ವಿಧಾನಸಭೆ: ಸಿಎಂ ಯಡಿಯೂರಪ್ಪ, ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿದೆ ಎನ್ನುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲು, ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದಿರುವುದು ಬಾಲಿಶ ಹೇಳಿಕೆ. ಇದರಿಂದ ಅವರಿಗೆ ಬಜೆಟ್, ಆರ್ಥಿಕ ಸ್ಥಿತಿ ಗೊತ್ತಿಲ್ಲ ಎಂದರ್ಥವಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಧನವಿನಿಯೋಗ ವಿಧೇಯಕ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ಮುಖ್ಯಮಂತ್ರಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಚೆನ್ನಾಗಿದ್ದು, ಮೋಟಾರು ವಾಹನ ತೆರಿಗೆ ಹೊರತುಪಡಿಸಿ, ಇತರೆ ಆದಾಯ ಸಂಗ್ರಹಣೆ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಆದರೆ ಪಕ್ಷದ ರಾಜ್ಯಾಧ್ಯಕ್ಷರು ಖಜಾನೆ ಖಾಲಿಯಾಗಿದೆ ಎಂದು ಆರೋಪಿಸಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಆಗ ಸಿಎಂ ಯಡಿಯೂರಪ್ಪ ಉತ್ತರಿಸಿ, ರಾಜ್ಯದಲ್ಲಿ ನೆರೆ ಕಾಣಿಸಿಕೊಂಡಿದೆ. ಪರಿಹಾರ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಶಾಸಕರು ತಮ್ಮ ಕ್ಷೇತ್ರಗಳ ಇತರೆ ಕಾರ್ಯಕ್ರಮಗಳಿಗೆ ಅನುದಾನ ಕೇಳಿದಾಗ ಸದ್ಯ ನೆರೆ ಪರಿಹಾರಕ್ಕೆ ಒತ್ತು ನೀಡಲಾಗುತ್ತಿದೆ. ಡಿಸೆಂಬರ್‌ವರೆಗೂ ಕಾಲಾವಕಾಶ ಕೊಡಿ ಎಂದು ಹೇಳಿದ್ದೇನೆಯೇ ಹೊರತು ಹಣಕಾಸಿನ ಸ್ಥಿತಿ ಸರಿಯಿಲ್ಲ ಎಂದು ಹೇಳಿಲ್ಲ. ಮೋಟಾರು ವಾಹನ ತೆರಿಗೆ ಆದಾಯ ಕುಗ್ಗಿದ್ದು, ವರ್ಷಾಂತ್ಯದ ವೇಳೆಗೆ ನಿಗದಿತ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೆ ಸಮಾಧಾನಗೊಳ್ಳದ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷರು ಸರ್ಕಾರದ ಖಜಾನೆ ಖಾಲಿಯಾಗಿದೆ. ಹಿಂದಿನವರು ಖಜಾನೆ ಲೂಟಿ ಹೊಡೆದಿದ್ದಾರೆ ಎಂದು ಹೇಳಿಕೆ ನೀಡಿದ್ದಕ್ಕೆ ನನ್ನ ಆಕ್ಷೇಪವಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹಿಂದಿನಿಂದಲೂ ಉತ್ತಮವಾಗಿದೆ. ಈ ಬಗ್ಗೆ ದಿವಂಗತ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ, ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಹಿಂದೆ ನನ್ನ ಬಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಸ್ಮರಿಸಿದರು.
ಗುಡುಗು-ಮಿಂಚು ಕಾಣುತ್ತಿಲ್ಲ: ಉದ್ಯೋಗ ಖಾತರಿ ಯೋಜನೆಯಡಿ ಇನ್ನೂ 1000 ಕೋಟಿ ರೂ. ಕೇಂದ್ರದಿಂದ ಬರಬೇಕಿದೆ. ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದಾರೆ. ಆದರೆ ನನಗೆ ಮೊದಲಿನ ಯಡಿಯೂರಪ್ಪ ಕಾಣುತ್ತಿಲ್ಲ ಎಂದು ಸ್ವಲ್ಪ ಜಬರ್‌ದಸ್ತಿಯಿಂದಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಧನವಿನಿಯೋಗ ವಿಧೇಯಕದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ನಾನೂ ಸ್ವಲ್ಪ ಮೃದುವಾಗಿದ್ದೇನೆ. ಆದರೆ ಯಡಿಯೂರಪ್ಪ ಅವರು ಮೆತ್ತಗಾಗಬಾರದು. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಗುಡುಗುತ್ತಾರೆ ಎನ್ನುತ್ತಿದ್ದರು.
ಆದೇಕೋ ಏನೋ ಈಗ ಗುಡುಗು, ಮಿಂಚು ಏನೂ ಕಾಣುತ್ತಿಲ್ಲ ಎಂದು ಕಾಲೆಳೆದರು. ಆಗ ಸಚಿವ ಜೆ.ಸಿ.ಮಾಧುಸ್ವಾಮಿ, ಯಡಿಯೂರಪ್ಪ ಗುಡುಗು ಕಡಿಮೆಯಾಗಿರಬಹುದು, ಮಿಂಚು ಇದೆ ಎಂದು ಸಮರ್ಥಿಸಿಕೊಂಡರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೊದಲು ನೀವು ಗಡ್ಡ ಬಿಟ್ಟು ರೆಬೆಲ್ ಆಗಿದ್ದಿರಿ. ಈಗ ರೆಬೆಲ್ ಇಲ್ಲ, ಗಿಬೆಲ್ ಇಲ್ಲ. ನೀವು ಮೆತ್ತಗಾಗಿದ್ದೀರಿ ಎಂದು ಛೇಡಿಸಿದರು. ಆಗ ಸಿದ್ದರಾಮಯ್ಯ, ನಾನು ಮೆತ್ತಗಾಗಿದ್ದೀನಿ. ನೀನು ಇನ್ನು ಮೆತ್ತಗಾಗಿಲ್ಲವಲ್ಲ ಎಂಬುದೇ ನನಗೆ ಬೇಸರ ಎಂದು ಹೇಳಿ ನಕ್ಕರು.
ನೆರೆ ಪರಿಹಾರಕ್ಕೆ ಕೇಂದ್ರದಿಂದ 10,000 ಕೋಟಿ ರೂ. ಪರಿಹಾರ ಪಡೆಯಬೇಕು. ರಾಜ್ಯ ಸರ್ಕಾರವೂ 10,000 ಕೋಟಿ ರೂ. ನೆರೆ ವಿನಿಯೋಗಿಸಬೇಕು. ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿ ಮನೆ ನಿರ್ಮಿಸಿ ಕೊಡಿ. ಹದಗೆಟ್ಟಿರುವ ಕೃಷಿ ಭೂಮಿ ಹಸನಗೊಳಿಸಿ ನೆರವಾದರೆ ಜನ ಮೆಚ್ಚುತ್ತಾರೆ.
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