Advertisement

ನೇಮ್‌ ಬದಲಾದರೆ ನಾಮ!

11:45 AM Sep 19, 2019 | mahesh |

“ನಿಮ್ಮ ಹೆಸರು…’ ಅಂದೆ, ಆಕೆಯ ವಿವರ ಬರೆದುಕೊಳ್ಳುತ್ತ. 2 ನಿಮಿಷವಾದರೂ ಉತ್ತರವಿಲ್ಲ! “ಅಯ್ಯ..ಹೆಸರು ಹೇಳಲೂ ಇಷ್ಟು ಯೋಚಿಸಬೇಕೆ..?’ ಆಕೆ ನನ್ನ ಕ್ಲೈಂಟ್‌. ವಿಮಾ ಸಂಸ್ಥೆಯ ಉದ್ಯೋಗಿಯಾಗಿ ಈ ಪ್ರಶ್ನೆಯನ್ನು ಆಗಾಗ
ಕೇಳಬೇಕಾಗುತ್ತದೆ. “ಮೇಡಂ, ಅದೇನಂದ್ರೆ.. ನನ್ನ ಹೆಸ್ರು
ಚಿತ್ರಾ ಅಂತ. ಆದ್ರೆ, ಮದ್ವೆ ಆದ್ಮೇಲೆ ಗಂಡನ್‌ ಮನೇಲಿ ನಿಧಿ ಅಂತ ಕರೀತಾರೆ. ಸೋ..ಯಾವ ಹೆಸ್ರು ಹೇಳಲಿ ಅಂತ
ಗೊಂದಲ ಆಯ್ತು..’ ಅಂದರಾಕೆ. ಇದೇನೂ ಹೊಸದಲ್ಲ.100ರಲ್ಲಿ 40ರಷ್ಟು ಹೆಣ್ಣುಮಕ್ಕಳಿಗೆ ಹೀಗೇನೇ. ಶಾಲೆಯ ದಾಖಲಾತಿಯಲ್ಲಿ ಒಂದು ಹೆಸರು. ಕೆಲವರಿಗೆ ಮದುವೆಯ ನಂತರ ಪತಿಯ ಮನೆತನದ ಹೆಸರು
ಸೇರಿಸಿಕೊಳ್ಳಬೇಕೆಂಬ ಒತ್ತಾಯವಿರುತ್ತದೆ.

Advertisement

ನಿಮಗೆ ಗೊತ್ತಿರಲಿ.. ಹೆಸರಿನ ಮುಂದೆ ಪತಿಯ ಹೆಸರನ್ನು/ಸರ್‌ನೇಮ್‌ ಅನ್ನು ಸೇರಿಸಿ ಬರೆಯುವುದು ರೂಢಿಗತವಾಗಿದೆಯೇ ಹೊರತು ಕಾನೂನಿನ ಪ್ರಕಾರ ಅದು ಪೂರ್ತಿ ಸರಿ ಅಲ್ಲ. ಶಾಲೆಯ ದಾಖಲಾತಿಯಲ್ಲಿರುವ ಹೆಸರನ್ನೇ ಬ್ಯಾಂಕ್‌, ಆಧಾರ್‌, ಪ್ಯಾನ್‌ ಕಾರ್ಡ್‌ಗಳಲ್ಲಿ ಬಳಸಿದ್ದರೆ ಒಳ್ಳೆಯದು. ಅನವಶ್ಯಕ ತೊಂದರೆಗಳಾಗುವುದಿಲ್ಲ. ಒಮ್ಮೆ ಬದಲಾಯಿಸಲೇ ಬೇಕಾದ ಅನಿವಾರ್ಯತೆ ಇದ್ದರೆ..ಒಂದು ಅಫಿಡವಿಟ್‌ ಮಾಡಿಸಿ
ಇಟ್ಟುಕೊಳ್ಳುವುದು ಒಳ್ಳೆಯದು. ಮ್ಯಾರೇಜ್‌ ಸರ್ಟಿಫಿಕೇಟ್‌ ಮಾಡಿಸಿಕೊಳ್ಳುವುದು ಉಪಯುಕ್ತ. ನನ್ನ ಅನುಭವದ ಮಾತಿದು.

