ವಾಷಿಂಗ್ಟನ್: ಕುಖ್ಯಾತ ಐಸಿಸ್ ಉಗ್ರ ಸಂಘಟನೆಯ ಸಂಸ್ಥಾಪಕ ಅಲ್ ಬಾಗ್ದಾದಿ ಹತ್ಯಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಆತನನ್ನು ಬೆನ್ನಟ್ಟಿ ಸುರಂಗವೊಂದರಲ್ಲಿ ಧೈರ್ಯದಿಂದ ಅಡ್ಡಗಟ್ಟಿದ್ದ ಪ್ರತಿಷ್ಠಿತ ಡೆಲ್ಟಾ ತುಕುಡಿಯ ಶ್ವಾನದ ಚಿತ್ರವನ್ನು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ದಾಳಿ ಪ್ರಕರಣದಲ್ಲಿ ಅತ್ಯಮೂಲ್ಯ ಪಾತ್ರವಹಿಸಿದ್ದ ಶ್ವಾನದ ಚಿತ್ರ ಪತ್ತೆಹಚ್ಚಿದ್ದೇವೆ. ಆದರೇ ಅದರ ಹೆಸರನ್ನು ಭದ್ರತೆಯ ದೃಷ್ಟಿಯಿಂದ ಹೇಳಲಾಗದು. ಅದ್ಭುತ ಶ್ವಾನವಿದು ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಲಕ್ಷಾಂತರ ಮಂದಿ ರೀ ಟ್ವೀಟ್ ಮಾಡಿದ್ದು ಭಾರೀ ಜನಮೆಚ್ಚುಗೆ ಗಳಿಸಿದೆ.
ಕಾಯ್ಲಾ ಮುಲ್ಲರ್ ಹೆಸರಿನ ಕಾರ್ಯಾಚರಣೆ ವೇಳೆ ಉಗ್ರ ಬಾಗ್ದಾದಿ ತನ್ನ ಮೂವರು ಮಕ್ಕಳೊಂದಿಗೆ ಸುರಂಗ ಮಾರ್ಗದ ಒಳಗೆ ಅವಿತುಕೊಂಡಿದ್ದ. ಸುರಂಗದ ಮತ್ತೊಂದು ಮಾರ್ಗವೂ ಮುಚ್ಚಿದ್ದರಿಂದ, ಅತ್ತ ಶ್ವಾನವೂ ಕೂಡ ಬೆನ್ನಟ್ಟುತ್ತಿದ್ದರಿಂದ ಬೇರೆ ದಾರಿ ದಾರಿ ಕಾಣದೆ ಸೊಂಟದಲ್ಲಿದ್ದ ಬಾಂಬನ್ನು ಸ್ಪೋಟಿಸಿಕೊಂಡು ಮೂವರು ಮಕ್ಕಳೊಂದಿಗೆ ಸಾವನ್ನಪ್ಪಿದ್ದನು.
ಈ ಕಾರ್ಯಾಚರಣೆ ವೇಳೆ ಶ್ವಾನಕ್ಕೆ ಗಾಯಗಳಾಗಿದ್ದವು. ಇದರ ಚಿತ್ರ ಮತ್ತು ವಿವರವನ್ನು ಸೇನಾ ಕಚೇರಿ ಗೌಪ್ಯವಾಗಿ ಇರಿಸಿತ್ತು. ಜನರು ಕೂಡ ನಾಯಿಯ ಕುರಿತು ತಿಳಿದುಕೊಳ್ಳಲು ಹೆಚ್ಚು ಆಸಕ್ತರಾಗಿದ್ದರಿಂದ ಅಮೇರಿಕಾದ ಅಧ್ಯಕ್ಷ ಟ್ರಂಪ್ ವಿವರವನ್ನು ಬಹಿರಂಗಪಡಿಸಿದ್ದಾರೆ. ಇದೊಂದು ಬೆಲ್ಜಿಯನ್ ಮಾಲಿನೊಯ್ಸ್ ತಳಿಯ ಶ್ವಾನವಾಗಿದೆ. ಇದರ ಹೆಸರನ್ನು ಬಹಿರಂಗಪಡಿಸಿದರೆ ಸೇನಾ ತುಕುಡಿಯ ಇತರ ಸದಸ್ಯರು ಗುರುತು ಕೂಡ ಪತ್ತೆಯಾಗಲಿರುವುದರಿಂದ ಅದನ್ನು ಗೌಪ್ಯವಾಗಿರಿಸಿದ್ದಾರೆ.