ಚೆನ್ನೈ: ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಹಂತಕಿ ನಳಿನಿ ಶ್ರೀಹರನ್ ಸೋಮವಾರ ರಾತ್ರಿ ಜೈಲಿನಲ್ಲಿ ಅತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ನಳಿನ್ ಶ್ರೀಹರನ್ ತಮಿಳುನಾಡಿನ ವೆಲ್ಲೂರು ಮಹಿಳಾ ಕಾರಾಗ್ರಹದಲ್ಲಿದ್ದಾರೆ. ರಾಜೀವ್ ಗಾಂಧಿ ಹತ್ಯೆಯ ಅಪರಾಧಿಯಾಗಿರುವ ಈಕೆ ಕಳೆದ 29 ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದಾರೆ.
ನಳಿನಿ ಮತ್ತು ಸೆರೆಮನೆಯ ಇನ್ನೊಬ್ಬ ಅಪರಾಧಿಯ ನಡುವೆ ಜಗಳವಾಗಿದೆ.ಈ ವಿಷಯವನ್ನು ಇತರ ಕೈದಿಗಳು ಜೈಲರ್ ಗೆ ತಿಳಿಸಿದಾಗ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ 29 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಳಿನಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಆಕೆಯ ವಕೀಲ ಪುಲಗೆಂತಿ ಹೇಳಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿರುವ ನಳಿನಿ ಪತಿ ಮುರುಗನ್, ಜೈಲಿನಿಂದ ವಕೀಲರಿಗೆ ಕರೆ ಮಾಡಿ ನಳಿನಿಯನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆದಷ್ಟು ಬೇಗ ಕಾನೂನಿನ ಮೊರೆ ಹೋಗುವುದಾಗಿ ವಕೀಲರು ತಿಳಿಸಿದ್ದಾರೆ.
1991 ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರ್ ನಲ್ಲಿ ಚುನಾವಣಾ ಸಮಾವೇಶಕ್ಕೆ ತರೆಳಿದ್ದ ರಾಜೀವ್ ಗಾಂಧಿಯವರ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ನಳಿನಿ, ಆಕೆಯ ಪತಿ ಮುರುಗನ್ ಸೇರೆ ಏಳು ಜನರ ಆರೋಪ ಸಾಬೀತಾಗಿದೆ.