ಬಹಳಷ್ಟು ಹೆಣ್ಣುಮಕ್ಕಳು ಮದುವೆಯ ನಂತರ ಇಂಥ ದಾಖಲಾತಿಗಳ ಬಗ್ಗೆ ಬಹಳ ನಿರ್ಲಕ್ಷ್ಯ ಮಾಡುತ್ತಾರೆ. ಶಾಲೆ, ಕಾಲೇಜುಗಳಿಂದ ಸರ್ಟಿಫಿಕೇಟ್‌ಗಳನ್ನೇ (ಅಂಕಪಟ್ಟಿ) ತಂದಿಟ್ಟುಕೊಳ್ಳದ ಹೆಣ್ಣು ಮಕ್ಕಳೂ ಇದ್ದಾರೆ…!

ಜನನ ಪ್ರಮಾಣ ಪತ್ರ, ಆಧಾರ್‌, ಪ್ಯಾನ್‌ ಇತ್ಯಾದಿ ದಾಖಲೆಗಳಲ್ಲಿರುವ ವಿವರಗಳು ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ಖಾತ್ರಿಮಾಡಿಕೊಳ್ಳಬೇಕು. ತಪ್ಪಾಗಿದ್ದಲ್ಲಿ ಸರಿಪಡಿಸಿಕೊಳ್ಳಬೇಕು.
ಒಮ್ಮೆ ತಮ್ಮ ವಿಮೆಗೆ ಪತ್ನಿಯನ್ನು ನಾಮಿನಿಯಾಗಿ ಮಾಡಿದ್ದವರೊಬ್ಬರು
ಅಪಘಾತದರಲ್ಲಿ ತೀರಿಹೋದರು. ಪತ್ನಿಯ ಹೆಸರನ್ನು ಅವರು ಸುಮಿತ್ರಾ ಎಂದು ನಮೂದಿಸಿದ್ದರು. ಆದರೆ ಆಕೆಯ ಆಧಾರ್‌, ಪ್ಯಾನ್‌ ಕಾರ್ಡ್‌, ಬ್ಯಾಂಕ್‌ ದಾಖಲೆಗಳಲ್ಲಿ ಸುಮಾ ಎಂಬುದಾಗಿ ಇತ್ತು. ಶಾಲೆಯ ದಾಖಲಾತಿ ನೋಡಿದರೆ..ಅಲ್ಲಿದ್ದದ್ದು ಸುನಿತಾ ಎಂಬ ಹೆಸರು…!

ಸುಮ್ಮನೆ ಅನವಶ್ಯಕ ಗೊಂದಲ.. ರಗಳೆ..ಪರಿಹಾರ ಸಿಗುವಲ್ಲಿ ವಿಳಂಬ..ಅದೂ ಹೆಸರಿನ ತಪ್ಪಿನಿಂದಾಗಿ..! ಕೆಲವೊಮ್ಮೆ ಅದು ನಮ್ಮ
ಸ್ವಯಂಕೃತಾಪರಾಧವೂ ಹೌದು. ನಿರ್ಲಕ್ಷ್ಯವೂ ಹೌದು. ಹೆಸರಲ್ಲೇನಿದೆ ಬಿಡಿ.. ಅನ್ನುತ್ತೇವಲ್ಲ..? ಹೆಸರೆಂಬುದು ಖಂಡಿತ ವಾಗಿಯೂ ನಿರ್ಲಕ್ಷ್ಯ ಮಾಡುವಂಥದ್ದಲ್ಲ. ಗೆಳತಿಯರೇ..ನೆನಪಿರಲಿ…

Advertisement

ಸುಮನಾ ಮಂಜುನಾಥ

Advertisement

Udayavani is now on Telegram. Click here to join our channel and stay updated with the latest news.

Next