ಒಂದು ಚಿತ್ರದಲ್ಲಿ ಮೊದಲು ಗಮನ ಸೆಳೆಯುವುದು ಅದರ ಟೈಟಲ್. ಚಿತ್ರದ ಟೈಟಲ್ ಹೇಗಿದೆ ಎನ್ನುವುದರ ಮೇಲೆ ಪ್ರೇಕ್ಷಕರ ಅಭಿಪ್ರಾಯ ನಿರ್ಧಾರವಾಗುತ್ತ ಹೋಗುತ್ತದೆ. ಹಾಗಾಗಿಯೇ ಬಹುತೇಕರು ಆರಂಭದಲ್ಲೇ ಒಂದಷ್ಟು ಹೈಪ್ ಕ್ರಿಯೇಟ್ ಮಾಡಬೇಕೆಂಬ ಕಾರಣಕ್ಕೆ ಸಾಕಷ್ಟು ಅಳೆದು ತೂಗಿ ಚಿತ್ರಕ್ಕೆ ಟೈಟಲ್ ಇಡುತ್ತಾರೆ. ಆ ಮೂಲಕ ಒಂದಷ್ಟು ಸುದ್ದಿಯೂ ಆಗುತ್ತಾರೆ. ಇತ್ತೀಚೆಗೆ ಅಂಥದ್ದೇ ಒಂದು ಹೊಸಬರ ಚಿತ್ರ ತನ್ನ ಟೈಟಲ್‌ನಲ್ಲೇ ನಿಧಾನವಾಗಿ ಸುದ್ದಿಯಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ನಮ್ ಗಣಿ ಬಿ.ಕಾಂ ಪಾಸ್’
ಕೆಲ ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ, ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅಭಿಷೇಕ್ ಶೆಟ್ಟಿ “ನಮ್ ಗಣಿ ಬಿ.ಕಾಂ ಪಾಸ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ.
“ಹೆಸರೇ ಹೇಳುವಂತೆ, “ನಮ್ ಗಣಿ ಬಿ.ಕಾಂ ಪಾಸ್’ ಬಿ.ಕಾಂ ಮುಗಿಸಿದ ಗಣಿ ಎಂಬ ನಿರುದ್ಯೋಗಿ ಹುಡುಗನ ಕಥೆ. ಸುಮಾರು ಮೂರು ವರ್ಷಗಳ ಕಾಲ ಕೆಲಸವಿಲ್ಲದೆ ಇರುವ ಗಣಿ ಎಲ್ಲಾ ಕಡೆಗಳಿಂದಲೂ ಅಪಮಾನ, ಅವಮಾನಗಳನ್ನು ಎದುರಿಸುತ್ತಿರುತ್ತಾನೆ. ಮುಂದೆ ಗೆಳಯನೊಂದಿಗೆ ವ್ಯಾಪಾರ ಮಾಡಲು ಹತ್ತು ಲಕ್ಷ ಅವಶ್ಯವಾಗಿರುತ್ತದೆ. ನಂತರ ಆ ಹಣವನ್ನು ಗಣಿ ಯಾವ ರೀತಿ ಸಂಪಾದಿಸುತ್ತಾನೆ ಎನ್ನುವುದರ ಸುತ್ತ ಚಿತ್ರದ ಕಥೆ ನಡೆಯುತ್ತದೆ. ಇಡೀ ಚಿತ್ರವನ್ನು ಕಾಮಿಡಿ ಮತ್ತು ಥ್ರಿಲ್ಲರ್ ಅಂಶಗಳನ್ನು ಇಟ್ಟುಕೊಂಡು ತೆರೆಮೇಲೆ ತರುತ್ತಿದ್ದೇವೆ’ ಎಂದು ಚಿತ್ರದ ಬಗ್ಗೆ ವಿವರಣೆ ಕೊಡುತ್ತಾರೆ ನಿರ್ದೇಶಕ ಕಂ ನಾಯಕ ಅಭಿಷೇಕ್ ಶೆಟ್ಟಿ.
ಈ ಹಿಂದೆ “ಸೆಕೆಂಡ್ ಹಾಫ್’ ಚಿತ್ರವನ್ನು ನಿರ್ಮಿಸಿದ್ದ ಯು.ಎಸ್ ನಾಗೇಶ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಮ್ಮ ಮೊದಲ ಚಿತ್ರದಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ನಿರ್ಮಾಪಕ ಯು.ಎಸ್ ನಾಗೇಶ್ ಕುಮಾರ್, ಕೆಲ ಕಾಲ ಚಿತ್ರರಂಗದ ಸಹವಾಸವೇ ಬೇಡವೆಂದು ದೂರವಿದ್ದರಂತೆ. ಈ ಬಗ್ಗೆ ಮಾತನಾಡುವ ನಿರ್ಮಾಪಕರು, “ನಿರ್ದೇಶಕರು ಕಥೆ ಹೇಳಿದಾಗ ಇಷ್ಟವಾಗಿ, ಎರಡನೇ ಬಾರಿ ಚಿತ್ರರಂಗದಲ್ಲಿ ಅದೃಷ್ಟ ಒಲಿಯಬಹುದೆಂಬ ಆಶಾಭಾವನೆಯಿಂದ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದೇನೆ. ಇದೊಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಚಿತ್ರ. ಚಿತ್ರದಲ್ಲಿ ಎಲ್ಲೂ ಡಬಲ್ ಮೀನಿಂಗ್ ಡೈಲಾಗ್‌ಗಳಿಲ್ಲ. ಚಿತ್ರ ನೋಡುಗರಿಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಾರೆ.
ಇನ್ನು “ನಮ್ ಗಣಿ ಬಿ.ಕಾಂ ಪಾಸ್’ ಚಿತ್ರದಲ್ಲಿ ಐಶಾನಿ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ವಿಕಾಸ್ ವಸಿಷ್ಟ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗೆ ನಡೆದ “ನಮ್ ಗಣಿ ಬಿ.ಕಾಂ ಪಾಸ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅರ್ಜುನ್ ಪ್ರಶಸ್ತಿ ವಿಜೇತ ಶರತ್ ಗಾಯಕ್‌ವಾಡ್, ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ನಿರ್ದೇಶಕ ಭಗವಾನ್, ರಜನಿಕಾಂತ್ ಗೆಳಯ ರಘುನಂದನ್ ಮುಂತಾದವರು ಉಪಸ್ಥಿತರಿದ್ದು, ಚಿತ್ರದ ಹಾಡುಗಳನ್ನು ಹೊರತಂದರು. ಇದೇ ಸಂದರ್ಭದಲ್ಲಿ ಹಿರಿಯ ನಟ ದೊಡ್ಡಣ್ಣ ಅವರಿಗೆ “ಸಕಲ ಕಲಾ ನಿಧಿ’ ಬಿರುದು ನೀಡಿ ಗೌರಸಲಾಯಿತು.