ದಾವಣಗೆರೆ: ಕುಂದುವಾಡ ಕೆರೆ ಬಳಿ ನಿರ್ಮಿಸಿರುವ ಗಾಜಿನ ಮನೆಗೆ ಶ್ರೀಜಯದೇವ ಜಗದ್ಗುರುಗಳ ಹೆಸರಿಡಲು ಕ್ರಮ ಕೈಗೊಳ್ಳುವಂತೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ.
ಸೋಮವಾರ, ಶಿವಯೋಗಾಶ್ರಮದ ಆವರಣದಲ್ಲಿ ದಾವಣಗೆರೆ ಜಿಲ್ಲಾ 3 ಮತ್ತು 4 ಚಕ್ರ ಗೂಡ್ಸ್ ವಾಹನ ಚಾಲಕರ ಮತ್ತು ಮಾಲೀಕರ ಸಂಘದ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 101 ಶಿಕ್ಷಕರಿಗೆ ಗುರುವಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಪ್ರಸ್ತುತ ಗಾಜಿನ ಮನೆಗೆ ಹೆಸರಿಡುವ ಸಲುವಾಗಿಯೇ ರಾಜಕಾರಣ ನಡೆಯುತ್ತಿದೆ. ಈಚೆಗೆ ಬೀದರ್, ಗುಲ್ಬರ್ಗಾ, ಯಾದಗಿರಿ ಉತ್ಸವ ಕಾರ್ಯಕ್ರಮಗಳಿಗೆ ನಾವು ಹೋದಾಗ ದಾವಣಗೆರೆಯ ಗಾಜಿನ ಮನೆಗೆ ಶ್ರೀ ಜಯದೇವ ಜಗದ್ಗುರುಗಳ ಹೆಸರಿಡಬೇಕು ಎಂದು ತುಂಬಾ ಭಕ್ತರು ಒತ್ತಾಯಿಸಿದ್ದಾರೆ. ಶ್ರೀಗಳ ಕೊಡುಗೆಯು ದಾವಣಗೆರೆಗೆ ಅಪಾರವಾಗಿದೆ. ಹಾಗಾಗಿ ಅವರ ಹೆಸರನ್ನಿಡುವುದು ಸಮಂಜಸವಾಗಿದೆ ಎಂದರು.
ಜಯದೇವ ಜಗದ್ಗುರುಗಳು 1906ರಲ್ಲಿಯೇ ಉಚಿತ ಹಾಸ್ಟೆಲ್ ಆರಂಭಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ಕಲ್ಪಿಸಿದ್ದಾರೆ. ಬಿ.ಡಿ. ಜತ್ತಿ, ಎಸ್. ನಿಜಲಿಂಗಪ್ಪ, ಕೊಂಡಜ್ಜಿ ಬಸಪ್ಪ, ಜಿ.ಎಸ್. ಶಿವರುದ್ರಪ್ಪ ಮೊದಲಾದವರು ಈ ಪ್ರಸಾದ ನಿಲಯದಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಅಕ್ಷರ, ಜ್ಞಾನ ದಾಸೋಹದ ಮೂಲಕ ಜಯದೇವ ಜಗದ್ಗುರುಗಳು ಸಮಾಜಮುಖೀ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ಸರ್ವ ಜನಾಂಗದ ಗುರು ಜಯದೇವ ಜಗದ್ಗುರುಗಳು. ಸ್ವಾತಂತ್ರ್ಯಾ ಪೂರ್ವದಲ್ಲೇ ಅವರ ಹೆಸರನ್ನು ವೃತ್ತಕ್ಕೆ ಇಡಲಾಗಿದೆ. ಅದೇ ರೀತಿ ಸ್ವಾತಂತ್ರ್ಯಾದ ನಂತರದಲ್ಲಿ ಜಗದ್ಗುರು ಅವರಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದ್ದು, ಗಾಜಿನ ಮನೆಗೆ ಶ್ರೀಗಳ ಹೆಸರಿಡಬೇಕು ಆಗ್ರಹಿಸಿದರು.
ಹಿಂದೆಲ್ಲಾ ಗುರುಗಳಿಗೆ ಸಾಕಷ್ಟು ಮಹತ್ವವಿತ್ತು. ಆದರೀಗ ಗುರುಗಳೆಂದರೆ ಗುರ್ ಎನ್ನುವಂತಹ ಭಾವನೆ ಕಾಲೇಜು ಹಂತದ ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತಿದೆ. ಇದಕ್ಕೆಲ್ಲಾ ಇಂದಿನ ಸಿನಿಮಾಗಳೇ ಕಾರಣ. ಹಾಗಾಗಿ ಬಾಲ್ಯದಲ್ಲೇ ಪೋಷಕರು, ಗುರುಗಳು ಮಕ್ಕಳಿಗೆ ಮಾನವೀಯ ಮೌಲ್ಯ
ಗುಣಗಳನ್ನು ಬಿತ್ತುವ ಕೆಲಸ ಮಾಡಬೇಕು. ಆಗ ಈ ರೀತಿಯ ವರ್ತನೆಗಳು ಸಮಾಜದಲ್ಲಿ ಹತೋಟಿಗೆ ಬರಲು, ಸತ್ಪ್ರಜೆಗಳಾಗಿ ಬಾಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಘದ ಜಿಲ್ಲಾ ಅಧ್ಯಕ್ಷ ಫಳನಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಶ್ರೀನಿವಾಸಯ್ಯ, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ, ಸಂಘದ ಮಹಾಪೋಷಕ ಮಹಾಂತೇಶ್ ವಿ. ಒಣರೊಟ್ಟಿ, ಬೆಳ್ಳೂಡಿ ಶಿವಕುಮಾರ್, ಆರ್.ಜೆ. ಶ್ರೀನಿವಾಸ್, ವೆಂಕಟಾಚಲಂ, ಮಲ್ಲಿಕಾರ್ಜುನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ್ ಸ್ವಾಗತಿಸಿದರು. ಜಿ.ಎನ್. ರಾಜೇಶ್ ನಿರೂಪಿಸಿದರು. ಎನ್. ಪ್ರೇಮಾ ವಂದಿಸಿದರು.