ತುಂಬಾ ದಿನಗಳ ನಂತರ ನಿರ್ದೇಶಕ ಹೇಮಂತ್ ಹೆಗಡೆ ಹೊಸ ಕಥೆಯೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಅದು “ನಮ್ ಗಣಿ ಮದ್ವೆ ಪ್ರಸಂಗ’. ಇಷ್ಟು ಹೇಳಿದ ಮೇಲೆ ಇದೊಂದು ಕಾಮಿಡಿ ಸಿನಿಮಾ ಎಂದು ಊಹಿಸೋದು ಸುಲಭ.
ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆದಿದೆ. ಸಚಿವ ಎಸ್.ಟಿ.ಸೋಮಶೇಖರ್, ಹಿರಿಯ ನಿರ್ದೇಶಕ ಟಿ.ಎನ್.ಸೀತಾರಾಂ ಸೇರಿದಂತೆ ಅನೇಕರು ಆಗಮಿಸಿ ಚಿತ್ರಕ್ಕೆ ಶುಭಕೋರಿದರು.
ಮಲೆನಾಡಿವರಾದ ಹೇಮಂತ್ ಹೆಗಡೆ ಈ ಬಾರಿ ತಮ್ಮೂರಿನ ಕಥೆಯೊಂದನ್ನೇ ತಂದಿದ್ದಾರೆ. ಅದು ಅಲ್ಲಿನಕೃಷಿಕ ಯುವಕರ ಮದ್ವೆ ಸಮಸ್ಯೆ ಕುರಿತು. ಈ ಬಗ್ಗೆ ಮಾತನಾಡುವ ಅವರು, “ಎರಡು ವರ್ಷಗಳ ನಂತರ ಮತ್ತೆ ಚಿತ್ರ ಮಾಡುತ್ತಿದ್ದೇನೆ. ಮಲೆನಾಡು ಹುಡುಗನ ಕಥೆ ಇದು. ಮಲೆನಾಡಿನಲ್ಲಿ ಕೃಷಿ ಮಾಡುವ ಹುಡುಗರಿಗೆ ಹುಡುಗಿ ಸಿಗುವುದಿಲ್ಲ. ಜ್ವಲಂತ ಸಮಸ್ಯೆಯೊಂದನ್ನು ಇಟ್ಟುಕೊಂಡು, ಅದನ್ನು ಹಾಸ್ಯದ ಮೂಲಕ ಹೇಳುವುದಕ್ಕೆ ಹೊರಟಿದ್ದೇನೆ. ನನ್ನ ಸ್ವಂತ ಸಂಬಂಧಿ ಮದುವೆಯಾಗುವುದಕ್ಕೆ ಕಾಶ್ಮೀರದವರೆಗೂ ಹೋಗಿ ಬಂದ. ಸಾಮಾಜಿಕ ಸಂದೇಶವಿರುವ ಸುಂದರ ಚಿತ್ರ ಇದಾಗಲಿದೆ ಎಂಬ ನಂಬಿಕೆ ನನಗಿದೆ’ ಎನ್ನುವುದು ಹೇಮಂತ್ ನಂಬಿಕೆ.
ಇದನ್ನೂ ಓದಿ:ವಿರಾಟ್ ಕೊಹ್ಲಿಯ ವಿರುದ್ಧ ಆರೋಪ ಮಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ನಟನೆ ಮಾಡುವಾಗ ದುರಂತ ಪಾತ್ರಗಳನ್ನು ಮಾಡಿದರೂ, ನಿರ್ದೇಶನ ಮಾಡುವಾಗ ಹಾಸ್ಯಮಯ ಚಿತ್ರಗಳನ್ನೇ ಮಾಡುತ್ತಾರೆ, ಜನರನ್ನು ನಗಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ ಹೇಮಂತ್. ನಗು ಮತ್ತು ವಿಷಾದದ ನಡುವೆ ನಾಣಿಯ ಮದುವೆ ಮಾಡಿಸುವುದಕ್ಕೆ ಅವರು ಹೊರಟಿದ್ದಾರೆ ಅವರು. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು ಟಿ.ಎನ್.ಸೀತಾರಾಂ.
ಚಿತ್ರದಲ್ಲಿ ಹೇಮಂತ್ ಗೆಳೆಯ, ನಟ ರಾಜೇಶ್ ನಟರಂಗ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಆದರೆ, ಅವರಿಗೆ ಯಾವ ಪಾತ್ರ ಮಾಡುತ್ತಿದ್ದೇನೆ ಎಂಬ ಬಗ್ಗೆ ಮುಹೂರ್ತ ದಿನದಂದೂ ಮಾಹಿತಿ ಇಲ್ಲ. “ಹೇಮಂತ್ ಫೋನ್ ಮಾಡಿ ಒಂದು ಪಾತ್ರ ಮಾಡಬೇಕು ಎಂದ. ನಮ್ಮಿಬ್ಬರದ್ದು ಹಳೆಯ ಪರಿಚಯ. 30 ವರ್ಷಗಳಿಂದ ಸ್ನೇಹಿತರು. ಬೇರೆಬೇರೆ ಹಂತಗಳಲ್ಲಿ, ವೇದಿಕೆಗಳಲ್ಲಿಕೆಲಸ ಮಾಡಿದ್ದೇವೆ. ಅವನ ನಿರ್ದೇಶನದಲ್ಲಿ ಅಭಿನಯಿಸಿರಲಿಲ್ಲ. ಈ ಚಿತ್ರದಲ್ಲಿ ನಟಿಸುವುದಕ್ಕೆ ಕೇಳಿದಾಗ, ತಕ್ಷಣ ಒಪ್ಪಿದೆ. ಅವನ ಮೇಲೆ ನಂಬಿಕೆ ಇದೆ’ ಎಂದರು.
ಹೇಮಂತ್ ಹೆಗಡೆ ಅವರಿಗೆ ನಾಯಕಿಯರಾಗಿ ಶ್ರೇಯಾ ವಸಂತ್ ಮತ್ತು ಶ್ರುತಿ ನಂದೀಶ್ ನಟಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ನಾರಾಯಣ ಸ್ವಾಮಿ ಮತ್ತು ರಿತೇಶ್ ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಿರಸಿ ಸುತ್ತಮುತ್ತ ಒಂದೇ ಹಂತದ 30 ದಿನಗಳ ಚಿತ್ರೀಕರಣ ನಡೆಯಲಿದೆ.