ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾಡಿರುವ ಟೀಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಯಾರೆಂದು ಪ್ರಕಟಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ಅವರು ಬಿಜೆಪಿ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನವರು ಯಾರನ್ನಾದರೂ ಸಿಎಂ ಮಾಡಲಿ. ಅದು ಅವರ ಆಂತರಿಕ ವಿಚಾರ. ಜನರು ಅವರಿಗೆ ಬಹುಮತ ಕೊಟ್ಟಿದ್ದಾರೆ. ನಾವು ಅದನ್ನು ಸ್ವೀಕಾರ ಮಾಡಿ ವಿರೋಧ ಪಕ್ಷವಾಗಿ ರಚನಾತ್ಮಕ ಕೆಲಸ ಮಾಡಲಿದ್ದೇವೆ ಎಂದರು.
ಮುಂದಿನ ವಾರ ವಿಪಕ್ಷ ನಾಯಕರ ಆಯ್ಕೆ ನಡೆಯಲಿದೆ. ಒಂದು ವಾರ ಶಾಸಕರು ತಮ್ಮ ಕ್ಷೇತ್ರದಲ್ಲಿದ್ದು, ಜನರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಿ¨ªಾರೆ. ಕಾಂಗ್ರೆಸ್ ಸಿಎಂ ಆಯ್ಕೆ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಜನತೆ ವಿದ್ಯುತ್ ಬಿಲ್ ಕಟ್ಟಬಾರದು. ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಜನರು ಗಲಾಟೆ ಮಾಡುವುದು ಸಹಜ ಎಂದು ಹೇಳಿದರು.
ಮುಸುರೆ ಸ್ವತ್ಛ ಮಾಡಿಕೊಳ್ಳಿ
ಸುರ್ಜೆವಾಲಾ ಹೇಳಿಕೆಗೆ ತಿರುಗೇಟು ನೀಡಿರುವ ಸುನಿಲ್ ಕುಮಾರ್, ಸ್ವಾಮಿ ನಿಮ್ಮ ಮನೆಯ ಕಳ್ಳ ಕಿವಿ ಹಾಗೂ ಬಾಯಿಗೆ ಮೊದಲು ಬೀಗ ಹಾಕಿ. ಎಲ್ಲದಕ್ಕೂ ಬಿಜೆಪಿ ಕಾರಣ ಎಂದು ಆರೋಪಿಸದಿದ್ದರೆ ನಿಮಗೆ ಹೊಟ್ಟೆ ತುಂಬುವುದಿಲ್ಲವೇ? ಮೊದಲು ನಿಮ್ಮ ಮನೆಯ ಮುಸುರೆ ಸ್ವತ್ಛ ಮಾಡಿಕೊಳ್ಳಿ. ಆಮೇಲೆ ಪಕ್ಕದ ಮನೆಯ ಅಡುಗೆ ಕೋಣೆ ಬಗ್ಗೆ ಮಾತನಾಡಿ ಎಂದು ಟೀಕಿಸಿದ್ದಾರೆ.
ಫಲಿತಾಂಶ ಬಂದು ಐದು ದಿನ ಕಳೆದರೂ ಮುಖ್ಯಮಂತ್ರಿ ಯಾರೆಂದು ತೀರ್ಮಾನಿಸಲಾಗದೇ ನಿಶ್ಯಕ್ತ ಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕುಳಿತಿದೆ. ಆದರೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತದೆ ಎಂದು ಆರೋಪಿಸಿರುವುದು ಅವರ ಹತಾಶ ಸ್ಥಿತಿಯನ್ನು ತೋರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.