Advertisement

ಯಾರಿಗೆ, ಹೇಗೆ ನಮಸ್ಕಾರ ಮಾಡುವುದು?

10:54 AM Jun 09, 2019 | Vishnu Das |

ಇವತ್ತಿನ ತನಕ ನಾವು ಏನೇನನ್ನು ಬಿಡಬೇಕಿತ್ತು? ಏನನ್ನೆಲ್ಲಾ ಬಿಟ್ಟಿದ್ದೇವೆ? ಏನನ್ನು ಬಿಟ್ಟರೆ ದೇವರು ನಮ್ಮನ್ನೆಲ್ಲ ಒಪ್ಪುತ್ತಾನೆ? ಇಂಥ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡು, ನಂತರ ಶರಣಾಗತಿಯ ಭಾವದಲ್ಲಿ ಬಾಗಿ ನಿಲ್ಲುವುದೇ ನಮಸ್ಕಾರ ಮಾಡುವ ಭಾವ.

Advertisement

ನಮಸ್ಯಾಮೋ ದೇವಾನ್‌ ನನು ಹತವಿಧೇಸ್ತೇಪಿ ವಶಗಾ
ವಿಧಿರ್ವಂದ್ಯಃ ಸೋಪಿ ಪ್ರತಿನಿಯತಕರ್ಮೈಫ‌ಲಧಃ|
ಫ‌ಲಂ ಕರ್ಮಾಯತ್ತಂ ಕಿಮಮರಗಣೈ ಕಿಂ ಚ ವಿಧಿನಾ
ನಮಸ್ತತ್ಕರ್ಮಭ್ಯೋ ವಿಧಿರಪಿನಯೇಭ್ಯ ಪ್ರಭವತಿ ||

ದೇವರಿಗೆ ನಮಿಸೋಣವೆಂದರೆ ಅವರೆಲ್ಲ ಹಾಳು ವಿಧಿಯ ಅಧೀನದಲ್ಲಿದ್ದಾರೆ. ವಿಧಿಯನ್ನಾದರೂ ವಂದಿಸೋಣವೆಂದರೆ ಅದು ನಿಯತವಾದ ಕರ್ಮಕ್ಕೆ ತಕ್ಕ ಫ‌ಲವನ್ನು ಕೊಡುವುದಲ್ಲದೆ ತಾನಾಗಿ ಏನನ್ನೂ ಮಾಡದು. ಹೀಗಾಗಿ, ನಮ್ಮೆಲ್ಲರ ಫ‌ಲಗಳು ನಮ್ಮವೇ ಕರ್ಮಗಳ ಅಧೀನ. ಇಂತಿರಲು ದೇವತೆಗಳ ಹಂಗೇನು? ವಿಧಿಯ ಹಂಗೇನು? ಆದುದರಿಂದ ವಿಧಿಗೂ ಅಧಿಕಾರ ಚಲಾಯಿಸಲಾಗದ ಆ ಕರ್ಮಗಳಿಗೆ ನಮ್ಮ ನಮನ ಎಂಬುದು ಇದರ ಅರ್ಥ. ಆ ಕರ್ಮಗಳು ಮೊದಲು ಶುದ್ಧವಾಗಿರಬೇಕು. ಆಗ ಮಾತ್ರ ನಮಸ್ಕಾರವು ಶುದ್ಧವಾಗುತ್ತದೆ.

ಇವತ್ತು ನಮಸ್ಕಾರ ಎಂಬುದು ಒಂದು ಬಗೆಯ ಪುರಸ್ಕಾರ ಮತ್ತು ತನ್ನತ್ತ ಸೆಳೆಯುವ ತಂತ್ರ ಮಾತ್ರ ಆಗಿಬಿಟ್ಟಿದೆ.

