ಶಿರ್ವ: ತುಳುನಾಡಿನ ಧಾರ್ಮಿಕ ಆಚರಣೆಗಳ ಹಿನ್ನೆಲೆಯಿರುವ 28ನೇ ವರ್ಷದ ಐತಿಹಾಸಿಕ ಶಿರ್ವ ನಡಿಬೆಟ್ಟು ಸೂರ್ಯ – ಚಂದ್ರ ಸಂಪ್ರದಾಯಬದ್ಧ ಜೋಡುಕರೆ ಕಂಬಳವು ಡಿ. 3 ರಂದು ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನಡೆಯಲಿದೆ. ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪ್ರಫುಲ್ಲ ಶೆಟ್ಟಿಯವರು ಕಂಬಳವನ್ನು ಉದ್ಘಾಟಿಸಲಿದ್ದಾರೆ.
ಶಿರ್ವ ನಡಿಬೆಟ್ಟು ಮನೆತನದ ಯಜಮಾನ ದಾಮೋದರ ಚೌಟ ಅವರ ಮುಂದಾಳುತ್ವದಲ್ಲಿ ವ್ಯವಸ್ಥಾಪಕ ಶಿರ್ವ ನಡಿಬೆಟ್ಟು ಶಶಿಧರ ಹೆಗ್ಡೆಯವರು ಊರವರ ಸಹಕಾರದೊಂದಿಗೆ ಕಂಬಳ ನಡೆಸಿಕೊಂಡು ಬರುತ್ತಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಹಿನ್ನೆಲೆಯ ಐತಿಹಾಸಿಕ ಕಂಬಳ
ಶತಮಾನಗಳಿಂದ ನಡೆದು ಬರುತ್ತಿರುವ ಐತಿಹಾಸಿಕ ಶಿರ್ವ ನಡಿಬೆಟ್ಟು ಕಂಬಳವು ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಕಂಬಳಕ್ಕೂ ಮುಂಚೆ ಕುದಿ ಕಂಬಳ ನಡೆಯುತ್ತದೆ. ಕಂಬಳದ ಮುನ್ನಾದಿನ ರಾತ್ರಿ ಕಂಬಳ ಗದ್ದೆಯ ಬಳಿ ಕೊರಗ ಜನಾಂಗದವರು ಸಾಂಪ್ರದಾಯಿಕವಾಗಿ ಡೋಲು ಬಾರಿಸಿ ಪನಿಕುಲ್ಲುನು ಎಂಬ ಧಾರ್ಮಿಕ ಆಚರಣೆ ನಡೆಸುತ್ತಾರೆ. ಮನೆತನದಿಂದ ಅಡಿಕೆ ವೀಳ್ಯದೆಲೆಯೊಂದಿಗೆ ಕಾಣಿಕೆ ಪಡೆದು ಮರುದಿನ ಕಂಬಳ ಮುಗಿಯುವವರೆಗೆ ಡೋಲು ಸೇವೆ ನಡೆಸುತ್ತಾರೆ. ಕಂಬಳದ ದಿನ ಶಿರ್ವ ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹೂವಿನ ಪೂಜೆ ನಡೆದು, ಗೆಜ್ಜಾಲು ಮತ್ತು ಕಂಬಳದ ಮಂಜೊಟ್ಟಿಯ ನಾಗದೇವರಿಗೆ ತನು ತಂಬಿಲ ಸಮರ್ಪಣೆಯಾದ ಬಳಿಕ ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ಪುರಸ್ಕಾರ ನಡೆಯುತ್ತದೆ. ಬಳಿಕ ಬಂಟ ಕೋಲ ನಡೆದು ಮೆರವಣಿಗೆಯಲ್ಲಿ ಕೊಂಬು, ವಾದ್ಯಘೋಷಗಳೊಂದಿಗೆ ಮನೆಯ ಕೋಣಗಳನ್ನು ಗದ್ದೆಗಿಳಿಸಲಾಗುವುದು. ಶತಮಾನದ ಹಿಂದಿನ ರೂಢಿಯಂತೆ ಶಿರ್ವ ನಡಿಬೆಟ್ಟು ಮನೆತನದ ಕೋಣಗಳು ಕರೆಗೆ ಇಳಿದು ಅವುಗಳ ಓಟದೊಂದಿಗೆ ಕಂಬಳ ಪ್ರಾರಂಭಗೊಂಡು,ಶಿರ್ವ ನಂಗ್ಯೆಟ್ಟು ಮನೆಯ ಕೋಣಗಳ ಓಟದೊಂದಿಗೆ ಕಂಬಳ ಕೊನೆಗೊಳ್ಳುತ್ತದೆ. ಕಂಬಳ ಮುಗಿದ ಬಳಿಕ ಬಂಟ ದೈವವು ಕಂಬಳ ಕರೆಗೆ ಸುತ್ತು ಹಾಕಿ ಮನೆಗೆ ಹಿಂತಿರುಗಿ ಬಂದು ಅಗೇಲು ಸೇವೆಯೊಂದಿಗೆ ಕಂಬಳ ಪ್ರಕ್ರಿಯೆ ಸಮಾಪನಗೊಳ್ಳುತ್ತದೆ.
