ಬೆಂಗಳೂರು: ಕೋಟಿ- ಚೆನ್ನಯ ಜೋಡುಕರೆ ಕಂಬಳ, ಲವ -ಕುಶ ಜೋಡುಕರೆ ಕಂಬಳ, ಸತ್ಯ – ಧರ್ಮ ಜೋಡುಕರೆ ಕಂಬಳ.. ಹೀಗೆ ಕಂಬಳ ನಡೆಯುವ ಓಟದ ಕರೆಗಳ ಹೆಸರನ್ನು ಈ ರೀತಿ ಜೋಡಿಯಾಗಿ ಇರಿಸಲಾಗುತ್ತದೆ. ಕರಾವಳಿಯಲ್ಲಿ ಸಾಮಾನ್ಯವಾಗಿ ಕಾರಣಿಕ ಪುರುಷರ ಹೆಸರುಗಳನ್ನು ಕರೆಗೆ ಇಡಲಾಗುತ್ತಿದೆ.
ಅಂದಹಾಗೆ ಐತಿಹಾಸಿಕ ಕಂಬಳಕ್ಕೆ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದೆ. ಬೆಂಗಳೂರು ಕಂಬಳದ ಕೋಣ ಓಡುವ ಕರೆ (ಕಣ)ಗಳಿಗೆ ಯಾವ ಹೆಸರನ್ನು ಇಡಲಾಗುತ್ತದೆ ಎಂಬ ಕುತೂಹಲ ಅಭಿಮಾನಿಗಳಿಗಿತ್ತು. ಇದೀಗ ಇದಕ್ಕೆ ಉತ್ತರ ದೊರೆತಿದೆ.
ಹೌದು ಬೆಂಗಳೂರು ಕಂಬಳಕ್ಕೆ ಹೆಸರು ಅಂತಿಮಗೊಳಿಸಲಾಗಿದೆ. ಅರಮನೆ ಮೈದಾನದಲ್ಲಿ ನಡೆಯುವ ಕಂಬಳ ಕೂಟಕ್ಕೆ ‘ರಾಜ – ಮಹಾರಾಜ ಕಂಬಳ’ ಎಂದು ಹೆಸರಿಡಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:Bengalur Kambala ನೋಡಲು ಪ್ರವೇಶ ಶುಲ್ಕವಿದೆಯೇ? ಟಿಕೆಟ್ ಕಾಯ್ದಿರಿಸಬೇಕೆ? ಇಲ್ಲಿದೆ ಮಾಹಿತಿ
ಅರಮನೆ ಮೈದಾನದಲ್ಲಿ ನಡೆಯುವ ಕಂಬಳ ಕೂಟವಾದ್ದರಿಂದ ‘ರಾಜ- ಮಹಾರಾಜ’ ಹೆಸರಿನ ಮೂಲಕ ರಾಜಮನೆತನಕ್ಕೆ ಗೌರವ ನೀಡಲಾಗುತ್ತಿದೆ. ಅಲ್ಲದೆ ಈ ಶತಮಾನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ನಡೆಯುತ್ತಿದ್ದ ಅರಸು ಕಂಬಳಕ್ಕೆ ಮೈಸೂರು ಮಹಾರಾಜರು ಭಾಗವಹಿಸುತ್ತಿದ್ದರು. ಈ ಕಾರಣಕ್ಕೆ ಗೌರವ, ಐತಿಹಾಸಿಕ ಶ್ರೀಮಂತಿಕೆಯ ಪ್ರತೀಕವಾಗಿ ರಾಜ- ಮಹಾರಾಜ ಕಂಬಳ ಎಂದು ಹೆಸರಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ – ಮಹಾರಾಜ ಕಂಬಳ ಕೂಟ ನಡೆಯಲಿದೆ. ವಿಶಾಲವಾದ 70 ಎಕರೆ ಸ್ಥಳವಿರುವ ಅರಮನೆ ಮೈದಾನದ ಗೇಟ್ 5ರಲ್ಲಿ ಕಂಬಳ ಕ್ರೀಡಾಕೂಟ ನಡೆಯಲಿದೆ