ನೀವು ದೇವರಿಗೆ ಯಾಕೆ ನಮಸ್ಕಾರ ಮಾಡುತ್ತೀರಿ? ಅಂತ ಒಮ್ಮೆ ಯಾರನ್ನಾದರು ಕೇಳಿನೋಡಿ. ಅದಕ್ಕೆ ಒಂದು ಉತ್ತರ ಸಿಗಬಹುದು ಅಥವಾ ಸಿಗದೇ ಇರಬಹುದು. ನಮಸ್ಕಾರ ನಂಬಿಕೆಯಲ್ಲ, ಬಯಕೆಯ ಪ್ರತಿಬಿಂಬ. ದೇವರು ಎಲ್ಲಾ ಕಡೆ ಇದ್ದರೂ, ದಾರಿಯಲ್ಲಿ ಕಂಡ ಕಲ್ಲಿನಲ್ಲೂ ಇದ್ದಾನೆ ಎಂಬ ನಂಬಿಕೆ ಬಲವಾಗಿ ಇದ್ದರೂ ನಾವು ನಮಸ್ಕರಿಸುವುದು.

Advertisement

ಪ್ರತಿಷ್ಠಾಪಿಸಿದ ಮೂರ್ತಿಗೆ. ನಮಗೆ ನಮ್ಮ ಊರಿನ ದೇವರೇ ಇಷ್ಟ ಎಂಬ ಭಾವ ಇದ್ದರೂ ನಾವು ಪರ ಊರಿನಲ್ಲಿ ಇರುವ, ಅಲ್ಲೋ -ಇಲ್ಲೋ ದಾರಿಯಲ್ಲಿ ಕಾಣುವ ಗಣಪನಿಗೆ ಕೂಡಾ ನಮಸ್ಕರಿಸುತ್ತೇವೆ. ಕಾರಣ, ದೇವರಿಂದ ನಮಗೆ ಒಳ್ಳೆಯದಾಗುವುದು ಎಂಬ ನಂಬಿಕೆ. ಮನುಷ್ಯರಲ್ಲೂ ಅಷ್ಟೇ, ಅನಿವಾರ್ಯಕ್ಕೆ ಅನರ್ಹವ್ಯಕ್ತಿಯೂ ಪೂಜಿಸಲ್ಪಡುವ. ಇದು ಬದುಕಿನ ಹೀನಸ್ಥಿತಿ ಮತ್ತು ತೀರಾ ಅನಿವಾರ್ಯ ಕರ್ಮ.

ನಮಸ್ಕಾರ ಮಾಡುವುದನ್ನು ಸಂಸ್ಕಾರ ಅಂದುಕೊಂಡರೆ ಅದು ಹೊರನೋಟಕ್ಕೆ ಸರಿ. ಆದರೆ, ನಮಸ್ಕಾರ ಕೊಡಲು ನಮ್ಮೊಳಗೆ ಸಂಸ್ಕಾರ ಇದ್ದೇ ಇರಬೇಕು, ಒಂದು ಕಲ್ಮಶವಿಲ್ಲದ ಪ್ರೀತಿ ಬೇಕೇ ಬೇಕು. ದೇವರ ಮೇಲೆ ಪ್ರೀತಿ ಇಲ್ಲದೇ ನಮಸ್ಕರಿಸುವುದು ಸುಮ್ಮನೆ. ಪ್ರೀತಿ ಪರಸ್ಪರ ಅರ್ಪಿತವಾದಾಗ ನಮಸ್ಕಾರ ಬೇಕಿಲ್ಲ!

ನಿಜ ಹೇಳಬೇಕೆಂದರೆ, ವಿಧಿ ನಮ್ಮ ಕೈಯಲ್ಲೇ ಇದ್ದಾನೆ. ಶ್ಲೋಕ, ಮಂತ್ರ, ಸ್ತುತಿಗಳು ನಮಸ್ಕರಿಸುವ ವೇಳೆ ನಮ್ಮ ಮನಸ್ಸು ಮತ್ತು ಬಾಯಿಂದ ಹೊರಡುತ್ತವೆ. ಇದು ಒಂದು ಹಂತದವರೆಗೆ ಸರಿ. ಆಮೇಲೆ? ಇದನ್ನು ಮೀರಿದ್ದು ನಮಸ್ಕಾರ!

