ಸುರತ್ಕಲ್: ಕಳೆದ 28 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲುತ್ತಾ ಬರುತ್ತಿದ್ದು ಜನಾಶೀರ್ವಾದದಿಂದ ಜಿಲ್ಲೆಯನ್ನು ನಂ 1 ಸ್ಥಾನದಲ್ಲಿ ನಿಲ್ಲಿಸಲು ಶ್ರಮಿಸುತ್ತೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಬಿಜೆಪಿ ಮಂಗಳೂರು ಉತ್ತರ ಮಂಡಲವು ರವಿವಾರ ಆಯೋಜಿಸಿದ್ದ ವಿಜಯೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸುಳ್ಯದಲ್ಲಿ ಬಿಜೆಪಿ ಭಾರೀ ಬಹುಮತ ಪಡೆಯುತ್ತಾ ಬಂದಿದೆ. ಇದೀಗ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವೂ ಅತ್ಯ ಧಿಕ ಬಹುಮತ ನೀಡಿ ಮತದಾರರು ನನ್ನ ಕೈ ಹಿಡಿದಿದ್ದಾರೆ. ಶಾಸಕ ಡಾ| ಭರತ್ ಶೆಟ್ಟಿ ಅವರ ಅತ್ಯತ್ತಮ ಜನಪರ ಕಾಳಜಿಯಿಂದ ಈ ಮುನ್ನಡೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಭವ್ಯ ಪ್ರಗತಿ ಕಾಣಲಿದೆ. ಅಭಿವೃದ್ಧಿಯಲ್ಲಿ ಈ ಕ್ಷೇತ್ರವನ್ನೂ ವಿಶೇಷವಾಗಿ ಪರಿಗಣಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತೇನೆ ಎಂದರು.
ಶಾಸಕ ಡಾ| ಭರತ್ ಶೆಟ್ಟಿ ವೈ. ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ದೇಶದಲ್ಲಿ ಬಂದಿದ್ದು ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ಜಿಲ್ಲೆ ಹೆಚ್ಚಿನ ಅಭಿವೃದ್ಧಿ ಕಾಣಲಿದೆ ಎಂದರು.
ಜಗದೀಶ ಶೇಣವ, ಈಶ್ವರ್ ಕಟೀಲು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಕಿಶೋರ್ ಕುಮಾರ್, ತಿಲಕ್‌ರಾಜ್ ಕೃಷ್ಣಾಪುರ, ರಣದೀಪ್ ಕಾಂಚನ್, ಸುಮಿತ್ರಾ ಕೆ., ರಘುವೀರ್ ಪಣಂಬೂರು, ಅಶೋಕ್ ಕೃಷ್ಣಾಪುರ, ಸುಧಾಕರ ಅಡ್ಯಾರ್, ಗುರುಚಂದ್ರ ಹೆಗ್ಡೆ ಗಂಗಾರಿ, ವಿಠಲ ಸಾಲಿಯಾನ್, ಅರುಣ್ ಚೌಟ ಮೊದಲಾದವರು ಉಪಸ್ಥಿತರಿದ್ದರು.