ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ತಮ್ಮ ‘ಬಾಬುನ್’ ಎಂದು ಕರೆಯಲ್ಪಡುವ ಸ್ವಪನ್ ಬ್ಯಾನರ್ಜಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಸೋಮವಾರ ಮತದಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಚುನಾವಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೌರಾ ಪಟ್ಟಣದ ಮತದಾರರಾಗಿರುವ ಬಾಬುನ್ ಅವರು ಮತಗಟ್ಟೆಗೆ ಮತ ಚಲಾಯಿಸಲು ಹೋದಾಗ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿರುವುದು ಕಂಡು ಬಂದಿತು.
“ಭಾರತೀಯ ಚುನಾವಣ ಆಯೋಗವು ಸಂಪೂರ್ಣ ವಿಷಯವನ್ನು ಪರಿಶೀಲಿಸುತ್ತಿದೆ. ಇದು ಏಕೆ ಸಂಭವಿಸಿತು ಎಂಬುದನ್ನು ಅದು ಮಾತ್ರ ವಿವರಿಸುತ್ತದೆ ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಶಾಂತನು ಸೇನ್ ಹೇಳಿದ್ದಾರೆ.
ಬಾಬುನ್ ಅವರನ್ನು ಪಿಟಿಐ ಸಂಪರ್ಕಿಸಿದಾಗ, ”ನಾನು ಇಂದು ಮತ ಚಲಾಯಿಸಲು ಹೋಗಿದ್ದೆ ಮತ್ತು ನನ್ನ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಕಂಡುಬಂದಿದೆ. ಇದರಿಂದ ನಾನು ನಿರಾಶೆಗೊಂಡಿದ್ದೇನೆ.ಇಷ್ಟು ವರ್ಷಗಳಿಂದ ಮತ ಹಾಕುತ್ತಿದ್ದೇನೆ. ಈ ವರ್ಷ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಪ್ರಜಾಪ್ರಭುತ್ವ ದೇಶದ ಪ್ರಜೆಯಾಗಿ ನನಗೆ ಮತದಾನದ ಹಕ್ಕಿದೆ,” ಎಂದರು.
ಮಾರ್ಚ್‌ನಲ್ಲಿ ಹೌರಾ ಲೋಕಸಭಾ ಸ್ಥಾನಕ್ಕೆ ಟಿಎಂಸಿ ಹಾಲಿ ಸಂಸದ ಪ್ರಸೂನ್ ಬ್ಯಾನರ್ಜಿ ಅವರನ್ನು ಮರುನಾಮಕರಣ ಮಾಡಿದ ನಂತರ ಆಕಾಂಕ್ಷಿಯಾಗಿದ್ದ ಬಾಬುನ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಆಗ ಮಮತಾ ಬ್ಯಾನರ್ಜಿ, ”ಸಹೋದರನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದೆ” ಎಂದು ಹೇಳಿದ್ದರು.
ಬಾಬುನ್ ಪಕ್ಷೇತರ ಅಭ್ಯರ್ಥಿಯಾಗಲಿದ್ದಾರೆ, ಬಿಜೆಪಿ ಸೇರುವ ಯೋಚನೆಯಲ್ಲಿದ್ದಾರೆ ಎಂಬ ವದಂತಿ ಹಬ್ಬಿತ್ತು.ಬಾಬುನ್ ಬೆಂಗಳೂರು ಅಸೋಸಿಯೇಷನ್ ಮತ್ತು ಬೆಂಗಾಲ್ ಹಾಕಿ ಅಸೋಸಿಯೇಷನ್ ಅಧ್ಯಕ್ಷರಾಗಿದ್ದು, ಜತೆಗೆ ಬೆಂಗಾಲ್ ಬಾಕ್ಸಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಮತ್ತು ತೃಣಮೂಲ ಕಾಂಗ್ರೆಸ್‌ನ ಕ್ರೀಡಾ ವಿಭಾಗದ ಉಸ್ತುವಾರಿಯಾಗಿದ್ದಾರೆ.