ನಿಜವಾದ ನಮಸ್ಕಾರ ಶುರುವಾಗುವುದೇ ಈ ಸ್ತುತಿ-ಮಂತ್ರ ಎಲ್ಲಾ ಮುಗಿದ ಮೇಲೆ. ದೇವರ ಮುಂದೆ ಆಗ ನಾವಾಗಿ ನಿಲ್ಲಬೇಕು. ಇವತ್ತಿನ ತನಕ ಏನನ್ನು ಬಿಡಬೇಕಿತ್ತು? ಏನನ್ನು ಬಿಟ್ಟಿರುವೆ? ಏನು ಬಿಟ್ಟರೆ ದೇವರು ಒಪ್ಪುವನು? ಈ ನನ್ನೊಳಗಿನ ಎಲ್ಲವನ್ನೂ ಬಿಡುವಿಕೆಯೇ ದೇವರಿಗೆ ನಮಸ್ಕಾರ ಮಾಡುವ ಭಾವ. ಅಹಂಕಾರ, ಆಸೆ, ಕ್ರೋಧ, ಮತ್ಸರ, ಮೋಹ ಎಲ್ಲವನ್ನೂ ಒಳಗೊಂಡ ಮನಸ್ಸು ಯಾವುದನ್ನೂ ಬಿಡಲು ಆಗದ ಪರಿಸ್ಥಿತಿಗೆ ಸಿಕ್ಕಿಕೊಂಡಾಗ ವಿಧಿ ನಮ್ಮನ್ನು ಆಳದೇ ಇರಲಾರ!

ಪಡೆಯುವುದು ಮತ್ತು ಕಳೆದುಕೊಳ್ಳುವುದು ಈ ಎರಡರ ನಡುವಿನ ಸಂದಿಗ್ಧ ಸಂದರ್ಭವೇ ಈ ನಮಸ್ಕಾರ. ದೇವರಿಗಿಂತ ದೇವರತೀರ್ಥ ಇಷ್ಟ. ಆ ಗಂಧದ ಘಮ, ರುಚಿ ಪರಮಪ್ರೀತಿ. ಈ ಪ್ರೀತಿ ದೇವರ ಮೇಲೆ ಹುಟ್ಟದೆ ನಮಸ್ಕಾರ ತಟ್ಟದು. ಇದು ಹುಟ್ಟುವುದು ಕಷ್ಟ. ಗಂಧದ ಘಮ ಮತ್ತು ರುಚಿ ನಮಗೆ ಗೊತ್ತು. ಅದರಿಂದ ಇವರೆಡೇ ನಮ್ಮ ಆಯ್ಕೆ ಕೂಡಾ. ದೇವರು ಹಾಗಲ್ಲ, ಅವನಿಂದ ನಮಗೆ ಎಲ್ಲವೂ ಬೇಕು. ಬೇಕಾಗಿದ್ದು ಮತ್ತು ಬೇಡದ್ದು! ಹಾಗಾಗಿ, ಅದಮ್ಯ ಪ್ರೀತಿ ದೇವರ ಮೇಲೆ ಹುಟ್ಟುವುದು ಸುಲಭವಲ್ಲ. ಯಾವುದು ನಾವಲ್ಲವೋ ಅದೇ ನಾವಾಗಿದ್ದೇವೆ ಮತ್ತು ಯಾವುದು ನಾವೋ ಅದು ನಮ್ಮಲ್ಲಿ ಇಲ್ಲವಾಗಿದೆ. ನಮ್ಮೊಳಗಿನ ನಾವು ಬಿಡುಗಡೆಯಾಗಲು ಈ ನಮಸ್ಕಾರ ಕೂಡ ಒಂದು ಮಾರ್ಗವೇ.

ಈಗ ಹೇಳಿ ಯಾರಿಗೆ, ಹೇಗೆ ನಮಸ್ಕಾರ ಮಾಡೋಣ?

ವಿಷ್ಣು ಭಟ್‌ ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next