋದ್ಯಮಿಗಳು ಉದಾರವಾಗಿ ನೆರವು ನೀಡಬೇಕು. 10 ಕೋಟಿ ರೂ.ಗಿಂತ ಹೆಚ್ಚು ನೆರವು ನೀಡುವ ಸಂಸ್ಥೆಯ ಹೆಸರನ್ನು ಅಭಿವೃದ್ಧಿಪಡಿಸುವ ಗ್ರಾಮಕ್ಕೆ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಆ ಗ್ರಾಮವನ್ನು ದೇಣಿಗೆ ನೀಡುವ ಸಂಸ್ಥೆ ದತ್ತು ಪಡೆದುಕೊಂಡಂತೆ ಬಿಂಬಿಸಲಾಗುವುದು ಎಂದು ತಿಳಿಸಿದರು.

ಬಟ್ಟೆ, ಆಹಾರಧಾನ್ಯ ಇತರೆ ಮೂಲ ಸೌಕರ್ಯ ಒದಗಿಸುವ ಬದಲಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಿದರೆ ಸಂತ್ರಸ್ತರಿಗೆ ಹೆಚ್ಚು ನೆರವಾಗಲಿದೆ. ನಿಮ್ಮ ಸಂಸ್ಥೆಗಳು ಉದ್ದಿಮೆ ನಡೆಸಲು ಅಗತ್ಯವಿರುವ ಮೂಲ ಸೌಕರ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಉಂಟು ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದೊಮ್ಮೆ ಅನಗತ್ಯ ಸಮಸ್ಯೆಗಳಾಗುತ್ತಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಯಡಿಯೂರಪ್ಪ ಮನವಿ ಮಾಡಿದರು. ಇದಕ್ಕೆ ಸಭೆಯಲ್ಲಿದ್ದ 60ಕ್ಕೂ ಹೆಚ್ಚು ಕಂಪನಿಗಳ ಪ್ರಮುಖರು ನೆರವು ನೀಡುವ ಭರವಸೆ ನೀಡಿದರು. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಇತರರಿದ್ದರು.

ವಿವಿಧ ಕಂಪನಿಗಳಿಂದ ನೆರವು: ಬ್ರಿಟಾನಿಯಾ ಕಂಪನಿಯು ಆಹಾರ ಪದಾರ್ಥ ನೆರವು ನೀಡಿದೆ. ಟಿವಿಎಸ್‌ ಮೋಟಾರ್‌ ಕಂಪನಿ ಒಂದು ಕೋಟಿ ರೂ. ದೇಣಿಗೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಿದೆ. ಜಿಎಸ್‌ಕೆ ಸಂಸ್ಥೆ ಹಾಗೂ ಯೂನಿವರ್ಸಲ್‌ ಬಿಲ್ಡರ್ ಸಂಸ್ಥೆ ಎಲ್ಲ ಜಿಲ್ಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪುನಶ್ಚೇತನಕ್ಕೆ ಆದ್ಯತೆ ನೀಡಲಿದೆ. ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆಯಿಂದ ಮಹಿಳೆಯರಿಗೆ ಸೀರೆ, ಉಡುಪು ನೆರವು. ಕಾರ್ಪೊರೇಷನ್‌ ಬ್ಯಾಂಕ್‌ ಒಂದು ವಾರದಲ್ಲಿ ದೇಣಿಗೆ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದೆ. ಟಯೋಟ ಸಂಸ್ಥೆ ಎರಡು ಕೋಟಿ ರೂ., ಲೋಗೋಸ್‌ ಗ್ರೂಪ್‌ 25 ಲಕ್ಷ ರೂ., ಕ್ರೆಡಾಯ್‌ 3 ಕೋಟಿ ರೂ. ನೀಡಲಿದೆ. ಯುನೈಟೆಡ್‌ ಟೆಕ್ನಾಲಜಿ ಸಂಸ್ಥೆ ಅಗತ್ಯ ಮೂಲ ಸೌಕರ್ಯ, ಜೆ.ಕೆ.ಸಿಮೆಂಟ್‌, ಆಹಾರ ಪದಾರ್ಥ ವಿತರಿಸುವ ಭರವಸೆ ನೀಡಿದೆ. ವೋಲ್ವೋ ಗ್ರೂಪ್‌ ತನ್ನ ನೌಕರರ ಒಂದು ದಿನದ ವೇತನ ಸೇರಿದಂತೆ ಇತರೆ ಕಂಪನಿಗಳು ನೆರವು ನೀಡುವ ಭರವಸೆ ನೀಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next