ಶಿರ್ವ ನಡಿಬೆಟ್ಟು ಕಂಬಳಕ್ಕೆ ವಿಶೇಷ ಧಾರ್ಮಿಕ ಹಿನ್ನೆಲೆಯಿದೆ. ಶಿರ್ವದ ದೈವ ದೇವರುಗಳ ಉತ್ಸವಗಳಲ್ಲಿ ಒಂದಕ್ಕೊಂದು ಸಂಬಂಧವಿದ್ದು ಸಂಪ್ರದಾಯ ಬದ್ಧವಾಗಿ ಕಂಬಳ ನಡೆಯುತ್ತದೆ. ಶಿರ್ವ ನ್ಯಾರ್ಮ ಜಾರಂದಾಯ ದೈವಸ್ಥಾನದಲ್ಲಿ ಜಾರ್ದೆ ತಿಂಗಳಲ್ಲಿ ಚೌತಿ ಹಾಗೂ ದೀಪಾವಳಿ ಹಬ್ಬದ ಸೇವೆ ಆದ ಬಳಿಕ ಕಂಬಳ ನಡೆಯುವುದು ರೂಢಿ. ನಡಿಬೆಟ್ಟು ಕಂಬಳ ನಡೆಯದೆ ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪೆರಾರ್ದೆ ತಿಂಗಳ ಸಂಕ್ರಮಣದಂದು ಉತ್ಸವದ ಧ್ವಜಾರೋಹಣ ನಡೆಯುವಂತಿಲ್ಲ. ಕಂಬಳದ ಬಳಿಕ ಧ್ವಜಾರೋಹಣ ನೆರವೇರಿ ಉತ್ಸವ ನಡೆದು ಧ್ವಜಾವರೋಹಣದ ಬಳಿಕ ಬರುವ ಮಂಗಳವಾರ ಶಿರ್ವ ಮಹಮ್ಮಾಯಿ ಮಾರಿಗುಡಿಯಲ್ಲಿ ಮಾರಿಪೂಜೆಗೆ ದಿನ ನಿಗದಿಯಾಗಿ 2ನೇ ಮಂಗಳವಾರ ಮಾರಿಪೂಜೆ ನೆರವೇರುವುದು.
ಎನ್ನ ಕಂಬುಲ ಬಾಳ್‌ಂಡ್
ಶತಮಾನಗಳ ಹಿಂದೆ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷರ ದಬ್ಟಾಳಿಕೆಗೆ ಸೊಪ್ಪು ಹಾಕದ ಮನೆಯ ಯಜಮಾನರು ಕಂದಾಯ ಪಾವತಿ ವಿಚಾರದಲ್ಲಿ ರಾಜಿಮಾಡಿಕೊಳ್ಳದೆ ಬಂಧಿಯಾಗಿದ್ದರಂತೆ. ಆ ಸಮಯದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಉತ್ಸವದ ಮೊದಲು ಕಂಬಳ ನಡೆಯ ಬೇಕಾಗಿದ್ದುದರಿಂದ ಕಂಬಳಕ್ಕೆ ದಿನ ನಿಗದಿಯಾಗಿತ್ತು.ಕಂಬಳದ ದಿನ ಯಜಮಾನರ ಉಪಸ್ಥಿತಿಗಾಗಿ ಬ್ರಿಟಿಷ್ ಅಧಿಕಾರಿಯಲ್ಲಿ ಕುಟುಂಬದ ಸದಸ್ಯರು ಬಿನ್ನವಿಸಿದಾಗ ಆತ ಬಿಡುಗಡೆ ಮಾಡಲಿಲ್ಲ. ಸತ್ಯ ಧರ್ಮದ ಆ ಕಾಲದಲ್ಲಿ ನಿಗದಿಯಾದ ದಿನದಂದೇ ಕಾರಣಿಕದ ಕಂಬಳ ನಡೆದು ಸೆರೆಮನೆಯಲ್ಲಿ ಬಂಧಿಯಾಗಿದ್ದ ಯಜಮಾನರು ಧರಿಸಿದ ಅಂಗಿಯಲ್ಲಿ ಕಂಬಳಗದ್ದೆಯ ಕೆಸರು ನೀರು ಸಿಂಚನಗೊಂಡಿತ್ತು. ಆಗ ಯಜಮಾನರು ಎನ್ನ ಕಂಬುಲ ಬಾಳ್‌ಂಡ್ ಎಂದು ಉದ್ಘಾರ ತೆಗೆದರಂತೆ. ಇದನ್ನು ಕಂಡ ಬ್ರಿಟಿಷ್ ಅಧಿಕಾರಿ ದಿಗ್ಭ್ರಮೆಗೊಂಡು ತನ್ನ ಅಧಿಕಾರಿಗಳನ್ನು ಶಿರ್ವ ನಡಿಬೆಟ್ಟಿಗೆ ಕಳುಹಿಸಿದಾಗ ಅಲ್ಲಿ ಕಂಬಳ ನಡೆಯುತ್ತಿತ್ತು. ಸಹಚರರಿಂದ ಮಾಹಿತಿ ಪಡೆದ ಬ್ರಿಟಿಷ್ ಅಧಿಕಾರಿಯು ಕಂಬಳದ ಕಾರಣಿಕ ಅರಿತು ಯಜಮಾನರನ್ನು ರಾಜ ಮರ್ಯಾದೆಯೊಂದಿಗೆ ಶಿರ್ವ ನಡಿಬೆಟ್ಟು ಮನೆಗೆ ಕಳುಹಿಸಿಕೊಟ್ಟಿದ್ದರು ಎಂಬುದು ಹಿರಿಯರಿಂದ ತಿಳಿದು ಬಂದ ಮಾಹಿತಿ. ಬ್ರಿಟಿಷರ ದಬ್ಟಾಳಿಕೆಯ ಈ ಘಟನೆ ಶಿರ್ವ ಪರಿಸರದಲ್ಲಿ ಸ್ವಾಭಿಮಾನದ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಿರಲೂ ಬಹುದು.
ಸೂರ್ಯ-ಚಂದ್ರ ಜೋಡುಕರೆ ಕಂಬಳ
ಶತಮಾನಗಳಿಂದ ನಡೆದು ಬರುತ್ತಿರುವ ಶಿರ್ವ ನಡಿಬೆಟ್ಟು ಕಂಬಳವು 1996ರಲ್ಲಿ ಶಿರ್ವ ನಡಿಬೆಟ್ಟು ರಘುರಾಮ ನಾಯ್ಕ ಅವರ ನೇತೃತ್ವದಲ್ಲಿ ಸೂರ್ಯ-ಚಂದ್ರ ಜೋಡುಕರೆ ಕಂಬಳವಾಗಿ ಪರಿವರ್ತನೆಗೊಂಡಿತು. ಬಳಿಕ ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯ ಕಂಬಳ ಸಮಿತಿಯಲ್ಲಿ ಸೇರ್ಪಡೆಗೊಂಡು ಸೂರ್ಯ-ಚಂದ್ರ ಜೋಡುಕರೆ ಕಂಬಳವು ಕೂಟದ ಪ್ರಥಮ ಜೋಡುಕರೆ ಕಂಬಳವಾಗಿ ಶಿರ್ವದಲ್ಲಿ ನಡೆಯುತ್ತಿತ್ತು. 2014ರಲ್ಲಿ ಸುಪ್ರೀಂ ಕೋರ್ಟ್ ನ ಆದೇಶದಿಂದಾಗಿ ಕಂಬಳದ ಹಿಂದಿನ ದಿನ ರದ್ದುಗೊಂಡಿದ್ದು, ಕಟ್ಟುಕಟ್ಟಳೆ ಪ್ರಕಾರ ಕಂಬಳ ಮುಗಿಸಲಾಗಿತ್ತು. ಅನಾದಿ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ನಡೆಯುತ್ತಿದ್ದ ಶಿರ್ವ ನಡಿಬೆಟ್ಟು ಕಂಬಳವು 1996ರಿಂದ 2014ರವರೆಗೆ ಕಂಬಳ ಸಮಿತಿಯ ಸೂರ್ಯ-ಚಂದ್ರ ಜೋಡುಕರೆ ಕಂಬಳವಾಗಿ ನಡೆದು ಪ್ರಸಿದ್ಧಿಯಾಗಿತ್ತು. 2014ರ ಬಳಿಕ ಜೋಡುಕರೆ ಕಂಬಳವು ಸುಮಾರು 45-50 ಜೋಡಿ ಕೋಣಗಳೊಂದಿಗೆ ಬೆಳಿಗ್ಗಿನಿಂದ ಸಂಜೆಯವರೆಗೆ ಹಗಲು ವೇಳೆ ಮಾತ್ರ ನಡೆದುಕೊಡು ಬರುತ್ತಿದೆ.
ಚಿತ್ರ – ಲೇಖನ: ಸತೀಶ್ಚಂದ್ರ ಶೆಟ್ಟಿ ಶಿರ್ವ