Advertisement

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಕಾರ್ಯ ಆರಂಭ: ವೈಶಾಲಿ

04:57 PM Aug 04, 2018 | Team Udayavani |

ಚಿಕ್ಕಮಗಳೂರು: ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಮತಗಟ್ಟೆ ಅಧಿಕಾರಿಗಳು ಆ.10ರವರೆಗೆ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಎಲ್‌. ವೈಶಾಲಿ ತಿಳಿಸಿದರು. ಅಪರ ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿಯಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಮತದಾರರ ಪಟ್ಟಿಯಲ್ಲಿ 18 ವರ್ಷ ತುಂಬಿದ ಹಾಗೂ ಬಿಟ್ಟು ಹೋಗಿರುವವರ ಹೆಸರನ್ನು ಸೇರ್ಪಡೆ ಮಾಡಬೇಕಲ್ಲದೆ
ಮರಣ ಹೊಂದಿರುವವರ, ಬೇರೆಡೆಗೆ ವರ್ಗಾವಣೆಯಾಗಿರುವವರ ಹೆಸರುಗಳನ್ನು ಪರಿಶೀಲಿಸಿ ಕೈಬಿಡಬೇಕು. ನಗರ ಪ್ರದೇಶಗಳಲ್ಲಿ ಒಂದು ವಾರ್ಡ್‌ನಲ್ಲಿ ಅಪ್ಪ ಅಮ್ಮನ ಹೆಸರು ಇದ್ದರೆ, ಮತ್ತೂಂದು ವಾರ್ಡ್‌ನಲ್ಲಿ ಮಕ್ಕಳ ಹೆಸರಿದ್ದರೆ ಇದನ್ನು ಸರಿಪಡಿಸಬೇಕು ಎಂದು ಹೇಳಿದರು.

ಮತದಾನ ಕೇಂದ್ರಗಳ ಭೌತಿಕ ಪರಿಶೀಲನೆ ಹಾಗೂ ಮತಗಟ್ಟೆಗಳ ಪುನರ್‌ ವಿಂಗಡಣೆ ಕಾರ್ಯ ಆ.20 ರಿಂದ ಸೆ.15 ರವರೆಗೆ ನಡೆಯಲಿದೆ. ಪೂರಕ ಪಟ್ಟಿಗಳ ತಯಾರಿಕೆ, ಪೂರಕ ಪಟ್ಟಿಯ ಮತದಾರರ ಪಟ್ಟಿಗೆ ಜೋಡಣೆ ಮಾಡುವ ಹಾಗೂ ಕರಡು ಮತದಾರರ ಪಟ್ಟಿಯ ತಯಾರಿಕೆ ಕಾರ್ಯವು ಸೆ.15 ರವರೆಗೆ ನಡೆಯಲಿದ್ದು ಏಕೀಕರಣಗೊಂಡ ಮತದಾರರ ಕರಡು ಪಟ್ಟಿಯನ್ನು ಅ.10 ರಂದು ಎಲ್ಲಾ ತಾಲೂಕು ಕಚೇರಿಗಳಲ್ಲಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿ ಮತ್ತು ಆಯಾ ಮತದಾನದ ಕೇಂದ್ರಗಳಲ್ಲಿ ಪ್ರಕಟಿಸಲಾಗುವುದು ಎಂದರು. 

ಕರಡು ಪಟ್ಟಿಯ ಕುರಿತು ಅ.10 ರಿಂದ ನ.20ರವರೆ ಆಕ್ಷೇಪಣೆ ಹಾಗೂ ಹಕ್ಕನ್ನು ಸಲ್ಲಿಸಬಹುದಾಗಿದೆ. ಸ್ವೀಕೃತಗೊಂಡ ಹಕ್ಕು ಮತ್ತು ಆಕ್ಷೇಪಣೆಗಳನ್ನು ಡಿ.20 ರವರೆಗೆ ತೀರುವಳಿಗೊಳಿಸಲಾಗುವುದು ಎಂದು ಹೇಳಿದರು.

ಡಾಟಾ ಬೇಸ್‌ ಜೋಡಣೆ ಮಾಡಿ ಪೂರಕ ಪಟ್ಟಿಗಳ ತಯಾರಿಕೆ ಹಾಗೂ ಮುದ್ರಣ ಕಾರ್ಯವು 2019 ರ ಜನವರಿ 3 ರೊಳಗೆ ಮುಗಿಯಲಿದೆ. ಭಾವಚಿತ್ರವಿರುವ ಅಂತಿಮ ಮತದಾರರ ಪಟ್ಟಿಯನ್ನು 2019 ಜನವರಿ 4 ರಂದು ಪ್ರಕಟಿಸಲಾಗುವುದೆಂದು ತಿಳಿಸಿದರು. 

Advertisement

ಸಾರ್ವಜನಿಕರು ಈ ಸದಾವಕಾಶವನ್ನು ಸದುಪಯೋಗಪಡಿಸಿಕೊಂಡು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡುವಂತೆ ಮನವಿ ಮಾಡಿದರು. ಸಭೆಯಲ್ಲಿ ಬಹುಜನ ಸಮಾಜ ಪಕ್ಷದ ಕೆ.ಟಿ.ರಾಧಾಕೃಷ್ಣ, ಸಿಪಿಐನ ಆರಾಧ್ಯ, ಕಾಂಗ್ರೆಸ್‌ ನ ಎಂ.ಎಸ್‌.ಸುರೇಶ್‌ ಕುಮಾರ್‌, ಬಿಜೆಪಿಯ ವರಸಿದ್ಧಿ ವೇಣುಗೋಪಾಲ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next