Advertisement

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಖಚಿತ: ಕಟೀಲು

11:13 PM Apr 16, 2022 | Team Udayavani |

ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಪ್ಲಸ್‌ ಸ್ಥಾನಗಳಿಸಲಿದೆ. ಯಡಿಯೂರಪ್ಪ ಅವರು ರೈತಬಂಧುವಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಬೆಳೆದಿದೆ, ಬೆಳಗುತ್ತಿದೆ ಎಂದು ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಹೇಳಿದರು.

Advertisement

ಭಾರತದ ಕುರಿತು ವಿಶ್ವದೆಲ್ಲೆಡೆ ಗೌರವ ಪ್ರಾಪ್ತಿಯಾಗುತ್ತಿದೆ. ಇದಕ್ಕೆ ಮಹಾನ್‌ ಪುರುಷ ಮೋದಿ ಕಾರಣಕರ್ತರು. ಉಕ್ರೇನ್‌ನಿಂದ ಸಾವಿರಾರು ಭಾರತೀಯರನ್ನು ಕರೆತಂದು ನಮ್ಮ ಗೌರವ ಹೆಚ್ಚಿಸಿಕೊಂಡಿದ್ದೇವೆ. ತೆರೆಮರೆಯ ಸಾಧಕರಾದ ಮಹಾಲಿಂಗ ನಾಯ್ಕ, ಹಾಜಬ್ಬ ರಂಥವರಿಗೆ ಪದ್ಮಶ್ರೀ ನೀಡಲಾಗುತ್ತಿದೆ. ಜಗ ದ್ವಂದ್ಯ ಭಾರತ ನಿರ್ಮಾಣಕ್ಕೆ ಮೋದಿ ನೇತೃತ್ವದ ಸರಕಾರ ಮುಂದಾಗಿದೆ ಎಂದು ತಿಳಿಸಿದರು.

ಮೋದಿ ಸರಕಾರದ ಏಳೂವರೆ ವರ್ಷಗಳ ಆಡಳಿತದಲ್ಲಿ ಭ್ರಷ್ಟಾಚಾರದ ಒಂದೇ ಒಂದು ಕಳಂಕವಿಲ್ಲ. ಮುದ್ರಾ, ಜನಧನ್‌ ಸೇರಿದಂತೆ ಎಲ್ಲಿಯೂ ಭ್ರಷ್ಟಾಚಾರ ಇಲ್ಲ. ಒಂದೇ ಒಂದು ರೂಪಾಯಿ ಸೋರಿಕೆ ಆಗಿಲ್ಲ. ಕಿಸಾನ್‌ ಸಮ್ಮಾನ್‌ ಯೋಜನೆ ರೈತರನ್ನು ನೇರವಾಗಿ ತಲುಪುತ್ತಿದೆ. ಆಡಳಿತದಲ್ಲಿ ಪರಿವರ್ತನೆ ಸಾಧ್ಯವಾಗುತ್ತಿದೆ ಎಂದರು.

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕವು ಸ್ವಾಭಿಮಾನಿ ಕರ್ನಾಟಕವಾಗಿ ಪರಿವರ್ತನೆ ಹೊಂದುತ್ತಿದೆ. ರೈತವಿದ್ಯಾ ನಿಧಿ ಪರಿಕಲ್ಪನೆ ಜಾರಿ ಆಗಿದೆ. ವಿವಿಧ ಮಾಸಾಶನ ಹೆಚ್ಚಳ ಮಾಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಯೋಜನೆಗಳು ಜಾರಿಗೊಳ್ಳುತ್ತಿವೆ ಎಂದು ಮೆಚ್ಚುಗೆ ಸೂಚಿಸಿದರು..

ಕರ್ನಾಟಕ ಸರಕಾರವು ಅಭಿವೃದ್ಧಿ ಪಥದಲ್ಲಿದೆ. ಭ್ರಷ್ಟಾಚಾರದ ಆರೋಪ ಮಾಡುವ ಕಾಂಗ್ರೆಸಿಗರಿಗೆ ಉತ್ತರ ಕೊಡಬೇಕು. ಅರ್ಕಾವತಿ ಯೋಜನೆ ಪರಿಶೀಲಿಸಿ ಕ್ರಮ ಕೈಗೊಂಡರೆ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಅಧ್ಯಕ್ಷರು ಜಾಮೀನಿನಲ್ಲಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಚುನಾವಣೆ ಸಂಬಂಧಿಸಿದ ಕಾರ್ಯಗಳಿಗೆ ಕಾರ್ಯಕರ್ತರೇ ಸಿಗುತ್ತಿಲ್ಲ ಎಂದು ಲೇವಡಿ ಮಾಡಿದರು.

Advertisement

ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯ ಸಹ ಉಸ್ತುವಾರಿಗಳಾದ ಡಿ.ಕೆ. ಅರುಣಾ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವರಾದ ಆನಂದ್‌ ಸಿಂಗ್‌, ಜಿಲ್ಲಾಧ್ಯಕ್ಷರಾದ ಚನ್ನಬಸವನಗೌಡ ಪಾಟೀಲ್‌ ಉಪಸ್ಥಿತರಿದ್ದರು. ಸಚಿವೆ ಶಶಿಕಲಾ ಜೊಲ್ಲೆ ಸ್ವಾಗತಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next