ಕಡಬ: ಕುಟ್ರಾಪಾಡಿ ಗ್ರಾಮದ ನಾಲೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ದೇಗುಲದಲ್ಲಿ ರವಿವಾರ ಗಣಪತಿ ಬಿಂಬ ಪ್ರತಿಷ್ಠೆ ಹಾಗೂ ಧಾರ್ಮಿಕ ವಿಧಿ – ವಿಧಾನಗಳು ಪಾವಂಜೆ ಬ್ರಹ್ಮ ಶ್ರೀ ವಾಗೀಶ ಶಾಸಿŒ ತಂತ್ರಿಗಳ ನೇತೃತ್ವದಲ್ಲಿ ಜರಗಿ, ಕ್ಷೇತ್ರಕ್ಕೆ ಆಗಮಿಸಿದ ಕೋದಂಡಾಶ್ರಮದ ಮಠಾಧೀಶ ಶ್ರೀ ಮಾಧವಾಶ್ರಮ ಸ್ವಾಮೀಜಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.
ಬೆಳಗ್ಗೆ ಶ್ರೀ ಗಣೇಶ ಅಥರ್ವಶೀರ್ಷ (ಸಹಸ್ರಮೋದಕ) ಯಾಗ, ನಾಗಬಿಂಬ ಶುದ್ಧಿ, ಆಶ್ಲೇಷಾ ಬಲಿ, ಮಧ್ಯಾಹ್ನ ಶ್ರೀ ಗಣಪತಿ ಬಿಂಬಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ಸಂಜೆ ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮಕುಂಭ ಸ್ಥಾಪನ, ಅವಾಸ ಹೋಮ ನಡೆಯಿತು.
ಕಡಬ ಪೇಟೆ, ಕೋಡಿಂಬಾಳ ಹಾಗೂ ಪಿಜಕಳ ಭಾಗದ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆಯಾಯಿತು. ಬಳಿಕ ಕ್ಷೇತ್ರಕ್ಕೆ ಆಗಮಿಸಿದ ಶ್ರೀ ಕಾಮಾಕ್ಷಿ ಶಾರದಾಂಬಾ ಕ್ಷೇತ್ರ ಹೆಬ್ಬೂರು ಶ್ರೀ ಕೋದಂಡಾಶ್ರಮ ಮಠಾಧೀಶ ಶ್ರೀ ಮಾಧವಾಶ್ರಮ ಸ್ವಾಮೀಜಿ ಅವರಿಗೆ ಸ್ವಾಗತ ನೀಡಲಾಯಿತು.
ವಿವಿಧ ಭಜನ ಮಂಡಳಿಗಳಿಂದ ಭಜನ ಸೇವೆ ನಡೆಯಿತು. ಸಂಜೆ ನಡೆದ ಧಾರ್ಮಿಕ ಸಭೆ ಬಳಿಕ ಕಡಬದ ವಿಶ್ವಮೋಹನ ನೃತ್ಯಕಲಾ ಶಾಲೆಯ ವಿದುಷಿ ಮಾನಸ ಪಿ. ರೈ ಮತ್ತು ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಬ್ರಹ್ಮಕುಂಭಾಭಿಷೇಕ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎನ್.ಕೆ. ಜಗನ್ನಿವಾಸ ರಾವ್, ಅಧ್ಯಕ್ಷ ಶಶಾಂಕ ಗೋಖಲೆ ಮಾರ್ಗದಮನೆ, ಜೀರ್ಣೋ ದ್ಧಾರ ಸಮಿತಿಯ ಅಧ್ಯಕ್ಷ ಕೆ. ಜ್ಞಾನೇಶ್ ರಾವ್ ಕಡಬ, ಕಾರ್ಯ ದರ್ಶಿ ಯೋಗೇಶ್ ಕೆ. ರಾವ್, ಬ್ರಹ್ಮಕುಂಭಾಭಿಷೇಕ ಮಹೋತ್ಸವ ಸಮಿತಿಯ ಕಾರ್ಯದರ್ಶಿ ರವಿಚಂದ್ರ ನಾಲೂರು, ಜತೆ ಕಾರ್ಯದರ್ಶಿ ಶಿವಪ್ರಸಾದ್ ರೈ ಮೈಲೇರಿ, ಕೋಶಾಧಿಕಾರಿ ಪ್ರಸನ್ನಕುಮಾರ್ ಪುತ್ರಬೈಲು, ಭಜನ ಮಂಡಳಿ ಅಧ್ಯಕ್ಷ ಸುಂದರ ಗೌಡ ನಾಲೂರು, ದೇಗುಲದ ಅರ್ಚಕ ಶಶಿರಾಜ್ ಗಿರಿವನ ಉಪಸ್ಥಿತರಿದ್ದರು.
ಇಂದು ಬ್ರಹ್ಮಕುಂಭಾಭಿಷೇಕ
ದೇವಸ್ಥಾನದಲ್ಲಿ ಮೇ 13ರ ಬೆಳಗ್ಗೆ 6.06ಕ್ಕೆ ಕವಾಟೋದ್ಘಾಟನೆ, ಪ್ರಾತಃ ಪೂಜಾ, ಶ್ರೀ ಶಂಕರ ನಾರಾಯಣ ದೇವರಿಗೆ ಶಾಂತಿ-ಪ್ರಾಯಶ್ಚಿತ್ತಾದಿ, ಕಲಶಾಭಿಷೇಕ ಬಳಿಕ 6.54ರ ವೃಷಭ ಲಗ್ನದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಿಲಿದೆ. ಅರ್ಚನೆ, ಪ್ರಸನ್ನ ಪೂಜೆ ನೆರವೇರಲಿವೆ. ಉತ್ಸವ ಕರ್ಮಸಮರ್ಪಣೆ, ಮಂತ್ರಾಕ್ಷತೆ ನಡೆಯಲಿದೆ. ಶ್ರೀ ಮಾಧವಾಶ್ರಮ ಸ್ವಾಮೀಜಿ ಅವರಿಗೆ ಸಮಾಜ ಬಾಂಧವರಿಂದ ಹಾಗೂ ಭಕ್ತರಿಂದ ಪಾದಪೂಜೆ ನಡೆಯಲಿದೆ. ಸಂಜೆ ಸಾಮೂಹಿಕ ಹೂವಿನ ಪೂಜೆ, ಮಂಗಳಾಚರಣೆ ನಡೆಯಲಿದೆ. ಭಜನ ಸೇವೆ ಬಳಿಕ ರಾತ್ರಿ ಡಾ| ವಿದ್ಯಾ ಎಸ್. ರಾವ್ ಹಾಗೂ ತಂಡದವರಿಂದ ಭಕ್ತಿಗಾನ ಸುಧೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.